Bangalore University ಯಡವಟ್ಟು: ಬಿ.ಕಾಂ ಪರೀಕ್ಷೆ 70 ಅಂಕಗಳಿಗೆ, ಸಿಕ್ಕಿದ್ದು 73 ಮಾರ್ಕ್ಸ್‌!

*ಗರಿಷ್ಠ ಅಂಕಗಳಿಗಿಂತ ಹೆಚ್ಚಿನ ಅಂಕ ನೀಡಿಕೆ: 73 out of 70
*ಹಳೇ ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಒಂದೇ ಮಾದರಿ ಪ್ರಶ್ನೆಪತ್ರಿಕೆ 
*ಥಿಯರಿ ಪರೀಕ್ಷೆ  70 ಅಂಕಗಳಿಗೆ. ಉಳಿದ 30 ಅಂಕ ಪ್ರಾಯೋಗಿಕ ಪರೀಕ್ಷೆ
 

Bangalore University Awards 73 Marks Out of 70 in Semester Exams puts students into confusion mnj

ಬೆಂಗಳೂರು (ಜ. 25): ಒಂದಿಲ್ಲೊಂದು ವಿಚಾರಕ್ಕೆ ಆಗಾಗ ಸುದ್ದಿಯಾಗುವ ಬೆಂಗಳೂರು ವಿಶ್ವವಿದ್ಯಾಲಯ (Bangalore University) ಈ ಬಾರಿ ಗರಿಷ್ಠ 70 ಅಂಕದ ಥಿಯರಿ ಪರೀಕ್ಷೆ ಬರೆದ ಕೆಲ ವಿದ್ಯಾರ್ಥಿಗಳಿಗೆ 70ಕ್ಕೂ ಹೆಚ್ಚು ಅಂಕಗಳನ್ನು ನೀಡಿ ಎಡವಟ್ಟು ಮಾಡಿದೆ. ಈ ಮಾಹಿತಿ ತಿಳಿದ ಕೂಡಲೇ ಸಮಸ್ಯೆ ಪರಿಹರಿಸಲು ವಿವಿ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ನಮಗೆ ವಿವಿ ಥಿಯರಿ ಪರೀಕ್ಷೆ ನಡೆಸಿರುವುದೇ 70 ಅಂಕಗಳಿಗೆ. ಉಳಿದ 30 ಅಂಕ ಪ್ರಾಯೋಗಿಕ ಪರೀಕ್ಷೆಯಲ್ಲಿ ನೀಡಬೇಕು. ಆದರೆ, ಬೇಕಾಬಿಟ್ಟಿ ಮೌಲ್ಯಮಾಪನದ ನಡೆಸಿ ಥಿಯರಿಯಲ್ಲಿ ಗರಿಷ್ಠ ಅಂಕಗಳಿಗೂ ಹೆಚ್ಚು ಅಂಕಗಳನ್ನು ನೀಡಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಉದಾಹರಣೆಗೆ ಬಿ.ಕಾಂ. 3ನೇ ಸೆಮಿಸ್ಟರ್‌ (ಸಿಬಿಸಿಎಸ್‌) ಟ್ರಾವೆಲ್‌ ಅಂಡ್‌ ಟೂರ್‌ ಆಪರೇಟರ್‌ ವಿಷಯದ ಪರೀಕ್ಷೆಯಲ್ಲಿ ನನಗೆ 73 ಅಂಕಗಳನ್ನು ನೀಡಲಾಗಿದೆ ಎಂದು ಸಂದೇಶ್‌(ಹೆಸರು ಬದಲಿಸಲಾಗಿದೆ) ಎಂಬ ವಿದ್ಯಾರ್ಥಿ ದೂರಿದ್ದಾನೆ.

ಒಂದೇ ಪ್ರಶ್ನೆಪತ್ರಿಕೆ: ಬೆಂಗಳೂರು ವಿಶ್ವವಿದ್ಯಾಲಯ ಕಳೆದ ಆಗಸ್ಟ್‌-ಸೆಪ್ಟಂಬರ್‌ ಪರೀಕ್ಷೆ ವೇಳೆ 2014ರ ನಂತರ ಜಾರಿಯಾದ ಚಾಯ್ಸ್ ಬೇಸ್ಡ್‌ ಕ್ರೆಡಿಟ್‌ ಸಿಸ್ಟಮ್‌(CBCS) ಮತ್ತು ಸಿಬಿಸಿಎಸ್‌ ಪದ್ಧತಿ ಜಾರಿಗೂ ಹಿಂದಿನ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮ ಒಂದೇ ಆಗಿರುವುದರಿಂದ ಒಂದೇ ಸಾಮಾನ್ಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಿದೆ. ಆದರೆ, ಸಿಬಿಸಿಎಸ್‌ ಪದ್ಧತಿಯ ವಿದ್ಯಾರ್ಥಿಗಳ ಪರೀಕ್ಷಾ ಪದ್ಧತಿಯಲ್ಲಿ ಬದಲಾಗಿ 70 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಹಳೆ ವಿದ್ಯಾರ್ಥಿಗಳಿಗೆ 80, 90, 100 ಅಂಕಗಳಿಗೆ(ಆಯಾ ವರ್ಷದ ನಿಯಮಾನುಸಾರ) ಪರೀಕ್ಷೆ ನಡೆಸಬೇಕಿದೆ.

ಇದನ್ನೂ ಓದಿ: ಎಕ್ಸಾಂ ಇಲ್ಲದೆ ಪಾಸ್‌ ಇಲ್ಲ: ಕೊರೋನಾ ಸಮಯದಲ್ಲೇ ನಡೆಯುತ್ತೆ PUC, SSLC ಪರೀಕ್ಷೆ

ಪಠ್ಯಕ್ರಮ ಒಂದೇ ಎಂಬ ಕಾರಣಕ್ಕೆ ಎರಡೂ ರೀತಿಯ ವಿದ್ಯಾರ್ಥಿಗಳಿಗೂ 100 ಅಂಕಗಳಿಗೆ ಒಂದೇ ಪ್ರಶ್ನೆಪತ್ರಿಕೆ ನೀಡಿ ಯಾರಾರ‍ಯರು ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬುದನ್ನೂ ಸೂಚಿಸಿದೆ. ಆದರೆ, ಕೆಲ ಸಿಬಿಸಿಎಸ್‌ ಪದ್ಧತಿಯ ವಿದ್ಯಾರ್ಥಿಗಳು ಇದನ್ನು ಗಮನಿಸದೆ ತಾವು ಉತ್ತರಿಸಬೇಕಿಲ್ಲದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಂದರೆ ಅವರು 70ಕ್ಕಿಂತ ಹೆಚ್ಚು ಅಂಕಗಳಿಗೆ ಪರೀಕ್ಷೆ ಬರೆದಂತಾಗಿದೆ. ಇದರಿಂದ ಅವರಿಗೆ ಹೆಚ್ಚು ಅಂಕಗಳು ಬಂದಿವೆ ಎನ್ನುತ್ತಾರೆ ವಿವಿಯ ಅಧಿಕಾರಿಗಳು.

ಇದರಲ್ಲಿ ವಿವಿಯ ತಪ್ಪೇನು ಇಲ್ಲ. ವಿದ್ಯಾರ್ಥಿಗಳು ತಪ್ಪಾಗಿ ಅರ್ಥೈಸಿಕೊಂಡು ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದಿರುವುದರಿಂದ ಡಿಜಿಟಲ್‌ ಮೌಲ್ಯಮಾಪನದಲ್ಲಿ ಕಂಪ್ಯೂಟರ್‌ ಅವರು ಬರೆದಿರುವ ಎಲ್ಲವನ್ನೂ ಮೌಲ್ಯಮಾಪನ ಮಾಡಿ ಅಂಕ ನೀಡಿದೆ. ಹಾಗಾಗಿ ಈ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಡಳಿತ ಯಂತ್ರ ಕುಸಿಯುವ ಆತಂಕ, ಶಿಕ್ಷಣ ಇಲಾಖೆಯಿಂದ ಸಿ ದರ್ಜೆ ನೌಕರರಿಗೆ 100 ಅಂಕಗಳ ಕಾರ್ಯಕ್ಷಮತೆ ಪರೀಕ್ಷೆ ಕಡ್ಡಾಯ

ಏನಿದು ಸಿಬಿಸಿಎಸ್‌ ಪದ್ಧತಿ: ಅಂತಿಮ ಪದವಿಯಲ್ಲಿ ವಿದ್ಯಾರ್ಥಿ ತನ್ನಿಷ್ಟದ ಬೇರೆ ನಿಖಾಯದ ವಿಷಯ ಓದುವುದು. ಉದಾಹರಣೆಗೆ ಕಲಾ ವಿಭಾಗದ ವಿದ್ಯಾರ್ಥಿ ತನ್ನ ಕಾಂಬಿನೇಷನ್‌ನಲ್ಲಿ ಒಂದು ವಿಷಯದ ಬದಲು ವಿಜ್ಞಾನ ಅಥವಾ ವಾಣಿಜ್ಯ ವಿಭಾಗದ ಯಾವುದಾದರೂ ಒಂದು ವಿಷಯವನ್ನು ವ್ಯಾಸಂಗ ಮಾಡಬಹುದು.

ಮೌಲ್ಯಮಾಪನದಲ್ಲಿ ಈ ರೀತಿ ಸಮಸ್ಯೆಯಾಗಿರುವ ಹಳೆ ಮತ್ತು ಹೊಸ ಪರೀಕ್ಷಾ ಪದ್ಧತಿ ಸುಮಾರು 250 ವಿದ್ಯಾರ್ಥಿಗಳಿರಬಹುದು. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಓದಿಕೊಳ್ಳದೆ ಮಾಡಿದ ತಪ್ಪನ್ನು ವಿವಿಯ ಮೇಲೆ ಹಾಕುತ್ತಿರುವುದು ಸರಿಯಲ್ಲ. ಆದರೂ, ಈ ಸಮಸ್ಯೆ ಪರಿಹರಿಸಲು ಡಿಜಿಟಲ್‌ ಮೌಲ್ಯಮಾಪನ ಆಗಿರುವ ಅವರ ಎಲ್ಲಾ ಉತ್ತರ ಪತ್ರಿಕೆಗಳನ್ನು ಈಗ ಮತ್ತೊಮ್ಮೆ (ಮ್ಯಾನ್ಯುಯಲ್‌) ಮೌಲ್ಯಮಾಪನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಬೆಂ.ವಿ.ವಿ, ಕುಲಸಚಿವ (ಮೌಲ್ಯಮಾಪನ), ಡಾ.ಜೆ.ಟಿ.ದೇವರಾಜ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios