ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಾಪತ್ತೆಯಾಗಿದ್ದ ಆರ್ಎಸ್ಎಸ್ ದೈಹಿಕ ಪ್ರಮುಖ ಪ್ರಮೋದ್ ಮಮದಾಪುರ ಅವರ ಮೃತದೇಹ ದತ್ತ ಕೆರೆಯಲ್ಲಿ ಪತ್ತೆಯಾಗಿದೆ. ನವರಾತ್ರಿ ಅನುಷ್ಠಾನಕ್ಕೆಂದು ತೆರಳಿದ್ದ ಇವರ ಸಾವಿನ ಬಗ್ಗೆ ಕುಟುಂಬಸ್ಥರು ತನಿಖೆಗೆ ಆಗ್ರಹಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಾಗಲಕೋಟೆ (ಅ.23): ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ದೈಹಿಕ ಪ್ರಮುಖ ಪ್ರಮೋದ್ ಮಮದಾಪುರ (44) ಅವರ ಮೃತದೇಹ ಸ್ಥಳೀಯ ದತ್ತ ಕೆರೆಯಲ್ಲಿ ಪತ್ತೆಯಾಗಿದೆ.
ಮೃತ ಪ್ರಮೋದ್ ಮಮದಾಪುರ ಅವರು ಜಮಖಂಡಿ ಮೂಲದವರಾಗಿದ್ದು, ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಂಘದ ಕಾರ್ಯಕರ್ತರಿಗೆ ದಂಡ ಪ್ರಹಾರ, ಕರಾಟೆ ಸೇರಿದಂತೆ ವಿವಿಧ ಶಾರೀರಿಕ ಕಸರತ್ತುಗಳ ತರಬೇತಿ ನೀಡುವ ದೈಹಿಕ ಶಿಕ್ಷಕರಾಗಿದ್ದರು.
ಅನುಷ್ಠಾಕ್ಕೆ ಕೂಡುವುದಾಗಿ ಹೇಳಿದ್ದವರು ಶವವಾದರು:
ನವರಾತ್ರಿ ಆರಂಭದಲ್ಲಿ ಅನುಷ್ಠಾನಕ್ಕೆ ಕೂಡುತ್ತೇನೆ. ಯಾರು ನನಗೆ ಕರೆ ಮಾಡಬೇಡಿ ಎಂದು ಪೋನ್ ಸ್ವಿಚ್ ಆಪ್ ಮಾಡಿ ಪ್ರಮೋದ್ ಹೋಗಿದ್ದರು. ಆದರೆ, ಇದೀಗ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಕುಟುಂಬ ಸದಸ್ಯರನ್ನು ಕಳೆದುಕೊಂಡು ಪ್ರಮೋದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಮೋದ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.


