ಡಿ.ಕೆ.ಶಿವಕುಮಾರ್‌ಗೆ ಮುಜುಗರ ತಂದ ಎರಡು ಬಣಗಳ ಸ್ವಾಗತ

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಲವಾರು ಮುಖಂಡರು ಶ್ರಮಿಸಿದರು. ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದರು. ಹೈಕ್‌ಮಾಂಡ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನವಿಗೆ ಸ್ಪಂದಿಸದೇ ಟಿಕೆಟ್ ಘೋಷಣೆಯಿಂದ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಮನೆ ಒಂದು ಮೂರು ಬಾಗಿಲು ಎಂಬಂತಾಗಿದೆ. 

Embarrassing Welcome from Two Teams for DK Shivakumar in Vijayapura grg

ದೇವರಹಿಪ್ಪರಗಿ(ಫೆ.04): ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಕಾಂಗ್ರೆಸ್ ಪಕ್ಷದ ಎರಡು ಬಣಗಳಿಂದ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಹೀಗಾಗಿ ದೇವರಹಿರಪ್ಪಗಿಯ ಎರಡು ಬಣಗಳ ಸ್ವಾಗತ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಇರಿಸು ಮುರಿಸು ಮಾಡುವುದರೊಂದಿಗೆ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಹೋಗಲು ಕಾರಣವಾಯಿತು.

ದೇವರಹಿಪ್ಪರಗಿ ಪಟ್ಟಣದ ಮಾರ್ಗವಾಗಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕಾರ್ಯಕ್ರಮಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಶನಿವಾರ 1.30 ಗಂಟೆಯ ಸುಮಾರಿಗೆ ಪಟ್ಟಣದ ಐಬಿ ಹತ್ತಿರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ ಯಾಳಗಿ ಹಾಗೂ ಡಾ. ಪ್ರಭುಗೌಡ ಲಿಂಗದಳ್ಳಿ ಅವರ ತಂದೆಯವರಾದ ಬಿ.ಬಿ. ಲಿಂಗದಳ್ಳಿ ಅವರ ನೇತೃತ್ವದ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಮುಖಂಡರಿಂದ ಒಂದು ಬಣ ಸನ್ಮಾನಿಸಿದರೆ, ಇನ್ನೊಂದು ಬಣ ಪಟ್ಟಣದ ಮೊಹರೆ ವೃತ್ತದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ನೇತೃತ್ವದ ಬಣ ಕೆಪಿಸಿಸಿ ಅಧ್ಯಕ್ಷರನ್ನು ಸನ್ಮಾನಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಏನು ಸರಿ ಇಲ್ಲ ಎನ್ನುವುದು ರಾಜ್ಯಾಧ್ಯಕ್ಷರ ಗಮನ ಸೆಳೆದರು. ರಾಜ್ಯದಲ್ಲಿ ಸರ್ಕಾರ ಬಂದರೂ ಕ್ಷೇತ್ರದಲ್ಲಿ ಒಗ್ಗೂಡದ ಕಾಂಗ್ರೆಸ್ ಬಣಗಳನ್ನು ನೋಡಿ ಮತಕ್ಷೇತ್ರದಲ್ಲಿ ಜನ ಗುಸು ಗುಸು ಮಾತನಾಡುತ್ತಿದ್ದರೆ ಇತ್ತ ವಿರೋಧ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷದ ಬಣ ರಾಜಕೀಯನೇ ಅಸ್ತ್ರವಾಗಿಸಿಕೊಂಡಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪುಗಳಾಗಿ ತೆರಳಿ ಸನ್ಮಾನಿಸುವ ಮೂಲಕ ಬಣ ರಾಜಕೀಯಕ್ಕೆ ಪುಷ್ಠಿ ನೀಡಿದೆ.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯ್ತು: ಸಚಿವ ಎಂ.ಬಿ.ಪಾಟೀಲ್‌

ಬಣ ರಾಜಕೀಯ ಲೋಕಸಭೆಗೂ ಮುಂದುವರಿಯುವ ಸಾಧ್ಯತೆ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಜನ ಮುಖಂಡರು ಪಕ್ಷದ ಟಿಕೆಟ್‌ಗಾಗಿ ಹಲವಾರು ಕಸರತ್ತುಗಳನ್ನು ನಡೆಸಿದ್ದರು. ಕೊನೆಯ ಕ್ಷಣದಲ್ಲಿ ಸಿಂದಗಿ ಕ್ಷೇತ್ರದ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಅವರು ಪಕ್ಷದ ಹೈಕಮಾಂಡ್ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ವಿಧಾನಸಭಾ ಚುನಾವಣೆಯಿಂದ ಇಂದಿನವರೆಗೆ ಒಬ್ಬರಿಗೊಬ್ಬರು ಮುಖ ತೋರಿಸಿದ ಹಾಗೆ ಬಣ ರಾಜಕೀಯ ಬೆಳೆದು ನಿಂತಿದೆ. ಈ ವಿಷಯ ರಾಜ್ಯ ಹಾಗೂ ಜಿಲ್ಲಾ ಮುಖಂಡರಿಗೂ ಗೊತ್ತಿದ್ದರೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರು ಯಾರು ಇಲ್ಲದಂತಾಗಿದೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಆಗುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿದೆ.

ಮತಕ್ಷೇತ್ರದಲ್ಲಿ ಬಣಗಳ ಸೃಷ್ಟಿಯಿಂದ ಪಕ್ಷಕ್ಕೆ ಹಿನ್ನೆಡೆ:

ದೇವರಹಿಪ್ಪರಗಿ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆದರೂ ಮುಖಂಡರ ಬಣಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಲು ಪರದಾಡುತ್ತಿದ್ದಾರೆ. ಇದರಿಂದ ಬರುವಂತ ದಿನಗಳಲ್ಲಿ ಲೋಕಸಭೆ, ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಣ್ಣಗಳ ಸೃಷ್ಟಿ ಮತ್ತು ಕಾಂಗ್ರೆಸ್ ಮುಖಂಡರ ವೈಮನಸ್ಸು ಬರುವಂತ ಚುನಾವಣೆಗಳಲ್ಲಿ ಇದರ ಪರಿಣಾಮ ಬೀರಬಹುದು.

ಮುಖಂಡರನ್ನು ಒಗ್ಗೂಡಿಸುವಲ್ಲಿ ಹೈಕಮಾಂಡ್ ವಿಫಲ:

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಲವಾರು ಮುಖಂಡರು ಶ್ರಮಿಸಿದರು. ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದರು. ಹೈಕ್‌ಮಾಂಡ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನವಿಗೆ ಸ್ಪಂದಿಸದೇ ಟಿಕೆಟ್ ಘೋಷಣೆಯಿಂದ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಮನೆ ಒಂದು ಮೂರು ಬಾಗಿಲು ಎಂಬಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 136 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕ್ಷೇತ್ರದ ಸಮಸ್ಯೆಯ ಕುರಿತು ಸಚಿವರು ಇಲ್ಲಿಯವರೆಗೆ ಮತಕ್ಷೇತ್ರದಲ್ಲಿ ಯಾವ ಕಾರ್ಯಕ್ರಮ ಕೊಟ್ಟಿಲ್ಲ ಎಂಬುವುದು ವಿಪರ್ಯಾಸ.

ಕಾಂಗ್ರೆಸ್‌ನಲ್ಲಿ ಏನು ನಡ್ತೀದೆ? 'ಬಿಜೆಪಿ ಸಂಸದರನ್ನು ಗೆಲ್ಲಿಸಿ' ಎಂದ ಶಾಮನೂರು ಪರ ಎಂಬಿ ಪಾಟೀಲ್ ಬ್ಯಾಟಿಂಗ್!

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಸೀರ ಅಹ್ಮದ್ ಬೇಪಾರಿ, ಬಾಳಸಾಹೇಬಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಗನಗೌಡ ಹರನಾಳ, ರಾಜ್ಯ ಯುವ ಜಂಟಿ ಕಾರ್ಯದರ್ಶಿ ಸಂತೋಷ ದೊಡಮನಿ, ಪಪಂ ಸದಸ್ಯರುಗಳಾದ ಉಮೇಶ ರೂಗಿ, ಕಾಶಪ್ಪ ಜಮಾದಾರ, ಕಾಸಿನಾಥ ಭಜಂತ್ರಿ, ಮುಖಂಡರುಗಳಾದ ಬಿ.ಬಿ.ಲಿಂಗದಳ್ಳಿ, ಪ್ರಕಾಶ ಗುಡಿಮನಿ, ಶರಣಗೌಡ ಲಿಂಗದಳ್ಳಿ, ಮುರ್ತುಜಾ ತಾಂಬೋಳಿ, ಸಲೀಂ ವಠಾರ ಸೇರಿದಂತೆ ಪ.ಪಂ ಸದಸ್ಯರು ಹಲವಾರು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಣ ರಾಜಕೀಯಕ್ಕೆ ತೀಲಾಂಜಲಿ ಯಾವಾಗ?

ಬಣ ರಾಜಕೀಯಕ್ಕೆ ತೀಲಾಂಜಲಿ ಹಾಡುವುದು ಯಾವಾಗ? ಇಂತಹದ್ದೊಂದು ಪ್ರಶ್ನೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಏಕೆಂದರೆ, ಬಣ ರಾಜಕೀಯದಲ್ಲಿ ಬಡವಾಗಿರುವವರು ತಟಸ್ಥವಾಗಿರುವ ಮುಖಂಡರು ಹಾಗೂ ಕಾರ್ಯಕರ್ತರು, ಇವರೊಂದಿಗಿದ್ದರೆ ಅವರಿಗೆ ಕೋಪ, ಅವರೊಂದಿಗೆ ಗುರುತಿಸಿಕೊಂಡರೆ ಇವರಿಗೆ ಕೆಂಗಣ್ಣು ಎಂಬಂತ ಪರಿಸ್ಥಿತಿಯಲ್ಲಿ ಪಕ್ಷ ಕಟ್ಟಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ದೇವರಹಿಪ್ಪರಗಿ ಬಣ ರಾಜಕೀಯವನ್ನು ಬಗೆಹರಿಸುವ ಆಸಕ್ತಿ ರಾಜ್ಯದ ಮುಖಂಡರಿಗೂ ಇಲ್ಲ. ಹೈಕ್‌ಮಾಂಡ್ ನಾಯಕರಿಗೂ ಇಲ್ಲವಾಗಿದೆ. ರಾಜ್ಯಾಧ್ಯಕ್ಷರ ಸ್ವಾಗತಕ್ಕಾಗಿ ಎರಡು ಗುಂಪುಗಳಾಗಿ ಸನ್ಮಾನಿಸುವ ಮೂಲಕ ಗಮನ ಸೆಳೆದರು. ಹೀಗಾಗಿ ಮುಗಿಯದ ಲಕ್ಷಣ ಕಾಣುತ್ತಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವರಾರು ಎಂಬಂತೆ ದೇವರ ಹಿಪ್ಪರಗಿ ಕಾಂಗ್ರೆಸ್ ಬಣ ರಾಜಕೀಯಕ್ಕೆ ಅಂತ್ಯ ಹಾಡುವವರು ಯಾರು ಎಂಬುವುದೇ ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Latest Videos
Follow Us:
Download App:
  • android
  • ios