* ಬ್ರಿಟಿಷರ ವಿರುದ್ಧದ ಎಲ್ಲ ಹಂತದ ಹೋರಾಟದಲ್ಲೂ ಹುಬ್ಬಳ್ಳಿ ನಗರ ನಿಂತಿದ್ದು ಇತಿಹಾಸ* ಬ್ರಿಟಿಷ್‌ಆಡಳಿತದ ಮೇಲೆ ಮಡುಗಟ್ಟಿದ್ದ ಜನರ ಅಸಮಾಧಾನ* 1888ರಲ್ಲಿ ಹುಬ್ಬಳ್ಳಿಯಲ್ಲಿ ರೈಲ್ವೆ ವರ್ಕ್‌ಶಾಪ್‌ ಆರಂಭ  

ಮಯೂರ ಹೆಗಡೆ

ಹುಬ್ಬಳ್ಳಿ(ಆ.07): ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಘೋಷಣೆ ಮೊಳಗಿದ್ದ ಧಾರವಾಡದ ಭಾಗವಾದ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯದ ಚಳವಳಿ ಕೂಡ ರೋಚಕವಾದದ್ದು. ರೈಲ್ವೆ ವರ್ಕ್‌ಶಾಪ್‌ ಸ್ಥಾಪನೆ ಬಳಿಕ ಕೈಗಾರಿಕಾ ತಾಣವೆಂದು ಗುರುತಾದ ನಗರ ಬಳಿಕ ಬ್ರಿಟಿಷರ ವಿರುದ್ಧದ ಎಲ್ಲ ಹಂತದ ಹೋರಾಟದಲ್ಲೂ ನಿಂತಿದ್ದು ಇತಿಹಾಸದ ಹೆಜ್ಜೆ ಗುರುತು.

ಟಿಪ್ಪು, ಧೋಂಡಿಯಾ ಪತನದ ಬಳಿಕ ಹುಬ್ಬಳ್ಳಿ ಪೇಶ್ವೆಯರಿಗೆ ಹೆಗಲಾಗಿದ್ದ ಪಟವರ್ಧನ ಮನೆತನದ ಒಡೆತನದಲ್ಲಿತ್ತು. 1817ರಲ್ಲಿ ಯುದ್ಧದ ಸೈನ್ಯ ಮೈತ್ರಿ ಒಪ್ಪಂದದ ಪ್ರಕಾರ ಸಾಂಗ್ಲಿಯ ಚಿಂತಾಮಣರಾವ್‌ಪಟವರ್ಧನ್‌ಹುಬ್ಬಳ್ಳಿ ಸೇರಿ 47 ಗ್ರಾಮಗಳನ್ನು ಬ್ರಿಟಿಷರಿಗೆ ಕೊಡಬೇಕಾಗುತ್ತದೆ. ಈ ಭಾಗಕ್ಕೆ ಥಾಮಸ್‌ಮನ್ರೋ ಕಮೀಷನರ್‌ಆಗಿ ನೇಮಕವಾಗುತ್ತಾನೆ. ಇಲ್ಲಿಂದ ಅಧಿಕೃತವಾಗಿ ಈ ಭಾಗದಲ್ಲಿ ಬ್ರಿಟಿಷ್‌ಆಡಳಿತ ಆರಂಭವಾಯ್ತು ಎನ್ನುತ್ತದೆ ದಾಖಲೆ.

1818ರಲ್ಲಿ ಭೀಕರವಾಗಿ ಕಾಲರಾ ಕಾಡಿದ ಪರಿಣಾಮ ಹುಬ್ಬಳ್ಳಿಯಲ್ಲಿದ್ದ ನೂರಕ್ಕೂ ಹೆಚ್ಚು ಬ್ರಿಟಿಷ್‌ಸೈನಿಕರು ಸಾಯುತ್ತಾರೆ. ಅನಾರೋಗ್ಯಕ್ಕೀಡಾದ ಮನ್ರೋ ಕೂಡ ಇಲ್ಲಿಂದ ಬಳ್ಳಾರಿಗೆ ತೆರಳುತ್ತಾನೆ. ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಚ್ಯಾಪ್ಲಿನ್‌(1824ರಲ್ಲಿ ಕಿತ್ತೂರು ಚೆನ್ನಮ್ಮನನ್ನು ಸೋಲಿಸಿದವ) ಇಲ್ಲಿನ ಪ್ರಿನ್ಸಿಪಲ್‌ಕಲೆಕ್ಟರ್‌ಆಗಿ ನೇಮಕಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ಜ. ಫ್ರಿಜ್ಲರ್‌ಹುಬ್ಬಳ್ಳಿಯಲ್ಲಿನ ಸೈನ್ಯದ ಉಸ್ತುವಾರಿ ವಹಿಸಿಕೊಳ್ಳಬೇಕಾಗುತ್ತದೆ.

ಮುಂದಿನ ದಿನಗಳಲ್ಲಿ ಮೊದಲಿಗೆ ಬ್ರಿಟಿಷ್‌ ಕಾನೂನಿನ ದುಷ್ಪರಿಣಾಮ ಎದುರಿಸಿದ್ದು ಹುಬ್ಬಳ್ಳಿಯ ಹತ್ತಿ ಬಟ್ಟೆ ವ್ಯಾಪಾರ. ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿ ಪರಿಣಾಮ ಹತ್ತಿ ಆಮದಾದಾಗ ಹುಬ್ಬಳ್ಳಿ, ನವಲಗುಂದ, ನರಗುಂದ ಹಸ್ತಚಾಲಿತ ಜಿನ್‌ಗಳು ತೊಂದರೆಗೆ ಸಿಲುಕುತ್ತವೆ. ನಿರುದ್ಯೋಗ, ಉಪವಾಸ ಮನೆಮಾಡುತ್ತದೆ. ಆದರೆ, ಇಲ್ಲಿದ್ದ ಕಲಾಬತ್‌ಬಟ್ಟೆ, ಸೀರೆಗಳಿಗೆ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದುದರಿಂದ 1872ರ ವರೆಗೂ ಇದು ಮುಂದುವರಿದಿತ್ತು. ಇದರ ಜತೆಗೆ ಅಮೆರಿಕನ್‌ಹತ್ತಿ ಬೆಳೆ, ವ್ಯಾಪಾರ ಕೂಡ 1878ರ ವರೆಗೆ ನಡೆದಿತ್ತು.

ಅಂಕೋಲಾ: ನಿರ್ವಹಣೆ ಇಲ್ಲದೇ ಸೊರಗಿದ ಸ್ವಾತಂತ್ರ್ಯಯೋಧರ ಅತಿಥಿಗೃಹ

ದೇಶಿಯ ಹತ್ತಿಗೆ ಹೆಚ್ಚಿನ ಬೇಡಿಕೆ

ಆದರೆ, ಯುದ್ಧದ ಪರಿಣಾಮ ಇಂಗ್ಲೆಂಡ್‌ಗೆ ಅಮೆರಿಕದಿಂದ ಬರುತ್ತಿದ್ದ ಹತ್ತಿ ನಿಂತಾಗ ದೇಶಿಯ ಹತ್ತಿಗೆ ಹೆಚ್ಚಿನ ಬೇಡಿಕೆಯಿತ್ತು. ಸಹಜವಾಗಿ ಧಾರವಾಡದ ಹತ್ತಿಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಆಗ 1881ರಲ್ಲಿ ಹುಬ್ಬಳ್ಳಿಯಲ್ಲಿ ಕೈಗಾರಿಕೆಯ ಮೊದಲ ಹೆಜ್ಜೆ ಎಂಬಂತೆ ಹುಟ್ಟಿದ್ದು ಎಸ್‌.ಎಂ. ಸ್ಪಿನ್ನಿಂಗ್‌ಆ್ಯಂಡ್‌ವಿವ್ಹಿಂಗ್‌ಕಂಪನಿ. ಹರಿದ ಹಣದ ಹೊಳೆ ಪರಿಣಾಮ ‘ಹತ್ತಿ ಬಿತ್ತಿ ರೈತ ಹಾಳಾದ’ ಎಂಬ ಮಾತು ಚಾಲ್ತಿಗೆ ಬಂದಿದ್ದು ಈ ಕಾಲದಲ್ಲಿ. ಹತ್ತಿ ಸಾಗಾಟದ ಕಾರಣಕ್ಕೆ ರೈಲ್ವೆ ಬರುವಂತಾಯ್ತು. ಪರಿಣಾಮ 1888ರಲ್ಲಿ ಹುಬ್ಬಳ್ಳಿಯಲ್ಲಿ ರೈಲ್ವೆ ವರ್ಕ್‌ಶಾಪ್‌ಆರಂಭವಾದರೆ, ಧಾರವಾಡದಲ್ಲಿ ಸದರ್ನ್‌ಮರಾಠಾ ರೈಲ್ವೆ ಆಡಳಿತ ಕಚೇರಿ ಬಂತು.

ಇಷ್ಟರ ನಡುವೆ, ನರಗುಂದದ ಬಂಡಾಯ, ಕಿತ್ತೂರು ಸಂಸ್ಥಾನದ ಹೋರಾಟದ ವೇಳೆ ಬ್ರಿಟಿಷ್‌ವಿರುದ್ಧ ಹೋರಾಟಗಳು ನಡೆದಿತ್ತು. 1873ರ ಉಪ್ಪಿನ ಕಾನೂನಿನ ಪರಿಣಾಮ ಉಪ್ಪಾರರು, ವಿದೇಶಿ ಕಾಗದ ಬಂದಾಗ ಕಾಗದದ ಉದ್ದಿಮೆ, 1876ರಲ್ಲಿ ಸೀಮೆ ಎಣ್ಣೆ ಆಮದಿನ ಬಳಿಕ ಗಾಣಿಗರು ಸಂಕಷ್ಟಕ್ಕೀಡಾದರು ಎನ್ನುತ್ತದೆ ಗ್ಯಾಸೆಟಿಯರ್‌. ಬಳಿಕ 1897ರಲ್ಲಿ ಪ್ರಬಲ ಪ್ಲೇಗ್‌, ಬರಗಾಲ, ಬ್ರಿಟಿಷರ ಕಂದಾಯ ನೀತಿ ಕಾರಣದಿಂದ ಹುಬ್ಬಳ್ಳಿ ಪೇಟೆ ಎರಡು ಬಾರಿ ಲೂಟಿಗೊಳಗಾಗಿತ್ತು. ಪ್ಲೇಗ್‌ನಿಂದ ರಕ್ಷಿಸಿಕೊಳ್ಳಲು ಓಣಿಗಳನ್ನು ಖಾಲಿ ಮಾಡಿ ಸುಡಲಾಗಿತ್ತು.

101 ವರ್ಷಗಳಾದರೂ ಮಾಸದ ಜಲಿಯನ್ ವಾಲಾಬಾಗ್ ಗಾಯದ ನೋವು

ಆರಂಭದಲ್ಲಿ ಹತ್ತಿ, ಶಿಕ್ಷಣ, ವೈದ್ಯಕೀಯ ಸೌಲಭ್ಯದ ಕಾರಣಕ್ಕೆ ಬ್ರಿಟಿಷ್‌ಆಡಳಿತ ಇಲ್ಲಿ ಒಂದಿಷ್ಟುಅಪ್ಯಾಯಮಾನ ತಂದಿತ್ತು. ಆದರೆ ಬಳಿಕದ ಗೃಹ ಕೈಗಾರಿಕೆಗಳ ಮೇಲೆ ಉಂಟಾದ ಪರಿಣಾಮ, ಕಂದಾಯದಿಂದ ಬರಿದಾದ ಕಪಾಟು, ಸುಲಿಗೆಗಳ ಕಾರಣದಿಂದ ಬ್ರಿಟಿಷ್‌ಆಡಳಿತದ ಮೇಲೆ ಜನರ ಅಸಮಾಧಾನ ಮಡುಗಟ್ಟಿತು.

1895ರ ಸುಮಾರಿಗೆ ಧಾರವಾಡದಲ್ಲಿ ರಾಷ್ಟ್ರೀಯತೆಯ ಜಾಗೃತಿ ಮೂಡಿತು. ಸೇರಿದ ಮುಖಂಡರು ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣದ ಪ್ರತಿಜ್ಞೆ ಮಾಡುತ್ತಾರೆ. ಇದಕ್ಕೆ ಜತೆಯಾದ ಹುಬ್ಬಳ್ಳಿ ಕೂಡ ಹೋರಾಟಕ್ಕೆ ಅಣಿಯಾಗುತ್ತದೆ.