Asianet Suvarna News Asianet Suvarna News

ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ : ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ನಗರದ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. 

Ban on sale of firecrackers in densely populated areas: High Court upheld the order akb
Author
Bengaluru, First Published Aug 5, 2022, 8:27 AM IST

ನಗರದ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಈ ಕುರಿತು ರಾಯಲ್‌ ಫೈಯರ್‌ ವರ್ಕ್ಸ್ ಇಂಡಸ್ಟ್ರೀಸ್‌ ಮತ್ತು ನಟರಾಜ್‌ ಟ್ರೇಡಿಂಗ್‌ ಕಂಪನಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪಟಾಕಿ ಮಾರಾಟಗಾರ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪಟಾಕಿಗಳ ಬಳಕೆಯಿಂದ ಪ್ರಕೃತಿಯ ಮೇಲೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತದೆ. ಪಟಾಕಿಗಳ ಉತ್ಪಾದನೆ, ಸಾಗಾಟ ಮತ್ತು ಅವುಗಳನ್ನು ಸುಡುವುದರಿಂದ ಪ್ರಕೃತಿ ಮಾತೆಗೆ ಅಪಾಯ ಎಂಬುದನ್ನು ಹೇಳಲು ಯಾವುದೇ ಸಂಶೋಧನೆ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳು ಶಬ್ದ ಹಾಗೂ ವಾಯು ಮಾಲಿನ್ಯದಿಂದ ನರಳುತ್ತಿದೆ. ಹೀಗಿರುವಾಗ ಪಟಾಕಿ ಹಚ್ಚಲು ಅವಕಾಶ ಮಾಡಿಕೊಟ್ಟರೆ ಈಗಿರುವ ಸಂಕಟವನ್ನು ಮತ್ತಷ್ಟು ಹೆಚ್ಚಳ ಮಾಡಿದಂತಾಗುತ್ತದೆ. ಪಟಾಕಿಗಳಿಂದ ಎಷ್ಟುಮಕ್ಕಳು ಹಾಗೂ ಯುವಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರ ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿದೆ.

Life Threatening to Woman: ಪಟಾಕಿ ಗನ್‌ ತೋರಿಸಿ ಸರ ಕದ್ದವನ ಬಂಧನ 

ಹಿನ್ನೆಲೆ

ಬೆಂಗಳೂರಿನ ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ, ಸಾಗಾಟ ಮತ್ತು ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದು ನಗರ ಪೊಲೀಸ್‌ ಆಯುಕ್ತರು 2012ರ ಏ.12ರಂದು ಈ ಆದೇಶ ಹೊರಡಿಸಿದ್ದರು.ಈ ಆದೇಶ ಪ್ರಶ್ನಿಸಿ ರಾಯಲ್‌ ಫೈಯರ್‌ ವರ್ಕ್ಸ್ ಇಂಡಸ್ಟ್ರೀಸ್‌ ಮತ್ತು ನಟರಾಜ್‌ ಟ್ರೇಡಿಂಗ್‌ ಕಂಪನಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪಟಾಕಿ ಮಾರಾಟ ಕಂಪನಿಗಳು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ (ಡಿಜಿಪಿ) ಮೇಲ್ಮನವಿ ಸಲ್ಲಿಸಿದ್ದರು. ಡಿಜಿಪಿ ಅವರು ಸಹ ನಗರ ಪೊಲೀಸ್‌ ಆಯುಕ್ತರ ಕ್ರಮವನ್ನು ಎತ್ತಿ ಹಿಡಿದಿದ್ದರು.

ಪಟಾಕಿ ಸದ್ದಿಗೆ ಹೆದರಿ ಮದುವೆ ಗಂಡಿನೊಂದಿಗೆ ಓಡಿದ ಕುದುರೆ: ವಿಡಿಯೋ ವೈರಲ್

ಪಟಾಕಿ ದುರಂತದಿಂದ ಅವಘಡ ಸಂಭವಿಸಿದರೆ ಅವುಗಳನ್ನು ನಿರ್ವಹಣೆ ಹಾಗೂ ನಿಯಂತ್ರಣ ಕಷ್ಟವಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳಿರುತ್ತವೆ. ಆ್ಯಂಬುಲೆನ್ಸ್‌ ಹಾಗೂ ಅಗ್ನಿ ಶಾಮಕ ದಳದ ವಾಹನಗಳು ತುರ್ತಾಗಿ ಘಟನಾ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತದೆ ಎಂದು ಆಯುಕ್ತರು ಹಾಗೂ ಡಿಜಿಪಿ ತಮ್ಮ ಆದೇಶದಲ್ಲಿ ತಿಳಿಸಿದ್ದರು.ಈ ಕ್ರಮವನ್ನು ಆಕ್ಷೇಪಿಸಿದ್ದ ಪಟಾಕಿ ಮಾರಾಟ ಕಂಪನಿಗಳು, ಆಯುಕ್ತರು ಹಾಗೂ ಡಿಜಿಪಿಯ ಆದೇಶದಿಂದ ತಮ್ಮ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಿದೆ. ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ನಗರ ಆಯುಕ್ತರ ಹಾಗೂ ಡಿಜಿಪಿ ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದವು.

ತೀರ್ಪಿನಲ್ಲಿ ಫೋಟೋ ಬಳಕೆ ಇದೇ ಮೊದಲು

ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರ ಎರಡು ಕ್ಲಿನಿಕಲ್‌ ಫೋಟೋಗಳನ್ನು ತೀರ್ಪಿನಲ್ಲಿ ಮುದ್ರಿಸಲಾಗಿದೆ. ಆ ಮೂಲಕ ತೀರ್ಪುಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ ತೀರ್ಪುಗಳಲ್ಲಿ ಪ್ರಕರಣಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಮುದ್ರಿಸುವುದಿಲ್ಲ.

Follow Us:
Download App:
  • android
  • ios