ಸ್ಲೀಪರ್ ಬಸ್ ಇಲ್ಲದಕ್ಕೆ ಬಸವಳಿದ ಪ್ರಯಾಣಿಕರು..!
ರಾಜಧಾನಿ ಬೆಂಗಳೂರಿಗೆ ಬಾಗಲಕೋಟೆಯಿಂದ ಸ್ಲೀಪರ್ ಬಸ್ ಸೇವೆಯೇ ಇಲ್ಲ ಇದರಿಂದ ಜನರಿಗೆ ತೊಂದರೆ
ಈಶ್ವರ ಶೆಟ್ಟರ
ಬಾಗಲಕೋಟೆ(ಆ.25): ಬಾಗಲಕೋಟೆ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದೇ 25 ವರ್ಷಗಳು ಗತಿಸಿದವು. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಿದ್ದಾರೆ. ಸಾಲದ್ದೆಂಬಂತೆ ಶಾಸಕರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಇದ್ದರೂ ಜಿಲ್ಲಾ ಕೇಂದ್ರದಿಂದ ರಾಜ್ಯಧಾನಿಯಾದ ಬೆಂಗಳೂರಿಗೆ ಒಂದೇ ಒಂದು ರಸ್ತೆ ಸಾರಿಗೆ ಸಂಸ್ಥೆಯಿಂದ ಸ್ಲೀಪಿಂಗ್ ಕೋಚ್ (ಮಲಗಿ ಹೋಗುವ ವ್ಯವಸ್ಥೆ ಹೊಂದಿದ) ಬಸ್ ಇಲ್ಲವೆಂದರೆ ನಂಬಲೇ ಬೇಕು. ಅದು ಬಾಗಲಕೋಟೆಯ ದೌರ್ಭಾಗ್ಯವೆಂದರೆ ತಪ್ಪಾಗಲಾರದು.
ಖಾಸಗಿ ವಲಯದಿಂದ ಪ್ರತಿದಿನ ಹತ್ತಕ್ಕೂ ಹೆಚ್ಚು ಬಾಗಲಕೋಟೆ ನಗರ, ನವನಗರ, ವಿದ್ಯಾಗಿರಿಯಿಂದ ಬೆಂಗಳೂರಿಗೆ ಸುಸಜ್ಜಿತ ಸೌಲಭ್ಯಗಳ ಹೊಂದಿರುವ ಸ್ಲೀಪಿಂಗ್ ಕೋಚ್ ಬಸ್‌ಗಳು ತೆರಳುತ್ತವೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಂದೇ ಒಂದು ಬಸ್ ಕೂಡ ಜಿಲ್ಲಾ ಕೇಂದ್ರದಿಂದ ತೆರಳಲು ಸಾಧ್ಯವಿಲ್ಲವೆಂದರೆ ವ್ಯವಸ್ಥೆ ಎಷ್ಟೊಂದು ಕೆಟ್ಟುಹೋಗಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಹುಬ್ಬಳ್ಳಿ: ನಷ್ಟದ ವಾಯವ್ಯ ಸಾರಿಗೆ ಮೇಲೆತ್ತಲು ಹೊಸ ಪ್ಲ್ಯಾನ್!
ಸ್ಥಗಿತಗೊಂಡ ಬಸ್:
ಕಳೆದ ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಬೆಂಗಳೂರು ತಲುಪಲು ಅನುಕೂಲವಾಗಲು ಜಿಲ್ಲೆಯ ರಬಕವಿ-ಬನಹಟ್ಟಿಯಿಂದ ಬೆಂಗಳೂರಿಗೆ ತೆರಳಲು ಕೊರೋನಾ ಬಸ್‌ನ್ನು ಪ್ರತಿದಿನ ಬಿಡಲಾಗುತ್ತಿದ್ದು, ಸುಸಜ್ಜಿತ ಹಾಗೂ ಹವಾ ನಿಯಂತ್ರಿತ ಮಲಗಿ ಹೋಗಲು ವ್ಯವಸ್ಥಿತವಾಗಿದ್ದ ಈ ಬಸ್ಸಿನ ಸಂಚಾರ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಪ್ರಯಾಣಿಕರ ಕೊರತೆ, ಅತೀಯಾದ ವೆಚ್ಚದಿಂದ ಸಂಚಾರ ಸಾಧ್ಯವಿಲ್ಲ ಎಂಬ ಸಾರಿಗೆ ಇಲಾಖೆಯ ವಾದವನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲದ ಜಿಲ್ಲೆಯ ಜನಪ್ರತಿನಿಧಿಗಳ ದೌರ್ಬಲ್ಯವನ್ನು ಕಂಡುಕೊಂಡಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಕೊರೋನಾ ಬಸ್‌ನ್ನು ಆರಂಭಿಸದೇ ಸುಮ್ಮನಾಗಿದ್ದಾರೆ.
ಕೊರೋನಾ ಬಸ್ ಸಂಚಾರ ಸ್ಥಗಿತದಿಂದ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ದುಬಾರಿ ವೆಚ್ಚದ ವಿಮಾನ ಪ್ರಯಾಣಕ್ಕೆ ಹೊಂದಿಕೊಂಡಿದ್ದರೆ, ಇನ್ನು ಕೆಲವರು ರೈಲ್ವೆ ಪ್ರಯಾಣಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಮಾಜಿ ಜನ ಪ್ರತಿನಿಧಿಗಳು, ನಿತ್ಯ ಪ್ರಯಾಣಿಸುವ ಸುರಕ್ಷಿತ ದೃಷ್ಟಿಯಿಂದ ರಸ್ತೆ ಸಾರಿಗೆ ಸಂಸ್ಥೆಯನ್ನು ಅವಲಂಭಿಸಿದ್ದ ಪ್ರಯಾಣಿಕರಿಗೆ ಮಾತ್ರ ಇನ್ನಿಲ್ಲದ ತೊಂದರೆಯಾಗಿದೆ. ಸಾದಾ ಬಸ್‌ಗಳು ಇಲ್ಲ:
ಜಿಲ್ಲಾ ಕೇಂದ್ರದಿಂದ ಸುಸಜ್ಜಿತವಾಗಿರುವ ಸ್ಲೀಪಿಂಗ್ ಕೋಚ್ ಬಸ್ ಇಲ್ಲವಾದ ನಂತರ ಬೀಳಗಿ ಹಾಗೂ ಬಾದಾಮಿಯಿಂದ ಬೆಂಗಳೂರಿಗೆ ಸಾದಾ ಸ್ಲೀಪಿಂಗ್ ಕೋಚ್ ಬಸ್‌ಗಳ ಓಡಾಟ ಆರಂಭಿಸಿದ್ದು, ರಸ್ತೆ ಸಾರಿಗೆ ಸಂಸ್ಥೆ ಇದೀಗ ಬಾದಾಮಿಯಿಂದ ಹೊರಡುವ ಬಸ್‌ನ್ನು ಸ್ಥಗಿತಗೊಳಿಸಿ ತಿಂಗಳುಗಳೇ ಗತಿಸಿವೆ. ಬೀಳಗಿಯಿಂದಲೂ ಹೊರಡುವ ಬಸ್ ಕೆಲಕಾಲ ಸ್ಥಗಿತಗೊಂಡಿತ್ತು. ಇದೀಗ ನಾಲ್ಕಾರು ದಿನಗಳಿಂದ ಮತ್ತೆ ಓಡಾಟ ಆರಂಭಿಸಿದೆ. ಇದರಿಂದ ಪ್ರಯಾಣಿಕರಿಗೆ ಸೂಕ್ತ ಸೀಟುಗಳು ಲಭ್ಯ ಇಲ್ಲದೇ ಮತ್ತೆ ಖಾಸಗಿ ವಲಯದ ಬಸ್‌ಗಳನ್ನೇ ಅವಲಂಭಿಸುವಂತಾಗಿದೆ.
ಜಿಲ್ಲೆಯ ಸಚಿವರು, ಶಾಸಕರು ಆಸಕ್ತಿ ವಹಿಸಿ ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ಸುಸಜ್ಜಿತ ಬಸ್‌ಗಳ ಓಡಾಟವನ್ನು ರಾಜಧಾನಿಗೆ ಆರಂಭಿಸದೇ ಹೋದರೆ ಬರುವ ದಿನಗಳಲ್ಲಿ ಸಾರಿಗೆ ಸಂಸ್ಥೆಗಳ ಮೇಲಿನ ವಿಶ್ವಾಸವನ್ನೆ ಕಳೆದುಕೊಂಡರೆ ಆಚ್ಚರಿ ಪಡಬೇಕಾಗಿಲ್ಲ.
ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!
ಜಿಲ್ಲಾ ಕೇಂದ್ರದಿಂದ ನಿತ್ಯ ಬೆಂಗಳೂರಿಗೆ ಸ್ಲೀಪಿಂಗ್ ಕೋಚ್ ಬಸ್ ಇಲ್ಲದೇ ಇರುವುದರಿಂದ ಬಹಳಷ್ಟು ತೊಂದರೆಯಾಗಿದೆ. ಇದ್ದ ಬಸ್‌ಗಳನ್ನು ಸಹ ರದ್ದುಪಡಿಸಿದ್ದರಿಂದ ಬೆಂಗಳೂರಿನಿಂದ ಬಾಗಲಕೋಟೆ, ಬಾಗಲಕೋಟೆಯಿಂದ-ಬೆಂಗಳೂರಿಗೆ ಪ್ರಯಾಣಿಸುವುದೆಂದರೆ ಸಮಯ ಹಾಗೂ ನೆಮ್ಮದಿ ಕಳೆದುಕೊಂಡು ಸುತ್ತಿಬಳಸಿ ಪ್ರಯಾಣಿಸುವ ಅನಿವಾರ್ಯತೆ ಬಂದಿದೆ ಅಂತ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.
ಹಲವು ಕಾರಣಗಳಿಂದ ಬೀಳಗಿ ಹಾಗೂ ಬಾದಾಮಿಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ಸಾದಾ ಸ್ಲೀಪಿಂಗ್ ಕೋಚ್ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಬೀಳಗಿಯಿಂದ ಮತ್ತೆ ಬೆಂಗಳೂರಿಗೆ ಪ್ರಯಾಣ ಆರಂಭಿಸಲಾಗಿದ್ದು, ಸದ್ಯದಲ್ಲಿಯೇ ಬಾದಾಮಿಯಿಂದಲೂ ಮತ್ತೆ ಬಸ್‌ಗಳ ಓಡಾಟ ಆರಂಬಿಸಲಾಗುವುದು ಅಂತ ಬಾಗಲಕೋಟೆ ರಸ್ತೆ ಸಾರಿಗೆ ವಿಭಾಗಿಯ ಅಧಿಕಾರಿಗಳು ಹೇಳಿದ್ದಾರೆ.