* ಹೋರಾಟದ ಟ್ರ್ಯಾಕಲ್ಲಿ ಓಡಿದ್ದ ಮೂರು ಹಸ್ತಗಳು* ಗಣೇಶೋತ್ಸವ, ಶಿವಾಜಿ ಉತ್ಸವ ನಡೆಸಿದ ಹರ್ಡೇಕರ ಮಂಜಪ್ಪ*  ಹೋಂ ರೂಲ್‌ ಲೀಗ್‌ ಸ್ಥಾಪನೆ ಮಜಲು ಹೊರಳಲು ಕಾರಣ 

ಮಯೂರ ಹೆಗಡೆ

ಹುಬ್ಬಳ್ಳಿ(ಆ.08): ಅದು 1916. ಶ್ರೀ ಸಿದ್ಧಾರೂಢ ಮಠದ ಬಳಿಯ ಪಾಂಜರಪೋಳ ಪ್ರದೇಶ. ಹುಬ್ಬಳ್ಳಿಯ ಹೊರವಲಯವೆಂದು ಕರೆಸಿಕೊಳ್ಳುತ್ತಿದ್ದ ಸ್ಥಳದಲ್ಲಿ ಅಂದು ಸ್ವಾತಂತ್ರ್ಯ ಹೋರಾಟದ ಜ್ಯೋತಿಯಂತೆ ಕಂಡಿದ್ದು ಲೋಕಮಾನ್ಯ ತಿಲಕರು, ಆ ಬೆಳಕಲ್ಲಿ ಸಾಗಿ ಎಂದಿದ್ದು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು.

1896ರ ಬಳಿಕ ಆಗಷ್ಟೇ ಸ್ವಾತಂತ್ರ್ಯದ ಹೋರಾಟ ಇಲ್ಲಿ ಮೊಳಕೆಯೊಡೆದಿತ್ತು. ಪಕ್ಕದ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ವಾತಂತ್ರ್ಯದ ಬೆಳಕಿನೆಡೆ ಹೋಗಲು ಕರೆ ಕೊಡುತ್ತಿದ್ದರೆ, ಇತ್ತ ಹುಬ್ಬಳ್ಳಿಯಲ್ಲೂ ನಿಧಾನಕ್ಕೆ ಆ ಬೆಳಕಿನೆಡೆ ಸಾಗುವ ಪ್ರಯತ್ನ ಶುರುವಾಗಿತ್ತು. ಇಂಥ ವಾತಾವರಣ ಇರುವಾಗ ‘ಕೇಸರಿಯ’ ತಿಲಕರು ಆಗಾಗ (1903, 1907)ಕ್ಕೆ ಧಾರವಾಡ, ಮಿಶ್ರಿಕೋಟೆಗೆ ಭೇಟಿ ನೀಡುತ್ತಾರೆ. ಅಲ್ಲಿಂದ ಹೋರಾಟ ನಿಧಾನವಾಗಿ ಹೊತ್ತಿಕೊಳ್ಳುತ್ತದೆ.
ಇದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದ್ದು ಸಿದ್ಧಾರೂಢರ ಅಧ್ಯಕ್ಷತೆಯಲ್ಲಿ ತಿಲಕರು ಅಂದು ಮಾಡಿದ್ದ ಭಾಷಣ. ಅವರ ಬಳಿಕ ತೀಕ್ಷ್ಣವಾಗಿ ಆಶೀರ್ವಚನ ನೀಡಿದ್ದ ಆರೂಢರು ‘ತಿಲಕರು ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಿ, ಅವರು ತೋರಿಸಿದಂತೆ ನಡೆಯಿರಿ’ ಎಂದಿದ್ದರು.

(ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ಜತೆಗೆ ಲೋಕಮಾನ್ಯ ತಿಲಕರು)

ಸ್ವಾತಂತ್ರ್ಯೋತ್ಸವದ ವಿಶೇಷ: ಬ್ರಿಟಿಷರ ಕಾನೂನಿಗೆ ಬೆಚ್ಚಿ ಬಿದ್ದಿದ್ದ ಹುಬ್ಬಳ್ಳಿ..!

ಹುಬ್ಬಳ್ಳಿ ಹೋರಾಟಗಾರರಿಗೆ ತಿಲಕರು ಪ್ರೇರಣೆ

ಇದಕ್ಕೆ ಮುನ್ನವೂ ಹುಬ್ಬಳ್ಳಿ ಹೋರಾಟಗಾರರಿಗೆ ತಿಲಕರು ಪ್ರೇರಣೆಯಾಗಿದ್ದರು. ಆಗ ‘ಮೂರು ಹಸ್ತಗಳು’ ಎಂದು ಕರೆಸಿಕೊಂಡಿದ್ದ ಹರ್ಡೇಕರ ಮಂಜಪ್ಪ, ದ.ಪ. ಕರಮಕರ ಹಾಗೂ ಹುಕ್ಕೇರಿಕರ ರಾಮರಾಯರ ಮೇಲೆ ತಿಲಕರ ಪ್ರಭಾವ ಅಪಾರವಾಗಿತ್ತು ಎನ್ನುತ್ತಾರೆ ಹಿರಿಯ ಪತ್ರಕರ್ತ ನಾರಾಯಣ ಘಳಗಿ. ಇವರಿಂದಲೆ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಚಟುವಟಿಕೆ ಬಿರುಸಾದವು.

ಅದಕ್ಕೆ ಮೊದಲು ಇಂಬಿನ ವೇಗ ಕೊಟ್ಟಿದ್ದು ನಾ.ಸು. ಹರ್ಡೇಕರ. ಹುಬ್ಬಳ್ಳಿಯಲ್ಲಿ ತಾಡಪತ್ರೆ ಗಲ್ಲಿಯಲ್ಲಿ ಶೇವಡೆ ಎಂಬುವವರ ಮನೆಯಲ್ಲಿ ತಾಯಿ ಜತೆಗಿದ್ದರು. ಲ್ಯಾಮಿಂಗ್ಟನ್‌ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿ ದೆಸೆಯಲ್ಲೇ (1904) ಆರ್ಯಬಾಲ ಸಭಾ ಕಟ್ಟುತ್ತಾರೆ. ಈ ಎಳೆಯರ ಸಂಘಟನೆ ಸ್ವದೇಶಿ ಚಳವಳಿ, ಬಂಗಾಳ ವಿಭಜನೆ ವಿರುದ್ಧ ಹೋರಾಡಿದ್ದ ವಂಗಭಂಗ ಚಳವಳಿ, ದೇಸಿಯ ವಸ್ತು ಮಾರಾಟಕ್ಕಾಗಿ ಪ್ರಚಾರ ನಡೆಸಿತ್ತು. ಈ ಬಾಲಕರು ಹುಬ್ಬಳ್ಳಿಯಲ್ಲಿ ಲೈಬ್ರರಿ, ವ್ಯಾಯಾಮ ಶಾಲೆ ಕಟ್ಟಿದ್ದರು.

ಲೋಕಮಾನ್ಯರ ಪ್ರೇರಣೆಯಿಂದಲೇ ಗಣೇಶೋತ್ಸವ

ಅಷ್ಟೇ ಅಲ್ಲ, ಲೋಕಮಾನ್ಯರ ಪ್ರೇರಣೆಯಿಂದಲೇ ಗಣೇಶೋತ್ಸವ, ಶಿವಾಜಿ ಉತ್ಸವ ನಡೆಸಿದ್ದರು. ಕಬಡ್ಡಿಯಂತಹ ಸ್ವದೇಶಿ ಆಟಗಳನ್ನು ಏರ್ಪಾಡು ಮಾಡಿ ಆ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಿದ್ದರು. ಅಲ್ಲದೆ, ಕಲಘಟಗಿಯಲ್ಲೂ ಶಿವಾಜಿ ಉತ್ಸವ ನಡೆಸಿದ್ದರು. ಮುಂದಿನ ದಿನಗಳಲ್ಲಿ ಮಂಜಪ್ಪನವರು ‘ಧನುರ್ಧಾರಿ’ ಪತ್ರಿಕೆಯನ್ನು ಕೆಲವು ಕಾಲ ನಡೆಸುತ್ತಾರೆ. ಬಳಿಕ ಬಿಂದೂರಾವ್‌ ಮುತಾಲಿಕ ದೇಸಾಯಿ ಅವರು ಆರಂಭಿಸಿದ ‘ಕನ್ನಡ ಕೇಸರಿ’ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಾರೆ.

1908ರಲ್ಲಿ ತಿಲಕರಿಗೆ ಶಿಕ್ಷೆಯಾದಾಗಲೂ ಹುಬ್ಬಳ್ಳಿ ತಿರುಗಿಬಿದ್ದಿತ್ತು. ರಂಗನಾಥ ರಾಮಚಂದ್ರ ದಿವಾಕರರು (ಕರ್ಮವೀರ ಪತ್ರಿಕೆ ಆರಂಭಿಸಿದವರಲ್ಲಿ ಪ್ರಮುಖರು) ಲ್ಯಾಮಿಂಗ್ಟನ್‌ ಹೈಸ್ಕೂಲ್‌ನಲ್ಲಿ ರಾಮರಾವ್‌ ಶೆವಡೆ, ವಿಷ್ಣು ಟೆಂಬೆ, ಮಧ್ವರಾವ್‌ ಕಲ್ಲೂರ್‌ ಅವರ ಜತೆ ಒಂದು ದಿನ ಶಾಲೆ ಬಿಟ್ಟು ಹೋರಾಡಿದ್ದರು. ಇದಲ್ಲದೆ ಬಳಿಕ ಗಿರಣಿ ಮಜ್ದೂರ್‌ ಸಂಘ ಇನ್ನಿತರ ಸಂಘಟನೆಗಳು ಕೂಡ ಹುಟ್ಟಿಹೋರಾಟಕ್ಕೆ ಧುಮುಕಲು ಆರಂಭಿಸುತ್ತವೆ. ಅದೇ ವರ್ಷ ಭುರ್ಸೆ ಎಂಬುವವರಿಂದ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಶಾಲೆ ಆರಂಭವಾಗುತ್ತದೆ. ಈ ಶಾಲೆಗಳಲ್ಲಿ ಸ್ವದೇಶಿ ಉತ್ಪನ್ನಗಳನ್ನು ತಯಾರಿಸಲು ಹೇಳಿಕೊಡಲಾಗುತ್ತಿತ್ತು.

ಅಂಕೋಲಾ: ನಿರ್ವಹಣೆ ಇಲ್ಲದೇ ಸೊರಗಿದ ಸ್ವಾತಂತ್ರ್ಯಯೋಧರ ಅತಿಥಿಗೃಹ

ಅಂದ ಹಾಗೆ, 1916ರಲ್ಲಿ ತಿಲಕರು ಬಂದಿದ್ದು ಹುಬ್ಬಳ್ಳಿಯಲ್ಲಿ ಹೋಂ ರೂಲ್‌ ಲೀಗ್‌ ಕಾರ್ಯಚಟುವಟಿಕೆ ವಿಸ್ತರಿಸುವ ಸಲುವಾಗಿ. 1917ರ ಫೆ. 18ರಂದು ನಗರದಲ್ಲಿ ಹೋಂ ರೂಲ್‌ ಲೀಗ್‌ ಶಾಖೆ ತೆರೆಯಲಾಗುತ್ತದೆ. ಪರಿಣಾಮ ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟ ಇನ್ನೊಂದು ಮಜಲಿಗೆ ಹೊರಳುತ್ತದೆ. ಚಳವಳಿಗಳಿಗೆ ಸಾಕ್ಷಿಯಾಗುತ್ತದೆ.

1) ಹುಬ್ಬಳ್ಳಿ ಹೋರಾಟಕ್ಕೆ ತಿಲಕರ ಪ್ರಭಾವ ಅಪಾರ
2) ಸಿದ್ಧಾರೂಢರಿಂದ ಲೋಕಮಾನ್ಯರ ಮಾರ್ಗದಲ್ಲಿ ನಡೆಯಲು ಕರೆ
3) ವಿದ್ಯಾರ್ಥಿ ದೆಸೆಯಲ್ಲೇ ಹರ್ಡೇಕರ ಮಂಜಪ್ಪ ಹೋರಾಟ
4) ಗಣೇಶೋತ್ಸವ, ಶಿವಾಜಿ ಉತ್ಸವ, ವಂಗ ಭಂಗ ಚಳವಳಿ
5) ಹೋಂ ರೂಲ್‌ ಲೀಗ್‌ ಸ್ಥಾಪನೆ ಮಜಲು ಹೊರಳಲು ಕಾರಣ