ಮತದಾರರ ಮಾಹಿತಿ ಸೋರಿಕೆಯ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು (ನ.20): ಮತದಾರರ ಮಾಹಿತಿ ಸೋರಿಕೆಯ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಸೋರಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯವರು ಯಾರೆಂದು ಗೊತ್ತಿಲ್ಲ ಎಂದು ಹೇಳುವುದಿಲ್ಲ, ಅವರು ನನ್ನ ಪರಿಚಯಸ್ಥರೇ. 

ಅವರನ್ನು ನಾನು ಯಾರಿಗೂ ಶಿಫಾರಸು ಮಾಡಿಲ್ಲ, ನಾನು ಅವರನ್ನು ಯಾವುದಕ್ಕೂ ಬಳಕೆಯೂ ಮಾಡಿಲ್ಲ ಎಂದರು. ಚಿಲುಮೆ ಸಂಸ್ಥೆ ಕಚೇರಿಯಲ್ಲಿ ತಮ್ಮ ಚೆಕ್‌ ಸಿಕ್ಕಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ್‌, ನನ್ನ ಹೆಸರಿನ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಕೊಡುತ್ತದೆ. ಇದಕ್ಕಾಗಿ ಮೊದಲು ನಾವು ಚೆಕ್‌ ನೀಡುತ್ತಿದ್ದೆವು. ಈಗ ಎಲ್ಲವೂ ಅನ್‌ಲೈನ್‌ನಲ್ಲೇ ನಡೆಯುತ್ತದೆ ಎಂದು ಹೇಳಿದರು. ಬಾಡಿಗೆಗೆ ಜನ ಬೇಕಾಗುವುದು ಕಾಂಗ್ರೆಸ್‌ ಪಕ್ಷಕ್ಕೆ. ಅದು ಕಾರ್ಯಕರ್ತರಿಲ್ಲದ ಪಕ್ಷ. ಚುನಾವಣಾ ಅಕ್ರಮಗಳನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿರುವ ಪಕ್ಷವದು. 

ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ನನ್ನ ಕ್ಷೇತ್ರದ ಸಂಬಂಧ ಯಾವುದಾದರೂ ಆರೋಪ ಬಂದಿದೆಯಾ ಎಂದು ಪ್ರಶ್ನಿಸಿದ ಅವರು, ಯಾವುದನ್ನೂ ಮುಚ್ಚಿಡುವ ಉದ್ದೇಶ ಸರ್ಕಾರಕ್ಕಿಲ್ಲ. ಚುನಾವಣಾ ಅಕ್ರಮಗಳು ಕಾಂಗ್ರೆಸ್‌ಗೆ ಬೇಕು. ಅದು ಅಸ್ತಿತ್ವ, ಸಿದ್ಧಾಂತ, ಕಾರ್ಯಕರ್ತರು ಇಲ್ಲದ ಪಕ್ಷ ಎಂದು ಕಿಡಿಕಾರಿದರು. ಬಿಬಿಎಂಪಿ ತನಿಖೆಗೆ ದೂರು ದಾಖಲಿಸಿದೆ. ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿ ಏನು ಬಯಸಿದೆ ಎಂಬುದು ಗೊತ್ತಿಲ್ಲ. ಚುನಾವಣಾ ಆಯೋಗದ ಅವಶ್ಯಕ ಪ್ರಕ್ರಿಯೆಯನ್ನು ಸಂಸ್ಥೆ ಮಾಡುತ್ತಿದೆ. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್‌ಒ ನೇಮಕಕ್ಕೆ ಅವಕಾಶ ಇದೆ. 

ಮತದಾರರನ್ನು ಸೇರಿಸಲು, ಡಿಲೀಟ್‌ ಮಾಡಲು ನಮಗೆ ಅವಕಾಶ ಇಲ್ಲ. ಈಗ ನಡೆಯುತ್ತಿರುವ ಪ್ರಕ್ರಿಯೆ ಆಧಾರ್‌ ಅಪ್‌ಡೇಟ್‌ಗೆ ಸಂಬಂಧಿಸಿದ್ದು. ಹಾಗಾಗಿ ಅಂಥ ಅಕ್ರಮ ಮಾಡುವ ಉದ್ದೇಶ ಇದ್ದಿದ್ದರೆ ತನಿಖೆಗೆ ಆದೇಶ ಯಾಕೆ ಮಾಡುತ್ತಿದ್ದೆವು ಎಂದು ಅಶ್ವತ್ಥ ನಾರಾಯಣ್‌ ಪ್ರಶ್ನಿಸಿದರು. ಇದೇ ವೇಳೆ, ನನ್ನ ಕ್ಷೇತ್ರದಲ್ಲೂ ಕಾಂಗ್ರೆಸ್‌ನಿಂದ ಮನೆ ಮನೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದು, ಇದರ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಚಿಲುಮೆಗೆ ಗುತ್ತಿಗೆ ನೀಡಿದ್ದು ಕಾಂಗ್ರೆಸ್‌: ಮತದಾರರ ಪಟ್ಟಿಪರಿಷ್ಕರಣೆ ಹೆಸರಲ್ಲಿ ಮತದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಲು ಸ್ವತಂತ್ರರಿದ್ದಾರೆ. ಆದರೆ, ಇದೇ ಚಿಲುಮೆ ಸಂಸ್ಥೆಗೆ 2013ರಿಂದ 18ರವರೆಗೂ ಪರಿಷ್ಕರಣೆ ಗುತ್ತಿಗೆ ನೀಡಲಾಗಿದೆ. ಆಗ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿದ್ದು, ಯಾಕೆ ವಿರೋಧ ಮಾಡಲಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಪ್ರಶ್ನಿಸಿದರು.

ವಾಟರ್‌ಗೇಟ್‌ ರೀತಿ ವೋಟರ್‌ಗೇಟ್‌ ಹಗರಣ: ಸಿದ್ದರಾಮಯ್ಯ

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಬಿಎಂಪಿಯವರು ನಿರ್ದಿಷ್ಟಕಾರಣಗಳಿಗೆ ಗುತ್ತಿಗೆ ನೀಡಿರುತ್ತಾರೆ. ಅದನ್ನು ಮೀರಿ ವರ್ತಿಸಿದ್ದರೆ ಸಂಸ್ಥೆ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಚುನಾವಣೆ ಆಯೋಗ ಕಳುಹಿಸಿದ್ದ ಪತ್ರದಂತೆ ಬಿಬಿಎಂಪಿಯವರು ಗುತ್ತಿಗೆ ಸಂಸ್ಥೆಗೆ ಆದೇಶ ನೀಡಿದ್ದಾರೆ. ಇದನ್ನು ಮೀರಿ ಗುತ್ತಿಗೆ ಸಂಸ್ಥೆ ವರ್ತಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇಡೀ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತರ ಪಾತ್ರ ಇಲ್ಲದಿರುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.