ಎಸ್‌ಸಿ-ಎಸ್‌ಟಿ, ಒಬಿಸಿ ವಿಚಾರದಲ್ಲಿ ಆಯಾ ಜನಾಂಗಕ್ಕೆ ನ್ಯಾಯ ಕೊಡಿಸಲು ಸರ್ಕಾರ ಬದ್ಧವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ 

ವಿಧಾನಸಭೆ(ಸೆ.24): ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ಇನ್ನೊಂದು ವಾರದಲ್ಲಿ ಸರ್ವಪಕ್ಷ ಕರೆದು ಕಾನೂನಾತ್ಮಕವಾಗಿ ಕೈಗೊಳ್ಳಬೇಕಾದ ತೀರ್ಮಾನ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶುಕ್ರವಾರ ಸದನದಲ್ಲಿ ಜೆಡಿಎಸ್‌ ಗದ್ದಲದ ನಡುವೆಯೇ ಈ ವಿಚಾರವನ್ನು ತಿಳಿಸಿದ ಅವರು, ಎಸ್‌ಸಿ-ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್‌ದಾಸ್‌ ಸಮಿತಿ ಮತ್ತು ಮಾಜಿ ಉಪಲೋಕಾಯುಕ್ತ ನ್ಯಾ.ಸುಭಾಷ್‌ ಅಡಿ ಸಮಿತಿ ವರದಿಗಳು ಸಲ್ಲಿಕೆಯಾಗಿವೆ. ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ವಿಚಾರವಾಗಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಮುಂದಿನ ಹೆಜ್ಜೆಗಳನ್ನು ಇಡಬೇಕು. ಕಾನೂನು ತಜ್ಞರನ್ನು ಸಹ ಸಭೆಗೆ ಆಹ್ವಾನಿಸಲಾಗುವುದು. ಸಭೆ ನಡೆಸುವ ಸಂಬಂಧ ವಾರದಲ್ಲಿಯೇ ಸಮಯ ನಿಗದಿಗೊಳಿಸಲಾಗುವುದು ಎಂದು ತಿಳಿಸಿದರು.

ಎಸ್‌ಸಿ-ಎಸ್‌ಟಿ, ಒಬಿಸಿ ವಿಚಾರದಲ್ಲಿ ಆಯಾ ಜನಾಂಗಕ್ಕೆ ನ್ಯಾಯ ಕೊಡಿಸಲು ಸರ್ಕಾರ ಬದ್ಧವಾಗಿದೆ. ಅವರ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ನೀಡಲು ಸರ್ಕಾರವು ಬದ್ಧವಾಗಿದ್ದು, ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.

ಪಂಚಮಸಾಲಿ ಮೀಸಲಿಗೆ ಪ್ರಾಮಾಣಿಕ ಯತ್ನ: ಯಡಿಯೂರಪ್ಪ

ಧರಣಿ ಕೈಬಿಡುವಂತೆ ಸ್ವಾಮೀಜಿಗೆ ಮನವಿ

ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದರಿಂದ 200ಕ್ಕೂ ಹೆಚ್ಚು ದಿನಗಳಿಂದ ವಾಲ್ಮೀಕಿ ಸಮುದಾಯದ ಸ್ವಾಮೀಜಿ ನಡೆಸುತ್ತಿರುವ ಧರಣಿಯನ್ನು ಕೈಬಿಡಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣ, ಉದ್ಯೋಗದಲ್ಲಿ ಎಸ್‌ಸಿ-ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಾಗಬೇಕು ಎಂದು ಸ್ವಾಮೀಜಿ ಧರಣಿ ನಡೆಸುತ್ತಿದ್ದಾರೆ. ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ವರದಿ ಸಲ್ಲಿಸಿದ್ದು, ಅದರನ್ವಯ ಎಸ್‌ಸಿಗೆ ಶೇ.15-17 ಮತ್ತು ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ತಿಳಿಸಲಾಗಿದೆ. ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಹೆಚ್ಚಳವಾಗಲಿದೆ. ಈ ಹಿನ್ನೆಲೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.