ಅಮಾನತುಗೊಂಡಿದ್ದಕ್ಕೆ ಮೇಲಾಧಿಕಾರಿ ಮೇಲೆ ಸೇಡು ತೀರಿಸಿಕೊಳ್ಳಲು, ದ್ವಿತೀಯ ದರ್ಜೆ ಸಹಾಯಕನೊಬ್ಬ ಮಹಿಳಾ ತಹಶೀಲ್ದಾರ್ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿದ್ದಾನೆ. ಅಪರ ಜಿಲ್ಲಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬರೆದ ಪತ್ರದ ಸತ್ಯಾಸತ್ಯತೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬಳ್ಳಾರಿ : ಮೇಲಾಧಿಕಾರಿ ಅಮಾನತು ಮಾಡಿದರು ಎನ್ನುವ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಹೋಗಿ ದ್ವಿತಿಯ ದರ್ಜೆ ಸಹಾಯಕ ಎಡವಟ್ಟು ಮಾಡಿಕೊಂಡು ಪೊಲೀಸ್ ತನಿಖೆಗೆ ಒಳಗಾದ ಘಟನೆ ನಡೆದಿದೆ. ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರ್ ವಿರುದ್ದ ಸೇಡು ತೀರಿಸಿ ಕೊಳ್ಳಲು ಹೋಗಿ ಎಸ್ ಡಿ ಸಿ ಗಂಗಾಧರ್ ಲಾಕ್ ಆಗಿದ್ದಾನೆ. ಈ ಬಗ್ಗೆ ಸಂಪೂರ್ಣ ಘಟನೆ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಲಾಧಿಕಾರಿ ಅಮಾನತು ಮಾಡಿದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಯತ್ನಿಸಿದ ದ್ವಿತೀಯ ದರ್ಜೆ ಸಹಾಯಕ (SDC)ನ ಕೃತ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಿದ ಆರೋಪದ ಮೇರೆಗೆ ಅಪರ ಜಿಲ್ಲಾಧಿಕಾರಿ (ADC) ಮೊಹಮ್ಮದ್ ಝುಬೇರ್ ನೀಡಿದ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ದ್ವಿತೀಯ ದರ್ಜೆ ಸಹಾಯಕ ಗಂಗಾಧರ್‌ರನ್ನು ಅಮಾನತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಝುಬೇರ್‌ ವಿರುದ್ಧ ವೈಯಕ್ತಿಕ ದ್ವೇಷ ಬೆಳೆಸಿಕೊಂಡಿದ್ದ ಗಂಗಾಧರ್, ಕೀಳುಮಟ್ಟದ ಕ್ರಮಕ್ಕೆ ಮುಂದಾಗಿದ್ದ.

ಸೇಡು ತೀರಿಸಲು ಹೋಗಿ ಲಾಕ್

ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಗಂಗಾಧರ್, ಬಳ್ಳಾರಿಯ ಮಹಿಳಾ ತಹಶೀಲ್ದಾರ್ ಒಬ್ಬರ ಹೆಸರಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಿಗೆ ನಕಲಿ ಪತ್ರಗಳನ್ನು ಕಳುಹಿಸಿದ್ದಾನೆ. ಆ ಪತ್ರದಲ್ಲಿ ಮಹಿಳಾ ತಹಶೀಲ್ದಾರ್ ಅವರ ನಕಲಿ ಸಹಿ ಹಾಕಿ, ಎಡಿಸಿ ಮೊಹಮ್ಮದ್ ಝುಬೇರ್ ತಮ್ಮ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡಿದ್ದಾನೆ.

ಈ ಪತ್ರಗಳನ್ನು ವಿವಿಧ ಕಡೆಗಳಿಗೆ ಕಳುಹಿಸಲಾಗಿದ್ದು, ಬಳಿಕ ಅವು ಜಿಲ್ಲಾಧಿಕಾರಿ ಕಚೇರಿಗೂ ತಲುಪಿವೆ. ಪತ್ರವನ್ನು ನೋಡಿದ ಮಹಿಳಾ ತಹಶೀಲ್ದಾರ್ ತೀವ್ರ ಆಘಾತಕ್ಕೊಳಗಾಗಿ, ಇದು ಸಂಪೂರ್ಣ ನಕಲಿ ಹಾಗೂ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಗಂಗಾಧರ್‌ನ ಕುತಂತ್ರವನ್ನು ಬಹಿರಂಗಪಡಿಸಿದ್ದಾರೆ. ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಯೊಬ್ಬರ ಸಹಕಾರದ ಅನುಮಾನ

ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಗಾಧರ್‌ಗೆ ಹಿಂದೆ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ (AC) ಕೆಲಸ ಮಾಡಿದ್ದ ಅಧಿಕಾರಿಯೊಬ್ಬರ ಸಹಕಾರವೂ ಇದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಆ ಅಧಿಕಾರಿಯ ಪಾತ್ರದ ಕುರಿತು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ಸೇಡಿಗಾಗಿ ಸರ್ಕಾರಿ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿದ ಈ ಪ್ರಕರಣ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಗತಿಗಳು ಬಹಿರಂಗವಾಗುವ ಸಾಧ್ಯತೆಯಿದೆ.