ಬೀದರ್‌ನ ಕೆಎಂಎಫ್ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ಮೂಲದ 875 ಕೆ.ಜಿ.ಯಷ್ಟು ಸಂಶಯಾಸ್ಪದ ಹಾಲಿನ ಪುಡಿ ಪತ್ತೆಯಾಗಿದ್ದು, ಗೋದಾಮನ್ನು ಸೀಜ್ ಮಾಡಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್‌ (ಸೆ.29): ರಾಜ್ಯದಾದ್ಯಂತ ಏಕಕಾಲಕ್ಕೆ ನಡೆದಿರುವ ಹಾಲಿನ ಡೇರಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ನಗರದಲ್ಲಿ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ (ಕೆಎಂಎಫ್‌)ದ ಗೋದಾಮಿಗೂ ಅದರ ಬಿಸಿ ತಟ್ಟಿದೆ. ದಾಳಿಯ ವೇಳೆ ಮಹಾರಾಷ್ಟ್ರದ ರಾಸಾಯನಿಕ ಪದಾರ್ಥದ ಪೌಡರ್ ಚೀಲಗಳು ಪತ್ತೆ ಆಗಿವೆ.

ಜಿಲ್ಲೆಯ ಚಿಕ್ಕಪೇಟೆ ಸಮೀಪವಿರುವ ಕೆಎಂಎಫ್‌ (ಕರ್ನಾಟಕ ಹಾಲು ಒಕ್ಕೂಟ)ನ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸೆಪ್ಟೆಂಬರ್ 25ರಂದು ದಿಢೀರ್ ದಾಳಿ ನಡೆಸಿದ್ದು, ತಪಾಸಣೆ ವೇಳೆ ಅಪಾರ ಪ್ರಮಾಣದ ಸಂಶಯಾಸ್ಪದ ಹಾಲಿನ ಪುಡಿ ಪತ್ತೆಯಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವಿಜಯಪುರದಿಂದ ಆಗಮಿಸಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಬಸವಕಲ್ಯಾಣದ ಆಹಾರ ಸುರಕ್ಷತಾ ಅಧಿಕಾರಿ ಅಶ್ವಿನಿ ಘಾಳೆ ಅವರ ಜಂಟಿ ನೇತೃತ್ವದಲ್ಲಿ ಈ ಪರಿಶೀಲನೆ ನಡೆಯಿತು.

ದಾಳಿಯ ಸಮಯದಲ್ಲಿ ಮಹಾರಾಷ್ಟ್ರ ಮೂಲದ್ದೆನ್ನಲಾದ ‘ಡಿಲಿಶಿಯಾ’ ಬ್ರ್ಯಾಂಡ್‌ನ ಸುಮಾರು 875 ಕೆ.ಜಿ.ಯಷ್ಟು ಹಾಲಿನ ಪುಡಿ ದಾಸ್ತಾನು ಪತ್ತೆಯಾಗಿದೆ. ಕೆಎಂಎಫ್‌ ಆವರಣದಲ್ಲಿ ಅಪರಿಚಿತ ಬ್ರ್ಯಾಂಡ್‌ನ ಹಾಲಿನ ಪುಡಿ ಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಹಾಲಿನ ಪುಡಿ ಸಂಗ್ರಹಿಸಿಡಲಾಗಿದ್ದ ಗೋದಾಮನ್ನು ಸೀಜ್ ಮಾಡಿದ್ದಾರೆ.

ಅಲ್ಲದೆ, ಡೇರಿಯಲ್ಲಿ ಲಭ್ಯವಿದ್ದ ಹಾಲು, ಮೊಸರು ಮತ್ತು ಹಾಲಿನ ಪುಡಿಯ ಗುಣಮಟ್ಟವನ್ನು ಅಧಿಕಾರಿಗಳ ತಂಡ ಕೂಲಂಕಷವಾಗಿ ಪರಿಶೀಲಿಸಿದೆ. ಸಂಶಯಾಸ್ಪದ ಹಾಲಿನ ಪುಡಿ ಸೇರಿದಂತೆ ಒಟ್ಟು ನಾಲ್ಕು ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಅನಧಿಕೃತ ಹಾಗೂ ಸಂಶಯಾಸ್ಪದ ಹಾಲಿನ ಪುಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೆಎಂಎಫ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬೀದರ್ ಉಪವಿಭಾಗಾಧಿಕಾರಿ ಅಭಯ್‌ ಜೈನ್ ಅವರು, ಕೆಎಂಎಫ್ ಡೇರಿಯಲ್ಲಿ ಸಂಶಯಾಸ್ಪದ ಹಾಲಿನ ಪುಡಿ ಪತ್ತೆಯಾಗಿರುವುದು ನಿಜ. ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿಕೊಡಲಾಗಿದೆ. ಪರೀಕ್ಷೆಯ ಪೂರ್ಣ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.