ಬಳ್ಳಾರಿ(ಡಿ.18): ದಕ್ಷ ಅಧಿಕಾರಿ ಎಂದೇ ಖ್ಯಾತರಾಗಿದ್ದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರನ್ನು ಬಿಡುಗಡೆಗೊಳಿಸುವಂತೆ ಸೂಚಿಸಿದೆ. 

ಮಡಿಕೇರಿ ಮೂಲದ ಎಸ್‌.ಎಸ್‌. ನಕುಲ್‌ ಅವರು ಕಳೆದ 2019ರ ಜೂನ್‌ 19ರಂದು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಸಹ ಕಾರ್ಯನಿರ್ವಹಿಸಿದ್ದರು.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಪಾರವಾಗಿ ಶ್ರಮಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಜಿಲ್ಲೆಯಲ್ಲಿ ವೈರಸ್‌ ಹಬ್ಬದಂತೆ ಕ್ರಮ ವಹಿಸಿದ್ದರು. ಪರಿಣಾಮವಾಗಿ ವ್ಯಾಪಕವಾಗಿ ಜಿಲ್ಲೆಗೆ ವ್ಯಾಪಿಸಿದ್ದ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಬಂದಿತ್ತು. ಅಷ್ಟೇ ಅಲ್ಲ, ಸಾವಿನ ಸಂಖ್ಯೆಯೂ ಇಳಿಮುಖವಾಗಿತ್ತು. ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸುವ ಮೂಲಕ ಅರ್ಹ ಸಂತ್ರಸ್ತರಿಗೆ ನೆರವಾಗಿದ್ದರು.

ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ನಿರ್ಮಲಾ, ಮಜುಂದಾರ್‌ಗೆ ಸ್ಥಾನ

ಅಪ್ಪಟ ಕನ್ನಡ ಅಭಿಮಾನಿಯಾಗಿದ್ದ ಎಸ್‌.ಎಸ್‌.ನಕುಲ್‌ ಅವರು ಬಳ್ಳಾರಿ ಜಿಲ್ಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಜಿಲ್ಲೆಯ ಐತಿಹಾಸಿಕ ಹಿನ್ನೆಲೆ ಬಗ್ಗೆ ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತಿದ್ದ ಎಸ್‌.ಎಸ್‌. ನಕುಲ್‌, ಜಿಲ್ಲೆಯ ಜನರ ಸಜ್ಜನಿಕೆಯನ್ನು ಆಗಾಗ್ಗೆ ಸ್ಮರಿಸುತ್ತಿದ್ದರು.