ಬಾಗಲಕೋಟೆ: ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಗ್ರಾಮ ವಿದ್ಯುತ್ ಪ್ರತಿನಿಧಿಗಳು..!
ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರೋ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಂದ ಸೇವೆ ಖಾಯಂಗೊಳಿಸಲು ಸರ್ಕಾರಕ್ಕೆ ಡೆಡ್‌ಲೈನ್, ಮಾತು ಮರೆತ ಸಚಿವರು, ಹೋರಾಟಕ್ಕೆ ನಿರ್ಧಾರ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್. ಬಾಗಲಕೋಟೆ.
ಬಾಗಲಕೋಟೆ(ಆ.26): ಅವರೆಲ್ಲಾ ಕಳೆದ 18 ವರ್ಷಗಳಿಂದ ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕೆಲ್ಸ ಮಾಡ್ತಿದ್ದಾರೆ, ಸೇವೆಯನ್ನ ಖಾಯಂಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಸರ್ಕಾರದ ಸ್ಪಂದನೆ ಮಾತ್ರ ಸಿಕ್ಕಿಲ್ಲ, ಸಾಲದ್ದಕ್ಕೆ ಸಚಿವರು ಸಹ ಮಾತು ಕೊಟ್ಟು ಮರೆತಿದ್ದಾರಂತೆ. ಇದ್ರಿಂದ ಆಕ್ರೋಶಗೊಂಡಿರೋ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಇದೀಗ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಹೌದು, ನಾವೀಗ ಹೇಳಲು ಹೊರಟಿರುವುದು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಹೋರಾಟದ ಬಗ್ಗೆ. ಹೌದು. ರಾಜ್ಯದಲ್ಲಿ ಕಳೆದ 18 ವರ್ಷಗಳ ಹಿಂದೆ ಅಂದ್ರೆ ಎಸ್.ಎಂ.ಕೃಷ್ಣ ಅವರ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಯುವಕರಿಗೆ ಅವಕಾಶ ಕೊಡಬೇಕೆಂಬ ಉದ್ದೇಶದಿಂದ ಸುಮಾರು 3,700 ಜನರನ್ನ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ನೇಮಕವಾಗಿದ್ದ ಇವರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋ ವಿದ್ಯುತ್ ಬಿಲ್ ನೀಡುವುದು, ಬಿಲ್ ವಸೂಲಿ ಸೇರಿದಂತೆ ಪಂಚಾಯತಿ ವ್ಯಾಪ್ತಿಯ ಇಲಾಖೆಯ ಎಲ್ಲ ಕೆಲ್ಸ ನಿಭಾಯಿಸುತ್ತಾ ಬಂದಿದ್ದರು. ಆದರೆ ನಂತರ ಬರುಬರುತ್ತಾ ವೇತನ ಕಡಿಮೆ ಎನಿಸಿದಾಗ ಸರ್ಕಾರಕ್ಕೆ ಮತ್ತೇ ಸೇವೆಯನ್ನ ಖಾಯಂಗೊಳಿಸುವಂತೆ ಮನವಿ ನೀಡಲು ಮುಂದಾದರು. ಆದ್ರೂ ಸರ್ಕಾರ ಇವರನ್ನ ಖಾಯಂಗೊಳಿಸದೇ ಇವರೊಂದಿಗೆ ವ್ಯವಹಾರಿಕ ಒಪ್ಪಂದವನ್ನು ಮಾಡಿಕೊಂಡು 12 ಸಾವಿರ ವೇತನ ನೀಡುತ್ತಾ ಬಂತು. ಆದರೆ ಇವರನ್ನ ಖಾಯಂಗೊಳಿಸುವಂತೆ ಕರ್ನಾಟಕದ ಉಚ್ಛ ನ್ಯಾಯಾಲಯ ತೀರ್ಪು ನೀಡಿ ಇವರ ಸೇವೆಗೆ ಇಲಾಖೆಯ ಕಿರಿಯ ಮೀಟರ್ ರೀಡರ್ ಅಥವಾ ತತ್ಸಮಾನ ಹುದ್ದೆ ರಚಿಸಿ ಖಾಯಂಗೊಳಿಸುವಂತೆ ಆದೇಶಿಸಿದೆಯಂತೆ, ಆದರೆ ಇದೂವರೆಗೂ ಸರ್ಕಾರ ಈ ಬಗ್ಗೆ ಕ್ರಮವಹಿಸುತ್ತಿಲ್ಲ ಎಂದು ಹೋರಾಟಕ್ಕೆ ಮುಂದಾಗಿರೋ ಬೆಂಗಳೂರಿನ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ಕಮತಗಿ ಕಾಂಚಿವರಂ ರೇಷ್ಮೆ ಸೀರೆಗಳಿಗೆ ಫಿದಾ ಆದ ವಿದೇಶಿಯರು!
ಸಚಿವರ ದ್ವಂದ್ವ ನಿಲುವಿನಿಂದ ಅಚ್ಚರಿಗೊಂಡಿರೋ ಗ್ರಾಮ ವಿದ್ಯುತ್ ಪ್ರತಿನಿಧಿಗಳು
ಹೌದು, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಅತ್ತ ತಮ್ಮ ಸೇವೆಯನ್ನ ಖಾಯಂಗೊಳಿಸುವಂತೆ ಹೋರಾಟ ನಡೆಸಿದ್ದರ ಮದ್ಯೆ ಇಂಧನ ಖಾತೆ ಸಚಿವ ಸುನೀಲಕುಮಾರ ಅವರ ನಿಲುವು ಮಾತ್ರ ಇವರಿಗೆ ಅಚ್ಚರಿ ತಂದಿದೆ. ಯಾಕೆಂದರೆ ಇತ್ತ ರಾಜ್ಯ ಇಂಧನ ಸಚಿವರಾದ ಸುನೀಲ ಕುಮಾರ ಅವರು ಸಹ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನ ಖಾಯಂಗೊಳಿಸುವ ಸಂಭಂದ ಅಧಿಕಾರಿಗಳ ಸಭೆ ಮತ್ತು ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಭರವಸೆ ನೀಡುತ್ತಿದ್ದದ್ದು ಒಂದು ಭಾಗವಾದ್ರೆ ಮತ್ತೊಂದೆಡೆ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನ ಖಾಯಂಗೊಳಿಸುವಂತೆ ಕರ್ನಾಟಕ ಉಚ್ಛನ್ಯಾಯಾಲಯ ಆದೇಶ ನೀಡಿದರೂ ಸಹ ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸದೇ ವಿಭಾಗೀಯ ಪೀಠಕ್ಕೆ ಇವರ ವಿರುದ್ದ ಮೇಲ್ಮನವಿ ಸಲ್ಲಿಸಿದೆಯಂತೆ. ಹೀಗಾಗಿ ಅತ್ತ ಸಚಿವರ ದ್ವಂದ್ವ ನಿಲುವು, ಇತ್ತ ಇದೆಲ್ಲದರ ಮಧ್ಯೆ ಕೋರ್ಟಗೆ ಮೇಲ್ಮನವಿ ಸಲ್ಲಿಸಿರೋದು ಅಚ್ಚರಿ ತಂದಿದೆ. ಇದರಿಂದ ನಮ್ಮ ಕೂಗಿಗೆ ಬೆಲೆ ಇಲ್ಲದಂತಾಗಿದೆ ಎಂದು ಗ್ರಾಮ ವಿದ್ಯುತ್ ಪ್ರತಿನಿಧಿಗಳು ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.
ಸ್ಲೀಪರ್ ಬಸ್ ಇಲ್ಲದಕ್ಕೆ ಬಸವಳಿದ ಪ್ರಯಾಣಿಕರು..!
ಸೆ.6ರವರೆಗೆ ಸರ್ಕಾರಕ್ಕೆ ಡೆಡ್‌ಲೈನ್
ಇನ್ನು ತಮ್ಮನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಾಕಷ್ಟು ಬಾರಿ ಇಲಾಖಾ ಸಚಿವರಿಗೆ, ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ. ಹೀಗಾಗಿ ಆಸಮಾಧಾನಗೊಂಡಿರೋ ಹಿನ್ನೆಲೆಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಇದೀಗ ಸರ್ಕಾರಕ್ಕೆ ಸಪ್ಟಂಬರ್ 6ರವರೆಗೆ ಡೆಡ್‌ಲೈನ್ ನೀಡಿದ್ದು, ಅಷ್ಟರೊಳಗೆ ಸರ್ಕಾರ ಸ್ಪಂದಿಸಿ ಸೇವೆಯನ್ನ ಖಾಯಂಗೊಳಿಸಬೇಕು, ಇಲ್ಲವಾದಲ್ಲಿ ಈಗಾಗಲೇ ರಾಜ್ಯದಲ್ಲಿರುವ 5 ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆ ನಡೆಸಿರೋ ನೌಕರರು, ಒಂದೊಮ್ಮೆ ಸರ್ಕಾರ ಸ್ಪಂದನೆ ನೀಡದೇ ಹೋದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಸೆ. 6ರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದ ಮೂಲಕ ಬೃಹತ್ ಹೋರಾಟ ನಡೆಸಲು ಮುಂದಾಗಿರುವುದಾಗಿ ಅಖಿಲ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಆಧ್ಯಕ್ಷ ಕಾಂತರಾಜ್ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಕಳೆದ 18 ವರ್ಷಗಳಿಂದ ಗ್ರಾಮ ವಿದ್ಯುತ್ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿರುವ 3700 ಜನರು ಇದೀಗ ಸರ್ಕಾರಕ್ಕೆ ಡೆಡ್‌ಲೈನ್ ನೀಡಿ ಹೋರಾಟದ ಎಚ್ಚರಿಕೆ ನೀಡಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೇ ಅಂತ ಕಾದು ನೋಡಬೇಕಿದೆ.