Asianet Suvarna News Asianet Suvarna News

ಅಂಕೋಲಾ: ನಿರ್ವಹಣೆ ಇಲ್ಲದೇ ಸೊರಗಿದ ಸ್ವಾತಂತ್ರ್ಯಯೋಧರ ಅತಿಥಿಗೃಹ

ಕಳಪೆ ಕಾಮಗಾರಿ, ನಿರ್ವಹಣೆ, ಇಲ್ಲದೇ ಅನಾಥವಾಗಿರುವ ಮೂರು ಕಟ್ಟಡಗಳು| ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪಟ್ಟಣದಲ್ಲಿರುವ ಸ್ವಾತಂತ್ರ್ಯಯೋಧರ ಅತಿಥಿಗೃಹ| 1983ರಲ್ಲಿ ಅಂಕೋಲಾದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟಗಾರರ ಸುವರ್ಣ ಮಹೋತ್ಸವ| 

Did not Maintain Freedom Fighter Guesthouse in Ankola in Uttara Kannada District
Author
Bengaluru, First Published Sep 14, 2020, 1:35 PM IST

ರಾಘು ನಾಯ್ಕ ಕಾಕರಮಠ

ಅಂಕೋಲಾ(ಸೆ.14): ಸ್ವಾತಂತ್ರ್ಯ ಸಂಗ್ರಾಮದ ಪ್ರತಿಬಿಂಬದಂತಿದ್ದ ಸ್ವಾತಂತ್ರ್ಯ ‘ಸಂಗ್ರಾಮ ಭವನ’ದ ಆವರಣದಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶ್ರಾಂತಿ ಪಡೆಯಲು ನಿರ್ಮಾಣಗೊಂಡ ಅತಿಥಿಗೃಹ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಾಗಿದೆ.

ಹೌದು, 1983 ಮೇ ತಿಂಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸುವರ್ಣ ಮಹೋತ್ಸವ ಅಂಕೋಲಾದಲ್ಲಿ ನಡೆದಿತ್ತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸುವರ್ಣ ಮಹೋತ್ಸವಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲೊಂದು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಚಿರಸ್ಥಾಯಿಯಾಗಿ ಮುಂದಿನ ಪೀಳಿಗೆಗೆ ದಾರಿ ದೀಪವಾಗುವ ಕಲ್ಪನೆಯಿಂದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಕಟ್ಟುವ ನಿರ್ಧಾರ ಕೈಗೊಂಡರು. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ 1983ರಲ್ಲಿ ನಿರ್ಮಾಣ ಕಾರ್ಯ ಕೈಗೂಡಲಿಲ್ಲ. 1988ರಲ್ಲಿ ರಾಮಕೃಷ್ಣ ಹೆಗಡೆಯವರು ಈ ಸ್ಮಾರಕಕ್ಕೆ ಅಡಿಗಲ್ಲು ಹಾಕಿದರು. ಕಾಮಗಾರಿ ನಿಧಾನಗತಿಯಲ್ಲಿ ಸಾಗಿತಾದರೂ 3 ಕಟ್ಟಡಗಳು ತಾಲೂಕು ಕೇಂದ್ರದಲ್ಲಿ ತಲೆ ಎತ್ತಿದವು.

ಕೊರೋನಾ ಕಾಟ: ಕುಗ್ಗಿದ ವೀಕ್‌ಎಂಡ್‌, ರಜಾದಿನ ಮೋಜು ಮಸ್ತಿ

ಕೋಟಿ ಬೆಲೆಬಾಳುವ ಕಟ್ಟಡಗಳು:

ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿ 3 ಕಟ್ಟಡಗಳು ಇದ್ದು, ಒಂದು ಸಭಾಭವನ ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಂಡಿದೆ. ಇನ್ನೊಂದು ಕಟ್ಟಡದಲ್ಲಿ ಮೊದಲು ಸಾಕ್ಷರತೆಗೆ ಸಂಬಂಧಪಟ್ಟಇಲಾಖೆ ಮತ್ತು ಗ್ರಂಥಾಲಯ ಇತ್ತು. ಮತ್ತೊಂದು ಕಟ್ಟಡದಲ್ಲಿ 10 ವರ್ಷಗಳ ಮೊದಲು ಪದವಿ ಕಾಲೇಜು ನಡೆಯುತ್ತಿತ್ತು. ಈಗ ಪೂಜಗೇರಿಯಲ್ಲಿ ಸ್ವಂತ ಕಟ್ಟಡವಾದ ಮೇಲೆ ಈ ಕಟ್ಟಡದ ಬಾಗಿಲು ತೆರೆಯಲೇ ಇಲ್ಲ. ಈಗಿನ ಅಂದಾಜಿನ ಪ್ರಕಾರ ಕೋಟಿಗಿಂತಲೂ ಹೆಚ್ಚು ಬೆಲೆಬಾಳುವ ಸ್ವಾತಂತ್ರ್ಯ ಹೋರಾಟಗಾರರ ಅತಿಥಿ ಗೃಹ ಭೂತ ಬಂಗಲೆಯಾಗಿದೆ.

Did not Maintain Freedom Fighter Guesthouse in Ankola in Uttara Kannada District

ಅಸಮರ್ಪಕ ಕಾಮಗಾರಿ:

ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಇಲ್ಲಿಯ ಕಟ್ಟಡಗಳಿಗೆ 4 ವರ್ಷದ ಹಿಂದೆ ಒಂದು ಕೋಟಿ ರು. ಮಂಜೂರಿ ಮಾಡಿತ್ತು. ಆದರೆ ಇದರ ಗುತ್ತಿಗೆ ಹಿಡಿದ ಸರ್ಕಾರದ ಅಧೀನ ಸಂಸ್ಥೆ ನಿರ್ಮಿತಿ ಕೇಂದ್ರ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಆಕ್ಷೇಪಕ್ಕೆ ತುತ್ತಾಗಿತ್ತು. ಜೊತೆಯಲ್ಲಿ ತಾಪಂ ಕೆಡಿಪಿ ಸಭೆಯಲ್ಲಿಯೂ ನಿರ್ಮಿತಿ ಕೇಂದ್ರದ ಅಸಮರ್ಪಕ ಕಾಮಗಾರಿಯ ಬಗ್ಗೆ ಚರ್ಚೆ ನಡೆದಿತ್ತು. ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸಲಹಾ ಸಮಿತಿಯು ಸಹ ನಿರ್ಮಿತಿ ಕೇಂದ್ರದ ಅಸಮರ್ಪಕ ಕಾರ್ಯದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿತ್ತು. ಉಪ್ಪು ನೀರಿನ ಉಸುಕನ್ನು ಬಳಸಿದ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಅಧಿಕಾರಿಗಳಿಗೆ ಸಾರ್ವಜನಿಕರ ವಿರೋಧವಿದ್ದಾಗಲೂ ನಿರ್ಮಿತಿ ಕೇಂದ್ರಕ್ಕೆ ಕೊಡಲು ಅಕ್ಕರೆ ಯಾಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

4 ಸೋಲಾರ ಬ್ಯಾಟರಿ ನಾಪತ್ತೆ:

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿ ಪ್ರಾಣತ್ಯಾಗ ಮಾಡಿದ ಹಿರಿಯರ ನೆನಪಿಗಾಗಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ಅಳವಡಿಸಿದ್ದ ಸೋಲಾರ್‌ ಬ್ಯಾಟರಿ ಮೂರು ವರ್ಷದ ಹಿಂದೆ ನಾಪತ್ತೆಯಾಗಿವೆ. ಅತಿಥಿಗೃಹದ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿಯ ಮೇಲೆ ಗಿಡಗಳು ಆಶ್ರಯ ಪಡೆದಿವೆ. ಕಿಟಕಿಯ ಗಾಜುಗಳು ನೆಲಕಚ್ಚಿವೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದರೂ ಕಿಡಿಗೇಡಿಗಳು ಮಾತ್ರ ಸಿಕ್ಕಿಲ್ಲ.

ಈ ಅತಿಥಿಗೃಹ ಸರಿಪಡಿಸಲು ಅನೇಕ ಬಾರಿ ಸರ್ಕಾರದ ಮುಂದೆ ಸಲಹಾ ಸಮಿತಿ ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಸ್ವಲ್ಪ ದಿನದಲ್ಲಿ ಈ ಅತಿಥಿಗೃಹವನ್ನು ದುರಸ್ತಿ ಮಾಡದಿದ್ದಲ್ಲಿ ಬೀಳುವುದು ಖಂಡಿತ. ಗಾಂಧೀಜಿಯ 150ನೇ ವರ್ಷದ ನೆನಪಿನಲ್ಲಾದರೂ ಇದು ಜಿಲ್ಲೆಯಲ್ಲಿಯೇ ಅರ್ಥಪೂರ್ಣವಾದ ಕಟ್ಟಡಗಳಾಗಲಿ ಎನ್ನುವುದು ನಮ್ಮ ಆಶಯ. ಸರ್ಕಾರ ಸಂಬಂಧಪಟ್ಟಅಧಿಕಾರಿಗಳು ತಕ್ಷಣ ಸ್ಪಂದಿಸಲಿ ಎಂದು ಮಾಜಿ ಜಿ.ಪಂ. ಅಧ್ಯಕ್ಷ ರಮಾನಂದ ನಾಯಕ ಅವರು ತಿಳಿಸಿದ್ದಾರೆ. 

ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶ್ರಾಂತಿ ಪಡೆಯಲು ನಿರ್ಮಾಣಗೊಂಡ ಅತಿಥಿಗೃಹ ನಿರ್ವಹಣೆ ಇಲ್ಲದೆ ಇರುವುದು ಗಮನಕ್ಕಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಂಕೋಲಾ ತಹಸೀಲ್ದಾರ ಉದಯ ಕುಂಬಾರ ಅವರು ಹೇಳಿದ್ದಾರೆ.
 

Follow Us:
Download App:
  • android
  • ios