ಬಜಾಜ್ ಫೈನಾನ್ಸ್ ಲಿಮಿಟೆಡ್ ಕೊಡಗಿನ ತಿತಿಮತಿ ಮತ್ತು ಮಡಿಕೇರಿಯಲ್ಲಿ 'ಅರ್ಥ ಸೂತ್ರ ಸಂವಾದ' ಎಂಬ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಅಭಿಯಾನದಲ್ಲಿ ಆದಿವಾಸಿಗಳು ಮತ್ತು ಕಾಫಿ ತೋಟದ ಕಾರ್ಮಿಕರಿಗೆ ಹಣಕಾಸು ನಿರ್ವಹಣೆ ಹಾಗೂ ಸೈಬರ್ ವಂಚನೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಮಡಿಕೇರಿ (ಸೆ.29): ಬಜಾಜ್ ಫೈನಾನ್ಸ್ ಲಿಮಿಟೆಡ್ ತನ್ನ ಪ್ರಮುಖ ರಾಷ್ಟ್ರವ್ಯಾಪಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವಾದ 'ಅರ್ಥ ಸೂತ್ರ ಸಂವಾದ' ಸರಣಿಯನ್ನು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಹಾಗೂ ಮಡಿಕೇರಿಯಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ಗ್ರಾಮೀಣ ಮತ್ತು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾದ ಸಮುದಾಯಗಳಲ್ಲಿ ಆರ್ಥಿಕ ಸೇರ್ಪಡೆ ಹಾಗೂ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಬೃಹತ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಆರ್ಥಿಕ ಸಾಕ್ಷರತಾ ಉಪಕ್ರಮದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರ್ಥಿಕ ಶಿಸ್ತು, ಜವಾಬ್ದಾರಿಯುತ ಹಣಕಾಸು ನಿರ್ವಹಣೆ, ಡಿಜಿಟಲ್ ಹಣಕಾಸು ಸುರಕ್ಷತೆ ಮತ್ತು ಆನ್‌ಲೈನ್ ವಂಚನೆಗಳ ವಿರುದ್ಧ ರಕ್ಷಣೆ ಪಡೆಯುವ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಲಾಯಿತು.

ಹಣಕಾಸು ನಿರ್ವಹಣೆ ಮತ್ತು ಸೈಬರ್ ಸುರಕ್ಷತೆಯ ಅರಿವು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಜಾಜ್ ಫೈನಾನ್ಸ್ ಪ್ರತಿನಿಧಿಗಳು, ನಿಯಮಿತ ಉಳಿತಾಯ, ಬಜೆಟ್ ರೂಪಿಸುವುದು, ಜವಾಬ್ದಾರಿಯುತವಾಗಿ ಸಾಲ ಪಡೆಯುವುದು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದು ಹಾಗೂ ಸುರಕ್ಷಿತ ಡಿಜಿಟಲ್ ಹಣಕಾಸು ಅಭ್ಯಾಸಗಳ ಪ್ರಾಮುಖ್ಯತೆಯನ್ನು ಭಾಗವಹಿಸಿದವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳು, ನಕಲಿ ಹೂಡಿಕೆ ಯೋಜನೆಗಳು, ಅನುಮಾನಾಸ್ಪದ ಲಿಂಕ್‌ಗಳು, ದುರುದ್ದೇಶಪೂರಿತ ಎಪಿಕೆ (APK) ಫೈಲ್‌ಗಳು, ವಾಟ್ಸಾಪ್ ಹಗರಣಗಳು ಮತ್ತು 'ಡಿಜಿಟಲ್ ಬಂಧನ' (Digital Arrest) ವಂಚನೆಗಳ ಜಾಲಕ್ಕೆ ಬೀಳದಂತೆ ಜನರಿಗೆ ಎಚ್ಚರಿಕೆ ನೀಡಲಾಯಿತು.

ತಿತಿಮತಿಯಲ್ಲಿ ಆದಿವಾಸಿ ಸಮುದಾಯಕ್ಕೆ ಜಾಗೃತಿ

ತಿತಿಮತಿಯಲ್ಲಿ ಬಜಾಜ್ ಫೈನಾನ್ಸ್ ಸಂಸ್ಥೆಯು 'ದೊಡ್ಡ ಗಾತ್ರದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘ' (ಲ್ಯಾಂಪ್ಸ್ - LAMPS) ಸಹಯೋಗದೊಂದಿಗೆ ಸ್ಥಳೀಯ ಬುಡಕಟ್ಟು ಸಮುದಾಯದ ಸದಸ್ಯರಿಗಾಗಿ ವಿಶೇಷ ಕಾರ್ಯಕ್ರಮ ನಡೆಸಿತು. ಈ ಕಾರ್ಯಕ್ರಮದಲ್ಲಿ ಬುಡಕಟ್ಟು ರೈತರ ಸಂಘದ ಅಧ್ಯಕ್ಷ ಸಿದ್ದಪ್ಪ, ತಿತಿಮತಿ ಲ್ಯಾಂಪ್ಸ್ ಅಧ್ಯಕ್ಷ ಮಣಿಕುನ್ಯ, ಗೊನ್ನಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಕಾಳೇಗೌಡ, ಗಿರಿಜನ ಲ್ಯಾಮ್ ಸೊಸೈಟಿ ಉಪಾಧ್ಯಕ್ಷೆ ಪುಷ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊನ್ನು ಹಾಗೂ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪಿ.ಆರ್. ಪಂಕಜ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೊನ್ನಿಕೊಪ್ಪ ಪಿಎಸ್‌ಐ ಕಾಳೇಗೌಡ, "ಇತ್ತೀಚೆಗೆ ಡಿಜಿಟಲ್ ಬಂಧನ, ಹಣ ದುಪ್ಪಟ್ಟು ಮಾಡುವ ಯೋಜನೆಗಳು ಮತ್ತು ಸೋಶಿಯಲ್ ಮೀಡಿಯಾ ವಂಚನೆಗಳು ಹೆಚ್ಚಾಗುತ್ತಿದ್ದು, ಸಮಾಜದ ಎಲ್ಲಾ ವರ್ಗದ ಜನರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹೊಸದಾಗಿ ಖರೀದಿಸಿದ ದುಬಾರಿ ವಸ್ತುಗಳನ್ನು ಪ್ರದರ್ಶಿಸುವುದು ಹಾಗೂ ತಮ್ಮ ಪ್ರವಾಸದ ಯೋಜನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದನ್ನು ತಡೆಯಬೇಕು. ನಕಲಿ ಖಾತೆಗಳ ಬಗ್ಗೆಯೂ ಜಾಗರೂಕರಾಗಿರಬೇಕು," ಎಂದು ಕಿವಿಮಾತು ಹೇಳಿದರು.

ಮಡಿಕೇರಿಯ ಕಾಫಿ ಎಸ್ಟೇಟ್ ಕಾರ್ಮಿಕರಿಗೆ ಅರಿವು ಕಾರ್ಯಕ್ರಮ

ಇದೇ ರೀತಿಯ ಮತ್ತೊಂದು ಕಾರ್ಯಕ್ರಮವನ್ನು ಮಡಿಕೇರಿಯ ಯೋಗೇಂದ್ರ ಎಸ್ಟೇಟ್‌ನಲ್ಲಿ ಕಾಫಿ ತೋಟದ ಮಾಲೀಕರ ಸಹಯೋಗದೊಂದಿಗೆ ನಡೆಸಲಾಯಿತು. ಕರಾವಳಿ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊಡಗು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸೈಬರ್ ಅಪರಾಧ ತಡೆಗಟ್ಟುವಿಕೆ ಕುರಿತು ಬೆಳಕು ಚೆಲ್ಲಿದರು. "ಹಳೆಯ ಕಾಲದ ಕಳ್ಳತನಗಳ ಜಾಗವನ್ನು ಈಗ ಹೈಟೆಕ್ ಸೈಬರ್ ಅಪರಾಧಗಳುಕ್ರಮಿಸಿವೆ. ಪ್ರತಿಯೊಬ್ಬ ನಾಗರಿಕರು ತಮ್ಮ ಫೋನ್‌ನಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಅನ್ನು ಸ್ಪೀಡ್ ಡಯಲ್‌ನಲ್ಲಿ ಇಟ್ಟುಕೊಳ್ಳಬೇಕು. ಆನ್‌ಲೈನ್ ವಂಚನೆಯಾದ ತಕ್ಷಣ 1930ಗೆ ಕರೆ ಮಾಡಿ ದೂರು ನೀಡಿದರೆ, ಹಣದ ಹರಿವನ್ನು ತಡೆದು ನಷ್ಟವನ್ನು ತಪ್ಪಿಸಬಹುದು," ಎಂದು ಸ್ಪಷ್ಟಪಡಿಸಿದರು. 'ಅರ್ಥಸೂತ್ರ ಸಂವಾದ' ಮೂಲಕ ದೇಶಾದ್ಯಂತ ಗ್ರಾಮೀಣ ಜನರಿಗೆ ವ್ಯಾವಹಾರಿಕ ಆರ್ಥಿಕ ಜ್ಞಾನ ನೀಡುವ ಬಜಾಜ್ ಫೈನಾನ್ಸ್‌ನ ಈ ಶ್ರಮಕ್ಕೆ ಸ್ಥಳೀಯರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.