ಬಾಗಲಕೋಟೆಯ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ, ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಬೆಲ್ಟ್‌ನಿಂದ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಈ ರಾಕ್ಷಸಿ ಕೃತ್ಯ ನಡೆಸಿದ, ಪರವಾನಗಿ ಇಲ್ಲದೆ ಶಾಲೆ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ (ಡಿ.20): ಬುದ್ಧಿಮಾಂದ್ಯ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿ, ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧ ರಾಕ್ಷಸಿ ಕೃತ್ಯ ನಡೆಸಿದ ದಂಪತಿಯನ್ನು ಬಂಧಿಸಲಾಗಿದೆ. ಸಿದ್ದಗಿರಿ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ನಡೆಸುವ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬೆಲ್ಟ್‌ ಮತ್ತು ಪ್ಲಾಸ್ಟಿಕ್‌ ಪೈಪ್‌ನಿಂದ ಮೃಗದ ರೀತಿಯಲ್ಲಿ ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ಬಾಗಲಕೋಟೆಯ ನವನಗರದ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದೆ.

ನವನಗರದ ಸೆಕ್ಟರ್ ನಂ 54ರಲ್ಲಿ ಅಂಧ ಮಕ್ಕಳ ಶಾಲೆ ಇದ್ದು ಅಲ್ಲಿ ಈ ಘಟನೆ ನಡೆದಿದೆ. ನೆಲಕ್ಕೆ ಬಿದ್ದು ಹೊರಳಾಡಿದರೂ ಬಿಡದೇ ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ಬುದ್ಧಿಮಾಂದ್ಯ ಬಾಲಕ 16 ವರ್ಷದ ದೀಪಕ್ ರಾಠೋಡ್‌ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಅಕ್ಷಯ್‌ ಹಾಗೂ ಆತನ ಪತ್ನಿ ಆನಂದಿಯನ್ನು ಬಂಧಿಸಲಾಗಿದೆ.

ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕೇಂದ್ರದ ಮುಂದೆ ಪಾಲಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಹಲ್ಲೆ ಮಾಡಿರೋ ಅಕ್ಷಯ್ ಹಾಗೂ ಆನಂದಿಯನ್ನು ವಿಚಾರಣೆ ಮಾಡಿ ಬಂಧನಕ್ಕೆ ಒಳಪಡಿಸಿದ್ದಾರೆ. ವಸತಿ ಶಾಲೆ ವಿರುದ್ದ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೈಸೆನ್ಸ್‌ ಪಡೆಯದೇ ಕೇಂದ್ರ ನಡೆಸುತ್ತಿದ್ದ ಆರೋಪಿಗಳು

ವಿಚಾರಣೆ ವೇಳೆ ಲೈಸೆನ್ಸ್ ಪಡೆಯದೇ ಬುದ್ಧಿಮಾಂದ್ಯ ಕೇಂದ್ರ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ. ವಸತಿ ಶಾಲೆ ಮುಚ್ಚಿಸೋಕೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಮುಂದಾಗಿದ್ದು, ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಸ್ಥಳಾಂತರ ಮಾಡಲು ಸಿದ್ದತೆ ನಡೆಸಿದೆ. ಲೈಸೆನ್ಸ್ ಹೊಂದಿರದ ವಸತಿ ಶಾಲೆ ಮಕ್ಕಳನ್ನು ಶಿಪ್ಟ್ ಮಾಡೋ ಕೆಲಸ ಮಾಡುತ್ತಿದ್ದು, ಆರೋಪಿಗಳ ವಿರುದ್ಧ ಶಿಸ್ತು ಕ್ರಮಕ್ಕೂ ಮುಂದಾಗಿದೆ.

ಲೈಸೆನ್ಸ್‌ ಇಲ್ಲದೆ ನಡೆಯುತ್ತಿದ್ದ ಶಾಲೆ

ಮಗುವಿನ ಮೇಲೆ ಈ ಸಂಸ್ಥೆ ನಡೆಸಿರುವ ಕ್ರೌರ್ಯ ಸಮಾಜಕ್ಕೆ ಒಂದು ಕೆಟ್ಟ ಸಂದೇಶ. ಇದನ್ನ ನೋಡಿದರೆ, ಪ್ರತಿಯೊಬ್ಬರ ಮನಸ್ಸು ಮಿಡಿಯುತ್ತೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಡಿ ಬರುವ, ವಿಕಲಚೇತನ & ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ 24-4-2025 ಕ್ಕೆ ಸಿದ್ದಶಿರಿ ಶಿಕ್ಷಣ ಸಂಸ್ಥೆ ನೋಂದಣಿ ಮಾಡಿದ್ದಾರೆ. ಡಿಸೇಬಲ್ ಆಕ್ಟ್ 2016 ರ ಪ್ರಕಾರ ವಿಕಲಾಂಗ ಚೇತನ ಮಕ್ಕಳ ಜೊತೆ ಕೆಲಸ ಮಾಡುತ್ತೇವೆ ಅಂತ ನೋಂದಣಿ ಆಗಿದೆಯೇ ಹೊರತು, ಯಾವುದೇ ರೀತಿ ದಿವ್ಯಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತೇವೆ ಅಂತ ಪರವಾನಿಗೆ ತಗೊಂಡಿಲ್ಲ.

ಬುದ್ಧಿಮಾಂದ್ಯ ಶಾಲೆ ನಡೆಸಬೇಕಾದರೆ, ಕಟ್ಟಡ ಸೇರಿ ಮೂಲಭೂತ ಸೌಲಭ್ಯ ಬಗ್ಗೆ ವಿಕಲಚೇತನ ಅಧಿಕಾರಿಗಳು ವರದಿ ಕೊಟ್ಟಮೇಲೆ ಶಾಲೆಗೆ ಲೈಸೆನ್ಸ್‌ ಸಿಗಲಿದೆ. ದಿವ್ಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಯಾವುದೇ ಪರ್ಮಿಷನ್ ತೆಗೆದುಕೊಂಡಿಲ್ಲ ಎಂದು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪ್ರಭಾಕರ್ ಹೇಳಿದ್ದಾರೆ.

ಘಟನೆ ಗೊತ್ತಾಗಿದ್ದು ಹೇಗೆ?

ಸುಮಾರು ಮೂರು ತಿಂಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. 16 ವರ್ಷದ ಬುದ್ಧಿಮಾಂದ್ಯ ಬಾಲಕ ದೀಪಕ್ ರಾಥೋಡ್ ಮೇಲೆ ಅಕ್ಷಯ್ ಮನಸೋ ಇಚ್ಛೆ ಹಲ್ಲೆ ನಡೆಸುತ್ತಿದ್ದಾಗ, ಅಲ್ಲಿನ ಸಿಬ್ಬಂದಿಯೊಬ್ಬರು ಈ ದೃಶ್ಯವನ್ನು ರಹಸ್ಯವಾಗಿ ಚಿತ್ರಿಸಿಕೊಂಡಿದ್ದರು. ಇತ್ತೀಚೆಗೆ ಅಕ್ಷಯ್ ಅನ್ಯ ಕಾರಣಗಳಿಗಾಗಿ ಆ ಕೆಲಸಗಾರನನ್ನು ಕೆಲಸದಿಂದ ತೆಗೆದುಹಾಕಿದ್ದ. ಇದರಿಂದ ಆಕ್ರೋಶಗೊಂಡ ಕೆಲಸಗಾರ, ತನ್ನ ಬಳಿಯಿದ್ದ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಕ್ಷಯ್ ಬಾಲಕನಿಗೆ ತೀವ್ರವಾಗಿ ಹೊಡೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ಅಕ್ಷಯ್ ಪತ್ನಿ ಆನಂದಿ, ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನೋವಿನಿಂದ ಬಾಲಕ ಕಿರುಚಾಡಿದರೂ ದಂಪತಿಗಳು ದಯೆ ತೋರಿಸದೆ ಹಿಂಸೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Scroll to load tweet…