ಅಬಕಾರಿ ಸುಂಕ ಏರಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯ ಪ್ರಿಯರು: ಎಣ್ಣೆ ಮಾರಾಟ ಹೆಚ್ಚಳಕ್ಕೆ ಸಿಎಂ ಸೂಚನೆ
ಕಾಂಗ್ರೆಸ್ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ಮದ್ಯ ಮಾರಾಟ ಪ್ರಮಾಣ ಭಾರಿ ಕುಸಿತವಾಗಿದೆ. ಕೂಡಲೇ ಮದ್ಯ ಮಾರಾಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಬೆಂಗಳೂರು (ಸೆ.14): ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಶೇ.20ರವರೆಗೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲಿಯೇ ಮೊದಲ ತ್ರೈಮಾಸಿಕದಲ್ಲಿ ಮದ್ಯ ಮಾರಾಟ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದ ಸರ್ಕಾರದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಮದ್ಯದ ಮಾರಾಟ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಚಿತ ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ಈಗ ಆದಾಯ ಸಂಗ್ರಹಣೆಯತ್ತ ತನ್ನ ಚಿತ್ತವನ್ನು ನೆಟ್ಟಿದೆ. ಈ ಹಿನ್ನೆಯಲ್ಲಿ ಸರ್ಕಾರಕ್ಕೆ ಪ್ರಮುಖ ಆದಾಯವನ್ನು ತರುವ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ವಾಣಿಜ್ಯ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದು, ಮುಂದಿನ ಮೂರು ತ್ರೈಮಾಸಿಕದಲ್ಲಿ ಆದಾಯ ಸಂಗ್ರಹ ಹೆಚ್ಚಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ತೆರಿಗೆ ಸಂಗ್ರಹದ ಗುರಿ ತಲುಪಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕಾಲಜ್ಞಾನದ 'ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ' ಭವಿಷ್ಯ ನಿಜವಾಗಿದೆ! ಕೋಡಿಶ್ರೀ
ಮದ್ಯ ದರ ಹೆಚ್ಚಳದ ನಂತರ ಮಾರಾಟದಲ್ಲಿ ಇಳಿಮುಖ: ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮದ್ಯದ ದರ ಹೆಚ್ಚಳ ನಂತರ ಅಬಕಾರಿ ಇಲಾಖೆಯಲ್ಲಿನ ಪ್ರಗತಿ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ, ಅಬಕಾರಿ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಇಳಿಕೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಮದ್ಯದ ದರ ಹೆಚ್ಚಳದಿಂದ ಮದ್ಯದ ಮಾರಾಟ ಪ್ರಮಾಣ ಕುಸಿತವಾಗಿರುವ ಅಂಶವೂ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಮದ್ಯ ಮಾರಾಟ ಇಳಿಕೆ ಆಗದಂತೆ ಕ್ರಮವಹಿಸಿ, ಮದ್ಯ ಮಾರಾಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಈಗಾಗಲೇ ಮಂಡನೆ ಮಾಡಿರುವ ಬಜೆಟ್ ಗುರಿಗಿಂತ ಹೆಚ್ಚಿನ ಆದಾಯ ಸಂಗ್ರಹಕ್ಕೆ ಪ್ರಯತ್ನಿಸಬೇಕು. ಎರಡನೇ ತ್ರೈಮಾಸಿಕ ಮುಗಿದ ನಂತರ ಮತ್ತೊಂದು ಸಭೆ ನಡೆಸೋದಾಗಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.