ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ: ಮಂಡ್ಯ ಜಿಲ್ಲಾಡಳಿತದ ಕ್ರಮಕ್ಕೆ ರಾಜಮಾತೆ ಅಸಮಾಧಾನ

ಬೇಬಿ ಬೆಟ್ಟ ಮತ್ತು ಸುತ್ತಲಿನ 1,623 ಎಕರೆ ಜಾಗ ನಮ್ಮ ಖಾಸಗಿ ಆಸ್ತಿಯಾಗಿದ್ದು, ಮಂಡ್ಯ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿರುವುದು ಸರಿಯಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Baby betta is our Private property Pramodadevi Wodeyar displeasures about Mandya District Administration akb

ವರದಿ‌: ಮಧು.ಎಂ.ಚಿನಕುರಳಿ
ಮೈಸೂರು: ಬೇಬಿ ಬೆಟ್ಟ ಮತ್ತು ಸುತ್ತಲಿನ 1,623 ಎಕರೆ ಜಾಗ ನಮ್ಮ ಖಾಸಗಿ ಆಸ್ತಿಯಾಗಿದ್ದು, ಮಂಡ್ಯ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿರುವುದು ಸರಿಯಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಅಸ್ತಿತ್ವಕ್ಕೆ ಬರುವ ಮುನ್ನ ಮೈಸೂರು ಸಾಮ್ರಾಜ್ಯ ಇತ್ತು. 1950ರಲ್ಲಿ ಭಾರತ ಸರ್ಕಾರದೊಂದಿಗೆ ರಾಜ್ಯವನ್ನು ವಿಲೀನ ಮಾಡಲಾಯಿತು. ಆಗ  ಖಾಸಗಿ ಆಸ್ತಿಯನ್ನು ಘೋಷಿಸಿಕೊಂಡು ಉಳಿದ ಆಸ್ತಿಗಳನ್ನು ವಿಲೀನಗೊಳಿಸುವಂತೆ ಸೂಚಿಸಲಾಯಿತು. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತು. ರಾಜವಂಶದವರು ಖಾಸಗಿ ಆಸ್ತಿ ಎಂದು ಘೋಷಿಸಿಕೊಂಡ 'ಆಸ್ತಿ ಪಟ್ಟಿ'ಯನ್ನು 1951ರಲ್ಲಿ ಸರ್ಕಾರಿ ಆದೇಶದ ಮೂಲಕವೂ ಖಾತ್ರಿಪಡಿಸಲಾಯಿತು ಎಂದು ತಿಳಿಸಿದರು.

ಅದು ಅಮೃತ ಕಾವಲ್ ಆಗಿತ್ತು.

ಬೇಬಿ ಬೆಟ್ಟ ಹಿಂದೆ ಅಮೃತ ಕಾವಲ್ ಆಗಿತ್ತು. ಕೃಷಿ ಮಾಡಲೂ ಯೋಗ್ಯವಲ್ಲದ ಭೂಮಿಯಾದ್ದರಿಂದ ಬಹುವರ್ಷ ಹಾಗೆಯೇ ಇತ್ತು. ಸುಮಾರು 1623 ಎಕರೆ ಜಾಗ ನಮ್ಮ ಖಾಸಗಿ ಆಸ್ತಿ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಆಡಳಿತ ನಡೆಸುವವರಿಗೂ ಗೊತ್ತಿದೆ. ಹೀಗಿದ್ದರೂ ಮಂಡ್ಯ ಜಿಲ್ಲಾಡಳಿತ ಬಿ ಖರಾಬು ಎಂದು ಘೋಷಿಸಿತು. ಯಾಕೆ ಹೀಗೆ ಮಾಡಿದರು ಎಂಬುದು ನನಗೆ ಅರ್ಥವಾಗಿಲ್ಲ. ಬಿ ಖರಾಬು ರದ್ದುಪಡಿಸಿ ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ನಾನು ಪತ್ರ ಬರೆದಿದ್ದೆ. ಇದುವರೆಗೂ ಸ್ಪಂದಿಸಿಲ್ಲ. ಈಗ ಆರ್.ಟಿ.ಸಿ.ಯಲ್ಲಿ ಏನಂದು ನಮೂದಾಗಿದೆ ಎಂಬುದು ಗೊತ್ತಿಲ್ಲ. ಆದರೆ ಕೈಬರಹದ ಆರ್‌.ಟಿ.ಸಿ. ಮತ್ತು 1951ರಲ್ಲಿ ಹೊರಡಿಸಿದ ಆಸ್ತಿ ಪಟ್ಟಿಯಲ್ಲಿ ಸದರಿ ಆಸ್ತಿ ನಮ್ಮದು ಎಂಬುದು ಉಲ್ಲೇಖವಾಗಿದೆ ಎಂದರು.

ಟಿಪ್ಪುವಿನ ಮೇಲೆ ಮೈಸೂರು ರಾಜಮಾತೆ ಮಾಡಿದ ಗಂಭೀರ ಆರೋಪವೇನು?

ಅಲ್ಲೇ ಯಾಕೆ ಸ್ಪೋಟ ಮಾಡ್ತಿರಿ

ಎಲ್ಲಿ ಸ್ಫೋಟ ಮಾಡಿದರೆ ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದು ವಿಜ್ಞಾನಿಗಳಿಗೆ ಗೊತ್ತಿರಬೇಕು. ಅವರು ವಿಜ್ಞಾನಿಗಳಾಗಿರುವುದರಿಂದ ಇದೆಲ್ಲವನ್ನೂ ನಾನು ಹೇಳಿಕೊಡುವ ಅಗತ್ಯವಿಲ್ಲ. ಅದೇ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಬೇಕು ಅಂತ ಏನಿದೆ ? ಬೇರಾವುದೇ ಸರ್ಕಾರಿ ಜಾಗದಲ್ಲಿ ಟ್ರಯಲ್ ಮಾಡಬಹುದಿತ್ತು. ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಕಂಡುಕೊಳ್ಳಬಹುದಿತ್ತು. ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ. ನಮ್ಮ ಆಸ್ತಿಯಲ್ಲಿ ಯಾರೋ ಬಂದು ಹೇಗೆ ಬ್ಲಾಸ್ಟ್ ಮಾಡಲು ಸಾಧ್ಯ ? ಟ್ರಯಲ್‌ ಮಾಡುವುದಕ್ಕೂ ಕನಿಷ್ಠ ಅನುಮತಿಯನ್ನೂ ಕೇಳಿಲ್ಲ. ಈ ಸಂಬಂಧ ನಾನು ಮಂಡ್ಯ ಜಿಲ್ಲಾಧಿಕಾರಿಗೆ  ಪತ್ರ ಬರೆದ್ದಿದ್ದೇನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂಸೆ ಕೊಡುವುದೇ ಸರ್ಕಾರಗಳ ಉದ್ದೇಶವಾಗಿದೆ.

ಸರ್ಕಾರಗಳು ನಮಗೆ ನೀಡಿದಷ್ಟು ಹಿಂಸೆಯನ್ನು ದೇಶದ ಬೇರಾವುದೇ ರಾಜಮನೆತನಗಳಿಗೂ ಅಲ್ಲಿನ ಸರ್ಕಾರಗಳು ನೀಡಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ನೊಂದು ನುಡಿದರು. ಮೈಸೂರಿನ ಸರ್ವೇ ನಂ.4ಗೆ ಸಂಬಂಧಪಟ್ಟಂತೆ ವ್ಯಾಜ್ಯ ಉಂಟಾಯಿತು. ಮೈಸೂರು ಅರಮನೆಗೆ ಸಂಬಂಧಪಟ್ಟಂತೆ ಸುಪ್ರೀಕೋರ್ಟ್‌ನಲ್ಲಿ ಕೇಸ್ ಇದೆ. ಬೆಂಗಳೂರು ಅರಮನೆಗೆ ಸಂಬಂಧಪಟ್ಟ ಕೇಸ್ ಹಲವು ವರ್ಷಗಳಿಂದ ಬಾಕಿ ಇದೆ. ಯಾವುದೇ ಸರ್ಕಾರ ಬರಲಿ, ನಮಗೆ ಹಿಂಸೆ ಕೊಡುವುದು ತಪ್ಪಿಲ್ಲ. ಹೀಗೆ 10 ರೂ. ಮೌಲ್ಯದ ಆಸ್ತಿಯನ್ನು 10 ಪೈಸೆಗೆ ಬರೆಸಿಕೊಳ್ಳುವ ಕೆಲಸ ಎಲ್ಲಿಯೂ ಆಗಿಲ್ಲ. ಬೇರೆ ರಾಜಮನೆತನಗಳಿಗೂ ಒಂದಷ್ಟು ವೈಯುಕ್ತಿಕ ವ್ಯಾಜ್ಯ ಇರಬಹುದು. ಇಷ್ಟರ ಮಟ್ಟಿಗೆ ತೊಂದರೆ ಆಗಿಲ್ಲ ಎಂದರು.

ನನಗೂ ರಾಜಕಾರಣ ಗೊತ್ತು, ದೋಸ್ತಿ ವಿರುದ್ಧ ರಾಜಮಾತೆ ಮುನಿಸು

ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದಕ್ಕೆ ಸರ್ಕಾರ ಮತ್ತು ನಮ್ಮಲ್ಲಿ ದಾಖಲೆಗಳಿವೆ. ಅಧಿಕಾರಿಗಳು ನಮಗೆ ಖಾತೆ ಮಾಡಿಕೊಡುವ ಬದಲು ಬಿ ಖರಾಬು ಎಂದು ನಮೂದಿಸಿದ್ದಾರೆ. ಕಂಪ್ಯೂಟರ್‌ ಆರ್.ಟಿ.ಸಿ.ಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಕಾನೂನು ಹೋರಾಟ ಮಾಡಿದರೆ ಸರ್ವೇ ನಂ. 4 ಆದೇಶವೇ ಬೇಬಿ ಬೆಟ್ಟಕ್ಕೂ ಅನ್ವಯ ಆಗಲಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಶೀರ್ಘದಲ್ಲೇ ತೀರ್ಮಾನ ಕೈಗೊಳ್ಳಲಿದ್ದೇನೆ.  ವ್ಯಾಜ್ಯ, ಹೋರಾಟದಿಂದಾಗಿ ನನಗೆ ಕಾನೂನು ಜ್ಞಾನ ಬಂದು ಬಿಟ್ಟಿದೆ ಅಂತಾರೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್.
 

Latest Videos
Follow Us:
Download App:
  • android
  • ios