ವಾಟರ್‌ಗೇಟ್ ರೀತಿ ವೋಟರ್‌ಗೇಟ್ ಹಗರಣ: ಸಿದ್ದರಾಮಯ್ಯ
ಅಮೆರಿಕದ ವಾಟರ್ ಗೇಟ್ ಹಗರಣದ ರೀತಿಯಲ್ಲೇ ಭಾರತದಲ್ಲಿ ‘ವೋಟರ್ ಗೇಟ್’ ಹಗರಣ ನಡೆದಿದೆ. ಚುನಾವಣಾ ಆಯೋಗಕ್ಕೆ ದೂರು ನೀಡಿ ನ್ಯಾಯಾಂಗ ತನಿಖೆಗೆ ನೀವೇ ಒಪ್ಪಿಸಬಹುದು ಎಂದು ಸಿಎಂಗೆ ಮನವಿ ಮಾಡಿದ್ದೇವೆ.
ಬೆಂಗಳೂರು (ನ.20): ‘ಅಮೆರಿಕದ ವಾಟರ್ ಗೇಟ್ ಹಗರಣದ ರೀತಿಯಲ್ಲೇ ಭಾರತದಲ್ಲಿ ‘ವೋಟರ್ ಗೇಟ್’ ಹಗರಣ ನಡೆದಿದೆ. ಚುನಾವಣಾ ಆಯೋಗಕ್ಕೆ ದೂರು ನೀಡಿ ನ್ಯಾಯಾಂಗ ತನಿಖೆಗೆ ನೀವೇ ಒಪ್ಪಿಸಬಹುದು ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಅವರು ಸೂಕ್ತ ಸ್ಪಂದನೆ ನೀಡದಿದ್ದರೆ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ‘ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯ. ಈ ಹಗರಣದಲ್ಲಿ ಅವರೇ ಕಿಂಗ್‌ಪಿನ್. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದುಕೊಂಡು ಇಂತಹ ಅಕ್ರಮ ನಡೆದಾಗ ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇರುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜಗತ್ತಿನಲ್ಲಿ ಇಂತಹ ಪ್ರಕರಣಗಳು ನಡೆಯುವುದು ಬಹಳ ಅಪರೂಪ. ಇದೀಗ ರಾಜ್ಯದಲ್ಲಿ ನಡೆದಿದ್ದು ಹಗರಣದಲ್ಲಿ ಮುಖ್ಯಮಂತ್ರಿಗಳೇ ನೇರವಾಗಿ ಶಾಮೀಲಾಗಿದ್ದಾರೆ. ಮತದಾರರ ಹಕ್ಕನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.
ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ
ಎಫ್‌ಐಆರ್ ದಾಖಲಿಸಬೇಕು: ಈ ಹಗರಣದಲ್ಲಿ ಅಬ್ಬೆಪಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಿದರೆ ಉಪಯೋಗವಿಲ್ಲ. ಮುಖ್ಯಮಂತ್ರಿಗಳೇ ಈ ಸಂಬಂಧ ರಾಜ್ಯಕ್ಕೆ ಉತ್ತರ ನೀಡಬೇಕು. ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟಎಲ್ಲರ ಮೇಲೂ ಎಫ್‌ಐಆರ್ ದಾಖಲಾಗಬೇಕು. ಉಸ್ತುವಾರಿ ಸಚಿವರಾಗಿರುವುದರಿಂದ ಈ ಹಗರಣದಿಂದ ಬೊಮ್ಮಾಯಿ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಎಲ್ಲದಕ್ಕೂ ಹಿಂದಿನ ಸರ್ಕಾರ ಮಾಡಿಲ್ವಾ? ಎಂದು ಕೇಳುತ್ತಾರೆ. ಆಗ ಬೊಮ್ಮಾಯಿ ಅವರು ವಿರೋಧ ಪಕ್ಷದಲ್ಲಿದ್ದು ಮಾತನಾಡದೆ ಸುಮ್ಮನಿದ್ದಿದ್ದು ಏಕೆ? ನಮ್ಮ ಸರ್ಕಾರದ ವಿರುದ್ಧ ಬಂದ ಎಲ್ಲಾ ಆರೋಪಗಳ ಬಗ್ಗೆ ನಾವು ಸಿಬಿಐ ತನಿಖೆಗೆ ವಹಿಸಿದ್ದೆವು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನಮಗೆ ಕ್ಲೀನ್‌ಚಿಟ್ ನೀಡಿದೆ. ಈಗ ಬೊಮ್ಮಾಯಿ ಅವರೂ ತನಿಖೆ ಎದುರಿಸಿ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಕೃಷ್ಣಪ್ಪ, ರವಿಕುಮಾರ್ ಅವರ ಚಿಲುಮೆ ಸಂಸ್ಥೆಯ ಮೇಲೆ ಈವರೆಗೆ ಕೇಸ್ ದಾಖಲಿಸಿಲ್ಲ. ಅವರ ಬಂಧನ ಆಗಿಲ್ಲ. ಬಿಬಿಎಂಪಿ ಆಯುಕ್ತರ ಬಂಧಿಸಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ಪ್ರಕರಣದ ತನಿಖೆಯನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಿದ್ದಾರೆ. ಒಬ್ಬ ಪ್ರಾದೇಶಿಕ ಆಯುಕ್ತ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡಿ ಶಿಕ್ಷೆ ನೀಡಲು ಆಗುತ್ತದೆಯೇ? ಇದು ಹಾಸ್ಯಾಸ್ಪದ ಅಲ್ಲವೇ? ಎಂದು ಪ್ರಶ್ನಿಸಿದರು.
ವರುಣಾ ಕ್ಷೇತ್ರದತ್ತ ಸಿದ್ದರಾಮಯ್ಯ ಒಲವು?: ಕೋಲಾರದಲ್ಲಿ ಒಳೇಟಿನ ಭೀತಿ
ನಾವು ನೀಡಿರುವ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ದೂರು ದಾಖಲಿಸಿ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಕ್ಷದ ಹಲವು ಶಾಸಕರು ಬಂದು ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಆಯೋಗ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂದು ನೋಡುತ್ತೇವೆ. ಸ್ಪಂದಿಸದಿದ್ದರೆ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ ಎಂದರು.