ಬಳ್ಳಾರಿ ಭತ್ತದ ಗದ್ದೆಯಲ್ಲಿ ನಾಲ್ಕು ಚಕ್ರಗಳನ್ನು ಮೇಲೆತ್ತಿಕೊಂಡು ಬಿದ್ದ ಕೆಎಸ್‌ಆರ್‌ಟಿಸಿ ಕೆಂಪು ಬಸ್
ಬಳ್ಳಾರಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕಲ್ಯಾಣ ಕರ್ನಾಟಕದ ಕೆಂಪು ಬಸ್, ರಸ್ತೆಯ ಪಕ್ಕದಲ್ಲಿನ ಭತ್ತದ ಗದ್ದೆಯಲ್ಲಿ ನಾಲ್ಕು ಚಕ್ರಗಳನ್ನು ಮೇಲೆತ್ತಿಕೊಂಡು ಪಲ್ಟಿಹೊಡೆದು ಬಿದ್ದಿದೆ.
ಬಳ್ಳಾರಿ (ಸೆ.14): ರಾಜ್ಯದ ಬಿಸಿಲ ನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕಲ್ಯಾಣ ಕರ್ನಾಟಕದ ಕೆಂಪು ಬಸ್ ರಸ್ತೆಯ ಪಕ್ಕದಲ್ಲಿನ ಭತ್ತದ ಗದ್ದೆಯಲ್ಲಿ ನಾಲ್ಕು ಚಕ್ರಗಳನ್ನು ಮೇಲೆತ್ತಿಕೊಂಡು ಪಲ್ಟಿಹೊಡೆದು ಬಿದ್ದಿದೆ.
ಬಳ್ಳಾರಿಯಿಂದ ಮಧ್ಯಾಹ್ನದ ವೇಳೆ ಹಡ್ಲಗಿ ಗ್ರಾಮಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೋಕಾ ಗ್ರಾಮದ ಬಳಿ ಪಲ್ಟಿಯಾಗಿ ಭತ್ತದ ಗದ್ದೆಯೊಳಗೆ ಬಿದ್ದಿದೆ. ಬಸ್ ಸಂಪೂರ್ಣವಾಗಿ ಉಲ್ಟಾ ಆಗಿದ್ದು, ಎಲ್ಲ ಚಕಗ್ರಗಳು ಕೂಡ ಮೇಲ್ಭಾಗಕ್ಕೆ ಬಂದಿವೆ. ಬಸ್ ಹಳೆಯದಾಗಿದ್ದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದೇ ಗದ್ದೆಯೊಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನು ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಎಲ್ಲ ಗಾಯಾಳುಗಳನ್ನು ಸ್ಥಳೀಯ ಮೋಕಾ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮೋಕಾ ಠಾಣೆಯ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಖಚಿತ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ನಿನ್ನೆ ವಿಜಯನಗರ, ಇಂದು ಬಳ್ಳಾರಿ ಜಿಲ್ಲೆಯಲ್ಲಿ ಗದ್ದೆಗೆ ನುಗ್ಗಿದ ಬಸ್: ಕಳೆದ ಎರಡು ದಿನಗಳಲ್ಲಿ ಬಳ್ಳಾರಿ ಹಾಗೂ ಬಳ್ಳಾರಿ ವಿಭಜಿತ ವಿಜಯನಗರ ಜಿಲ್ಲೆಯಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿ ಪಲ್ಟಿಯಾಗಿವೆ. ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಹಳೆ ಬಸ್‌ಗಳನ್ನು ಓಡಿಸುತ್ತಿರುವ ಕಾರಣದಿಂದಾಗಿಯೇ ಈ ರೀತಿ ಅಪಘಾತದ ಘಟನೆಗಳು ನಡೆಯುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇನ್ನು ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ದೂರದ ಪ್ರಯಾಣಕ್ಕೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ದುರಸ್ತಿಗೆ ಬಂದ ವಾಹನಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ ಎಂದು ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಹೈವೇ ರಸ್ತೆಯಿಂದ ಗದ್ದೆಗೆ ನುಗ್ಗಿದ ಬಸ್: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕಾಗನೂರು ಬಳಿ ಹೈವೇ ರಸ್ತೆಯಿಂದ ವಾಯುವ್ಯ ಕರ್ನಾಟಕದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಯೊಳಗೆನುಗ್ಗಿದೆ. ಆದರೆ, ಅದೃಷ್ಟವಶಾತ್ ಬಸ್ ಪಲ್ಟಿಯಾಗದ ಹಿನ್ನೆಲೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಂಭೀರ ಪ್ರಮಾಣದ ಗಾಯಗಳಾಗಿರಲಿಲ್ಲ. ಇನ್ನು ಬಸ್ ಗದ್ದೆಗೆ ನುಗ್ಗುತ್ತಿದ್ದಂತೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಕೂಡಲೇ ಗಾಯಾಳುಗಳನ್ನು ಹತ್ತಿರದ ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಯಾರಿಗೂ ದೊಡ್ಡ ಮಟ್ಟದ ಗಾಯವಾಗದ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದರು. ಇನ್ನು ಚಾಲಕನಿಗೆ ಸಣ್ಣಪುಟ್ಟ ಗಾಯಗಳಿಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಇಂದು ಬಳ್ಳಾರಿಯ ಮೋಕಾದ ಬಳಿ ಬಸ್ ಪಲ್ಟಿಯಾಗಿದ್ದು, ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುವಂತಾಗಿದೆ.