Basava mantapa book controversy ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ 'ಬಸವ ಮಂಟಪ' ಕೃತಿಯ ಬಗ್ಗೆ ವಿವಾದ ಭುಗಿಲೆದ್ದಿದೆ. ಜನಾಕ್ರೋಶ ಹಾಗೂ ಸರ್ಕಾರದ ಎಫ್ಐಆರ್ ಬೆನ್ನಲ್ಲೇ ಲೇಖಕ ರವಿ ಹಂಜ್ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಬೆಂಗಳೂರು (ನ.21): ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ ತಮ್ಮ ‘ಬಸವ ಮಂಟಪ’ ಕೃತಿ ಹಾಗೂ ತಮ್ಮ ಹೇಳಿಕೆ ವಿರುದ್ಧ ಜನಾಕ್ರೋಶ ತೀವ್ರ ಸ್ವರೂಪಕ್ಕೆ ತಿರುಗಿದ ಬೆನ್ನಲ್ಲೇ ವಿವಾದಿತ ಕೃತಿಯ ಕರ್ತೃ ರವಿ ಹಂಜ್ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.
ವಿವಾದ ತೀವ್ರ ಸ್ವರೂಪ ಪಡೆದ ಬಳಿಕ ಎಚ್ಚೆತ್ತ ಸರ್ಕಾರ ಲೇಖಕನ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ರವಿ ಹಂಜ್ ಅಜ್ಞಾತ ಸ್ಥಳದಿಂದ ಕ್ಷಮಾಪಣೆ ಕೋರಿ ಬಿಡುಗಡೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಎಫ್ಐಆರ್ ದಾಖಲಿಸುವ ಮೊದಲು ಬಿಡುಗಡೆಯಾದ ವಿಡಿಯೋ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ನಾನು ಖಾಸಗಿ ಟಿವಿ ಸಂದರ್ಶನದಲ್ಲಿ ಜಗಜ್ಯೋತಿ ಬಸವೇಶ್ವರರ ಕುರಿತು ಮಾತನಾಡಿದ್ದನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ. ಇದರಿಂದ ವೀರಶೈವ ಲಿಂಗಾಯತ ಬಂಧುಗಳಿಗೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಅಷ್ಟೇ ಅಲ್ಲದೆ ಕ್ಷಮೆಯನ್ನೂ ಯಾಚಿಸುತ್ತೇನೆ ಎಂದು ರವಿಹಂಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಮರು ಬಿಡುಗಡೆ ಹೇಳಿಕೆಗೂ ಆಕ್ರೋಶ:
ಅಲ್ಲದೆ, ಇದೇ ವಿಡಿಯೋದಲ್ಲಿ ಬಸವಮಂಟಪ ಕೃತಿಯನ್ನು ಪ್ರತಿ ಜಿಲ್ಲೆಯಲ್ಲೂ ಮರು ಬಿಡುಗಡೆ ಮಾಡುವಂತೆ ನೀವೆಲ್ಲರೂ ಬಯಸಿದ್ದೀರಿ. ಅದರಂತೆ ಮರುಬಿಡುಗಡೆ ಕಾರ್ಯಕ್ರಮವನ್ನು ಸದ್ಯದಲ್ಲೇ ಆಯೋಜಿಸಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರವಿರಲಿ ಎಂದೂ ಹೇಳಿದ್ದಾರೆ. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬಸವಣ್ಣನವರ ಬಗ್ಗೆ ‘ಕಳ್ಳ, ಕೊಲೆಗಾರ, ದರೋಡೆಕೋರ’ ಎಂಬೆಲ್ಲ ಅವಹೇಳನಕಾರಿ ಅಂಶಗಳಿರುವ ವಿವಾದಿತ ಕೃತಿ ಮತ್ತು ಅದರ ಲೇಖಕನ ವಿರುದ್ಧ ವೀರಶೈವ ಲಿಂಗಾಯತ ಸೇರಿ ಅನೇಕ ಸಮುದಾಯಗಳ ಜನ ತೀವ್ರ ಆಕ್ರೋಶ, ಖಂಡನೆ ವ್ಯಕ್ತಪಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕೃತಿ ಮುಟ್ಟುಗೋಲು ಹಾಕಿಕೊಂಡು ಲೇಖಕ ರವಿ ಹಂಜ್ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿತ್ತು.
ಆಕ್ರೋಶ ತೀವ್ರ ಸ್ವರೂಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವ ಮಂಟಪ ಕೃತಿ ಮುಟ್ಟುಗೋಲು ಹಾಕಿಕೊಂಡು ಅದರ ಲೇಖಕ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿತ್ತು. ಅದರಂತೆ ಎಫ್ಐಆರ್ ಕೂಡ ದಾಖಲಿಸಿ ತನಿಖೆ ನಡೆಸಲಾಗಿದೆ.
ರವಿ ಹಂಜ್ ವಿರುದ್ಧ ರಾಜ್ಯದ 6 ಕಡೆ ಎಫ್ಐಆರ್
ರಾಜ್ಯದ ಸಾಂಸ್ಕೃತಿಕ ನಾಯಕ, ಕಾಯಕಯೋಗಿ, ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಮತ್ತು ಸಂದರ್ಶನ ಪ್ರಕಟಿಸಿ ಅವಮಾನ ಮಾಡಿರುವುದನ್ನು ಖಂಡಿಸಿ, ಲೇಖಕ ರವಿ ಹಂಜ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ಶುಕ್ರವಾರ ಪ್ರತಿಭಟನೆಗಳು ನಡೆದವು. ಅಲ್ಲದೆ, ಈ ಘಟನೆಯನ್ನು ಲಿಂಗಾಯತ ಸಮಾಜದ ಧರ್ಮಗುರುಗಳು, ಪಕ್ಷಾತೀತವಾಗಿ ರಾಜಕೀಯ ನಾಯಕರು ಖಂಡಿಸಿದ್ದು, ಬಸವಣ್ಣನವರ ಘನತೆಗೆ ಚ್ಯುತಿ ತಂದ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ, ಬೆಳಗಾವಿ, ವಿಜಯಪುರ, ಬಸವನಬಾಗೇವಾಡಿ, ಚನ್ನಗಿರಿ, ಚಾಮರಾಜನಗರ, ದಾವಣಗೆರೆಗಳಲ್ಲಿ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ.
‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಬಂಧನಕ್ಕೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ಮೈಸೂರಿನ ಗನ್ ಹೌಸ್ ಬಳಿಯ ಬಸವೇಶ್ವರ ಪ್ರತಿಮೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು, ವಿವಾದಿತ ಕೃತಿ, ಲೇಖಕ ರವಿ ಹಂಜ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಕೊಪ್ಪಳ ಬಸವತತ್ವ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿಜಯಪುರದಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರಾಷ್ಟ್ರೀಯ ಬಸವ ಸೇನೆಯವರು, ರವಿ ಹಂಜ್ ಗಡೀಪಾರಿಗೆ ಆಗ್ರಹಿಸಿದರು. ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹಾಗೂ ಅಥಣಿಯ ಮೊಟಗಿ ಮಠದ ಚನ್ನಬಸವ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಕಲಬುರಗಿ, ಬೀದರ್, ಇಂಡಿ, ರಾಯಚೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು. ಈ ಮಧ್ಯೆ, ಶನಿವಾರ ಚನ್ನಗಿರಿಯಲ್ಲಿ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಕ್ಷಾತೀತವಾಗಿ ನಾಯಕರ ಖಂಡನೆ:
ಇದೇ ವೇಳೆ, ಬಸವಣ್ಣಗೆ ಅವಮಾನ ಮಾಡಿರುವುದನ್ನು ಪಕ್ಷಾತೀತವಾಗಿ ರಾಜಕೀಯ ನಾಯಕರು ಖಂಡಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಮಾಜಿ ಸಿಎಂ, ಬಸವರಾಜ ಬೊಮ್ಮಾಯಿ, ವಿವಾದಾತ್ಮಕ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್, ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ, ಇದು ಕರ್ನಾಟಕದ 7 ಕೋಟಿ ಕನ್ನಡಿಗರು ಹಾಗೂ ವಿಶ್ವದಾದ್ಯಂತ ಇರುವ ಬಸವಣ್ಣನವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ್, ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಅವರ ವಚನಗಳನ್ನು ತಪ್ಪಾಗಿ ವಿಶ್ಲೇಷಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಲೇಖಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಬೀದರ್ನಲ್ಲಿ ಮಾತನಾಡಿದ ಬಸವ ಮಹಾಮನೆಯ ಅಲ್ಲಮಪ್ರಭು ಶೂನ್ಯಪೀಠದ ಅಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ, ಗದಗದ ತೋಂಟದ ಸಿದ್ದರಾಮ ಶ್ರೀ ಕೂಡ ಲೇಖಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎಫ್ಆರ್:
ಇದೇ ವೇಳೆ, ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು ನೀಡಿದ ದೂರಿನ ಮೇಲೆ ರವಿ ಹಂಜ್ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆ, ಬಸವನಬಾಗೇವಾಡಿ ಪೊಲೀಸ್ ಠಾಣೆ, ಎಸ್ಸಿ, ಎಸ್ಟಿ ಕಾಯ್ದೆಯಡಿ ಚನ್ನಗಿರಿ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ಗಳು ದಾಖಲಾಗಿವೆ. ಚಾಮರಾಜನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಎಸ್ಪಿ ಮುತ್ತುರಾಜು ಅವರಿಗೆ ದೂರು ನೀಡಲಾಗಿದೆ.















