Asianet Suvarna News Asianet Suvarna News

ದಲಿತ ಸಮುದಾಯ ತುಳಿಯುವ ಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯಗೆ ನಮ್ಮ ಧಿಕ್ಕಾರ: ಬಂಜಾರ ಸಮುದಾಯ

ಸಿದ್ದರಾಮಯ್ಯ ಸರ್ಕಾರ ಕೇವಲ ವೋಟ್ ಬ್ಯಾಂಕ್‌ಗಾಗಿ ಸರ್ಕಾರ ನಡೆಸುತ್ತಿದ್ದು, ಸಾಮಾಜಿಕ ನ್ಯಾಯ ಕೇವಲ ಭಾಷಣಕಷ್ಟೇ ಮಾತ್ರ ಸೀಮಿತವಾಗಿದೆ ಎಂದು ದೂರಿದ ಡಾ.ಬಾಬುರಾಜೇಂದ್ರ ಬಿ.ನಾಯಿಕ 

Banjara Community Slams CM Siddaramaiah grg
Author
First Published Feb 6, 2024, 10:23 PM IST

ಮುದ್ದೇಬಿಹಾಳ(ಫೆ.06): ಪಟ್ಟಣದಲ್ಲಿ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕರಿಸಿ ಬಂಜಾರ ಸಮುದಾಯದ ಮುಖಂಡರು ಹಾಗೂ ಯುವಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡ, ವಿಜಯಪುರ ಲೋಕಸಭಾ ಕ್ಷೇತ್ರ(ಮೀಸಲು) ಜಿಲ್ಲಾ ಸಂಚಾಲಕರು, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಡಾ.ಬಾಬುರಾಜೇಂದ್ರ ಬಿ.ನಾಯಿಕ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಕೇವಲ ವೋಟ್ ಬ್ಯಾಂಕ್‌ಗಾಗಿ ಸರ್ಕಾರ ನಡೆಸುತ್ತಿದ್ದು, ಸಾಮಾಜಿಕ ನ್ಯಾಯ ಕೇವಲ ಭಾಷಣಕಷ್ಟೇ ಮಾತ್ರ ಸೀಮಿತವಾಗಿದೆ ಎಂದು ದೂರಿದರು.

ತಾನು ಹಿಂದುಳಿದ ಸಮುದಾಯದಿಂದ ಬಂದವರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಹಿಂದುಳಿದ ಸಮಾಜವಾದ ಬಂಜಾರ ಸಮಾಜಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ತಾರಾತುರವಾಗಿ ಒಳ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ದ ನಡೆ ಅವೈಜ್ಞಾನಿಕವಾಗಿದೆ. ಇದನ್ನು ರಾಜ್ಯಾದ್ಯಂತ ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಈಗಾಗಲೇ ಮುಗಿದು ಹೋದ ಕಥೆಯಾಗಿರುವ ನ್ಯಾ.ಸದಾಶಿವ ಆಯೋಗಕ್ಕೆ ಮರುಜೀವ ನೀಡಿ, ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಲು ಮುಂದಾಗಿದೆ. ಆ ಮೂಲಕ ಸಮಸ್ತ ದಲಿತ ಸಮುದಾಯವನ್ನು ಒಡೆಯಲು ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಎಚ್ಚರಿಕೆ ನೀಡಲು, ಕಪ್ಪು ಬಾವುಟ ಪ್ರರ್ದಶಿಸಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಬಂಜಾರ ಸಮುದಾಯದ ಮುಖಂಡರನ್ನು ಬಂಧಿಸಿದ್ದಾರೆ ಎಂದು ಕಿಡಿಕಾರಿದರು.

ಒಳಮೀಸಲಾತಿಯಲ್ಲಿ ಬಂಜಾರಾ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್‌ ಮಾಡಿರುವ ಒಳಮೀಸಲಾತಿಯನ್ನು ಹಿಂದಕ್ಕೆ ಪಡೆಯಬೇಕು. ಒಂದು ವೇಳೆ ಪಡೆಯದೆ ಇದ್ದರೇ ರಾಜ್ಯಾದಂತ ಬಂಜಾರ ಸಮುದಾಯ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಾ.ಬಸವರಾಜ್ ಚೌಹಾಣ್, ರಾಕೇಶ ರಜಪೂತ್, ಶಿವಾನಂದ ಲಮಾಣಿ, ಶಿವರಾಜ ರಾಠೋಡ್, ಮೋಹನ್ ಚವಾಣ್, ಕೃಷ್ಣ ಜಾಧವ್, ಪವನ್ ಕುಮಾರ್ ಲಮಾಣಿ ಸಚಿನ ಚವ್ಹಾಣ ಸೇರಿದಂತೆ ಅನೇಕ ಪ್ರತಿಭಟನಾಕಾರರು ಉಪಸ್ಥಿತರಿದ್ದು, ಬಂಧನಕ್ಕೊಳಗಾದರು.

ಡಿ.ಕೆ.ಶಿವಕುಮಾರ್‌ಗೆ ಮುಜುಗರ ತಂದ ಎರಡು ಬಣಗಳ ಸ್ವಾಗತ

ಪ್ರತಿಭಟನಾಕರರನ್ನು ವಶಕ್ಕೆ ಪಡೆದ ಪೊಲೀಸರು

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಬಂಜಾರ ಯುವಕರು ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಂತೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪೊಲೀಸ್‌ರ ಕ್ರಮವನ್ನು ಪ್ರತಿಭಟಿಸಿದ ಬಂಜಾರ ಪ್ರತಿಭಟನಾಕಾರರು, ನ್ಯಾಯ ನೀಡಬೇಕಾಗಿರುವ ಸರ್ಕಾರ ನ್ಯಾಯ ಕೋರುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ನಡೆಗಳ ಮೂಲಕ ಕಾಂಗ್ರೆಸ್ ಸರ್ಕಾರ ತಾನು ಜನ ವಿರೋಧಿ ಎಂಬುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಿದ್ದರಾಮಯ್ಯನವರು ದಲಿತ ಸಮುದಾಯವನ್ನು ಒಡೆಯುವ ದುರಾಲೋಚನೆ ಬಿಡದಿದ್ದರೇ ಇನ್ನು ಮುಂದೆ ಅವರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ತೆರಳಿ, ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಅಷ್ಟೇ ಅಲ್ಲ, ಅವರ ಕಾರ್ಯಕ್ರಮ ನಡೆಯಲೂ ಬಿಡುವುದಿಲ್ಲ. ದಲಿತ ಸಮುದಾಯ, ಅದರಲ್ಲೂ ಹಿಂದುಳಿದ ದಲಿತ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯನವರಿಗೆ ನಮ್ಮ ಧಿಕ್ಕಾರವಿದೆ ಎಂದು  ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವಿಜಯಪುರ ಲೋಕಸಭಾ ಕ್ಷೇತ್ರ(ಮೀಸಲು) ಜಿಲ್ಲಾ ಸಂಚಾಲಕರು ಡಾ.ಬಾಬುರಾಜೇಂದ್ರ ಬಿ.ನಾಯಿಕ ತಿಳಿಸಿದ್ದಾರೆ. 

Follow Us:
Download App:
  • android
  • ios