Asianet Suvarna News Asianet Suvarna News

ಸರ್ಕಾರಕ್ಕೆ ಮೀಸಲಾತಿ ಹೋರಾಟದ ಕಂಟಕ: ವಾಲ್ಮೀಕಿ ಜಯಂತಿಯಂದು ಪ್ರತಿಭಟನೆಗೆ ಸಿದ್ಧತೆ

ಎಸ್​.ಸಿ., ಎಸ್​.ಟಿ ಮೀಸಲಾತಿ ಹೆಚ್ಚಳದ ಹೋರಾಟಗಾರರು ಈ ಬಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರ ಸೇರಿದಂತೆ ಮುಂಬರುವ ಚುನಾವಣೆ ಹಿನ್ನೆಲೆ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಸಾರಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Bagalkote reservation fighting hot ghee to state govt, Preparation for protest on Valmiki Jayanti akb
Author
First Published Sep 28, 2022, 6:03 PM IST

ಬಾಗಲಕೋಟೆ: ಎಸ್​.ಸಿ., ಎಸ್​.ಟಿ ಮೀಸಲಾತಿ ಹೆಚ್ಚಳದ ಹೋರಾಟದಿಂದ ಇದೀಗ ರಾಜ್ಯ ಸರ್ಕಾರಕ್ಕೆ ಮತ್ತೆ ಕಂಟಕ ಶುರುವಾಗಿದೆ. ಅತ್ತ ಸ್ವಾಮೀಜಿಗಳ ಹೋರಾಟ ನಡೆಯುತ್ತಿರುವುದರ ಮಧ್ಯೆ ಇತ್ತ ಸರ್ಕಾರ ಒಂದಿಲ್ಲೊಂದು ನೆಪವೊಡ್ಡಿ ಮೀಸಲಾತಿ ಘೋಷಣೆ ಮುಂದಕ್ಕೆ ಹಾಕುತ್ತಿದ್ದು, ಇದ್ರಿಂದ ರೋಸಿ ಹೋಗಿರುವ ಹೋರಾಟಗಾರರು ಈ ಬಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರ ಸೇರಿದಂತೆ ಮುಂಬರುವ ಚುನಾವಣೆ ಹಿನ್ನೆಲೆ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಸಾರಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ರಾಜ್ಯದಲ್ಲಿ ಎಸ್​ಸಿ ಮತ್ತು ಎಸ್​ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕಾಗಿ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಇವುಗಳ ಮಧ್ಯೆ ವಾಲ್ಮೀಕಿ ಸಮುದಾಯದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಗಳ ಹೋರಾಟ 236 ನೇ ದಿನಕ್ಕೆ ಕಾಲಿಟ್ಟಿದ್ದು, ಮೇಲಾಗಿ ಸರ್ಕಾರಕ್ಕೆ ಸ್ವಾಮೀಜಿಗಳು ನೀಡಿದ ಗಡುವು ಸಪ್ಟಂಬರ್ 28ಕ್ಕೆ ಅಂದರೆ ಇಂದಿಗೆ ಮುಕ್ತಾಯವಾಗಿದೆ. ಆದ್ರೂ ಸರ್ಕಾರ ಯಾವುದೇ ಮೀಸಲಾತಿ ಘೋಷಣೆ ಮಾಡಿಲ್ಲ. ಹೀಗಾಗಿ ಎಸ್​ಸಿ ಮತ್ತು ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ. 

ಜಿಲ್ಲಾ ಮಟ್ಟದ ಸರ್ಕಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರಕ್ಕೆ ನಿರ್ಧಾರ
ಇನ್ನು ನಿರಂತರವಾಗಿ ಎಸ್​ಸಿ ಮತ್ತು ಎಸ್​ಟಿ ಮೀಸಲಾತಿ (reservation) ಹೆಚ್ಚಳಕ್ಕಾಗಿ ನಡೆಯುತ್ತಿರುವ ಹೋರಾಟದ ಮಧ್ಯೆ ಈ ಬಾರಿ ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ (Freedom Park) ವಾಲ್ಮೀಕಿ ಸಮುದಾಯದ (Valmiki Comunity) ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರೊಂದಿಗೆ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಆದರೆ  ಈ ಬಾರಿ ನಡೆಯುವ ಜಿಲ್ಲಾ ಮಟ್ಟದ ಸರ್ಕಾರದ ವಾಲ್ಮೀಕಿ ಜಯಂತಿಗೆ  ಹೋಗದೇ ಅದನ್ನು ಬಹಿಷ್ಕರಿಸಲು ಬಾಗಲಕೋಟೆಯ (Bagalkote) ಹೋರಾಟಗಾರರು ನಿರ್ಧರಿಸಿದ್ದಾರೆ. ಇವುಗಳ ಮಧ್ಯೆ ಸಾಲದ್ದಕ್ಕೆ ಸರ್ಕಾರದ ಜನಪ್ರತಿನಿಧಿಗಳು ಸಹ ಜಿಲ್ಲಾ ಮಟ್ಟದ ವಾಲ್ಮೀಕಿ ಜಯಂತಿಗೆ ಬಾರದಂತೆ ನೋಡಿಕೊಂಡು ಅವರ ವಿರುದ್ದ ಕಪ್ಪು ಪಟ್ಟಿ ಧರಿಸಿ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೀಸಲಾತಿ ಹೆಚ್ಚಳ ಹೋರಾಟಗಾರ ಎಸ್​ಟಿ ಸಮುದಾಯದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದ್ದಾರೆ.    

ವಾಲ್ಮೀಕಿ ಶ್ರೀ ಹೋರಾಟ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಮಾರಸಂದ್ರ ಮುನಿಯಪ್ಪ ಆಕ್ರೋಶ          
 
ಮುಂಬರುವ ಚುನಾವಣೆಯಲ್ಲಿ ತಕ್ಕಪಾಠದ ಎಚ್ಚರಿಕೆ

ಇನ್ನು ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಒಂದಡೆಯಾದ್ರೆ ಮತ್ತೊಂದೆಡೆ ಇದು ಚುನಾವಣೆ ವರ್ಷವಾಗಿರೋದ್ರಿಂದ ಸರ್ಕಾರಕ್ಕೂ ಸಹ ಮೀಸಲಾತಿ ಹೆಚ್ಚಳ ತೀವ್ರ ಕಂಠಕವಾಗಿ ಪರಿಣಮಿಸಿದೆ. ಈಗಾಗಲೇ ಉಪ ಚುನಾವಣೆ ನೀತಿ ಸಂಹಿತೆ ಸೇರಿದಂತೆ ಬೇರೆ ಬೇರೆ ನೆಪವೊಡ್ಡಿ ಒಂದಿಲ್ಲೊಂದು ಕಾರಣಗಳಿಂದ ಮೀಸಲಾತಿ ಘೋಷಣೆ ಮುಂದಕ್ಕೆ ಹಾಕಿರೋ ಸರ್ಕಾರ ಚುನಾವಣೆವರೆಗೂ ಘೋಷಣೆ ಮಾಡದೇ ಹೋದಲ್ಲಿ ಸರ್ಕಾರದ ವಿರುದ್ದ ಮತ ಚಲಾಯಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಎಸ್​.ಸಿ ಮತ್ತು ಎಸ್​.ಟಿ ಸಮುದಾಯಗಳು ನಿರ್ಧರಿಸಿವೆ. ಸರ್ಕಾರ ಈಗಾಗಲೇ ಎಚ್ಚೆತ್ತು ಮೀಸಲಾತಿ ಹೆಚ್ಚಳ ಘೋಷಿಸಬೇಕು ಇಲ್ಲವಾದಲ್ಲಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದೇವೆ ಎಂದು ಹೋರಾಟಗಾರ, ಎಸ್​ಸಿ ಸಮುದಾಯದ ಮುಖಂಡ ರಾಜು ಮನ್ನಿಕೇರಿ ಎಚ್ಚರಿಕೆ ನೀಡಿದ್ದಾರೆ. 

ಮೀಸಲಾತಿ ಬಗ್ಗೆ ವಾರದಲ್ಲಿ ಸರ್ವಪಕ್ಷ ಸಭೆ: ಸಿಎಂ ಬೊಮ್ಮಾಯಿ

ಒಟ್ಟಿನಲ್ಲಿ ರಾಜ್ಯದಲ್ಲಿ ಪಟ್ಟು ಬಿಡದೇ ಎಸ್​.ಸಿ ಮತ್ತು ಎಸ್​ಟಿ ಮೀಸಲಾತಿ ಹೋರಾಟ ಮುಂದುವರೆದಿದ್ದು, ಇವುಗಳ ಮಧ್ಯೆ ಸರ್ಕಾರ ಮಾತ್ರ ಸ್ಪಂದನೆ ನೀಡಿಲ್ಲ, ಹೀಗಾಗಿ ಹೋರಾಟಗಾರರು ಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಕೊನೆಯ ಗಡುವು ನೀಡಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದನೆ ನೀಡುತ್ತೆ ಅಂತ ಕಾದು ನೋಡಬೇಕಿದೆ.
 

Follow Us:
Download App:
  • android
  • ios