ಬೆಂಗಳೂರು(ಮೇ.19): ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, 2020-21ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 95 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

ರಾಜ್ಯದಲ್ಲಿ 9,000 ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು 11,595 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಅಳವಡಿಸಿಕೊಂಡಿದೆ.

ಆರೋಗ್ಯ ಉಪ ಕೇಂದ್ರಗಳಲ್ಲಿ ಈ ಮೊದಲು ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರು ಮಾತ್ರ ಇದ್ದರು. ಈ ಯೋಜನೆಯ ಮೂಲಕ ಬಿಎಸ್‌ಸಿ ನರ್ಸಿಂಗ್‌ ಓದಿರುವ ಮಧ್ಯಮ ಹಂತದ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ. ಈ ಮೂಲಕ ಆರೋಗ್ಯ ಉಪ ಕೇಂದ್ರವನ್ನು ಕ್ಲಿನಿಕ್‌ ಆಗಿ ಪರಿವರ್ತಿಸಲಾಗಿದೆ.

ಸಣ್ಣಪುಟ್ಟಆರೋಗ್ಯ ಸಮಸ್ಯೆಗಳಿದ್ದರೆ ಚಿಕಿತ್ಸೆ ನೀಡುವುದು, ತುಸು ಗಂಭೀರ ಸಮಸ್ಯೆಗಳಿದ್ದಾಗ ಹಿರಿಯ ವೈದ್ಯರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ತುರ್ತು ಚಿಕಿತ್ಸೆ ನೀಡುವುದು, ಅಗತ್ಯ ಇದ್ದರೆ ತಕ್ಷಣ ಪ್ರಯೋಗಾಲಯಗಳಿಗೆ ಮತ್ತು ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದು, ಸಾಂಕ್ರಾಮಿಕ ರೋಗಗಳ ಮೇಲೆ ನಿಗಾ ಇಡುವುದು ಮುಂತಾದ ಚಟುವಟಿಕೆಗಳನ್ನು ಈ ಉಪ ಕೇಂದ್ರಗಳೇ ನಿರ್ವಹಿಸುತ್ತಿವೆ.

ಏನು ಮಾನದಂಡ?:

ಉಪ ಕೇಂದ್ರಗಳ ಉನ್ನತೀಕರಣ, ಸೇವೆಗಳ ಮಾಹಿತಿ ನೀಡಿಕೆ, ರೋಗಿಗಳ ಶಿಫಾರಸ್ಸು ಮಾಡುವುದು, ಸಮನ್ವಯ, ಟೆಲಿ ಕಮ್ಯುನಿಕೇಷನ್‌, 30 ವರ್ಷ ಮೇಲ್ಪಟ್ಟಎಲ್ಲರಿಗೂ ಆರೋಗ್ಯ ತಪಾಸಣೆ, ಯೋಗ ತರಬೇತಿ, ಆಹಾರ ಪಥ್ಯ ಬಗ್ಗೆ ಅರಿವು ಮೂಡಿಸುವುದು, ಆಪ್ತ ಸಮಾಲೋಚನೆ ಮುಂತಾದ ಚಟುವಟಿಕೆಗಳ ಮಾನದಂಡದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60ರ ಅನುದಾನ ನೀಡುತ್ತದೆ. ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಕಳೆದ ವರ್ಷ ಯೋಜನೆಗೆ 325 ಕೋಟಿ ರು. ಬಂದಿದ್ದು ಇದರಲ್ಲಿ 286 ಕೋಟಿ ರು. ಖರ್ಚು ಮಾಡಲಾಗಿದೆ. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಕೋವಿಡ್‌ ಇದ್ದ ಕಾರಣ ಯೋಜನೆಗೆ ತುಸು ಹಿನ್ನಡೆಯಾಗಿದೆ. 2021-22ನೇ ಸಾಲಿಗೆ 469 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.

ಏನೇನು ಸಾಧನೆ?:

ಕೇಂದ್ರ ಸರ್ಕಾರ 2,263 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಗುರಿ ನೀಡಿದ್ದರೆ ರಾಜ್ಯ ಸರ್ಕಾರ 3,300 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಶೇ.146ರ ಗುರಿ ಸಾಧನೆ ಮಾಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2,096 ಮೇಲ್ದರ್ಜೆಗೆ ಏರಿಸುವ ಗುರಿ ಇದ್ದರೂ 2,196 ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಶೇ. 103, 294 ನಗರ ಆರೋಗ್ಯ ಕೇಂದ್ರಗಳನ್ನು ಉನ್ನತಿಕರಿಸುವ ಗುರಿ ನೀಡಿದ್ದರೂ 364 ಆರೋಗ್ಯ ಕೇಂದ್ರಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿ ಶೇ.124ರ ಸಾಧನೆ ಮಾಡಲಾಗಿದೆ. ಒಟ್ಟು 4,653 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸ್ಥಾಪಿಸುವ ಗುರಿಯನ್ನು ಕೇಂದ್ರ ನೀಡಿದ್ದು, 5,832 ಕೇಂದ್ರ ಆರಂಭಿಸಿ ಶೇ.125ರ ಸಾಧನೆ ಮಾಡಲಾಗಿದೆ.

ಇದಕ್ಕಾಗಿ 3,300 ಆರೋಗ್ಯ ಕೇಂದ್ರಗಳಿಗೆ ಮಧ್ಯಮ ಹಂತದ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು ಉತ್ತರ ಕನ್ನಡ ಮತ್ತು ಚಾಮರಾಜನಗರ ತುಸು ಹಿಂದುಳಿದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದ ಸಾಧನೆ ಏನು?

ಆರೋಗ್ಯ ಉಪ ಕೇಂದ್ರಗಳಲ್ಲಿ ಈ ಮೊದಲು ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರು ಮಾತ್ರ ಇದ್ದರು. ಈ ಯೋಜನೆಯ ಮೂಲಕ ಬಿಎಸ್‌ಸಿ ನರ್ಸಿಂಗ್‌ ಓದಿರುವ ಮಧ್ಯಮ ಹಂತದ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ. ಈ ಮೂಲಕ ಆರೋಗ್ಯ ಉಪ ಕೇಂದ್ರವನ್ನು ಕ್ಲಿನಿಕ್‌ ಆಗಿ ಪರಿವರ್ತಿಸಲಾಗಿದೆ.

ಸುಧಾಕರ್‌ ಅಭಿನಂದನೆ

ಗ್ರಾಮೀಣ ಜನರು ಆರೋಗ್ಯ ಸೇವೆಗಾಗಿ ದೂರದ ನಗರಗಳಿಗೆ ಅಲೆಯುವುದನ್ನು ತಪ್ಪಿಸಿ ತಮ್ಮ ಮನೆಯ ಸಮೀಪ ಆರೋಗ್ಯ ಸೇವೆ ಪಡೆಯಬೇಕು ಎಂಬುದು ಸರ್ಕಾರದ ಗುರಿ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಿವೆ. ಈ ಸಾಧನೆಗಾಗಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ.

ಡಾ| ಕೆ.ಸುಧಾಕರ್‌, ಆರೋಗ್ಯ ಸಚಿವ

ಪ್ರಾಥಮಿಕ ಆರೋಗ್ಯ ಕೇಂದ್ರ

*20 ಸಾವಿರ ಜನಸಂಖ್ಯೆಗೆ ಒಂದರಂತೆ ಇರುತ್ತದೆ

*ಚಿಕಿತ್ಸೆ ನೀಡುವುದಕ್ಕೆ ಮೊದಲ ಆದ್ಯತೆ ನೀಡುತ್ತದೆ

*ವೈದ್ಯರು ಇರುತ್ತಾರೆ

*ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒಳಗೊಂಡಿರುತ್ತದೆ.

ಆರೋಗ್ಯ ಮತ್ತು ಕ್ಷೇಮ ಕೇಂದ್ರ

*5 ಸಾವಿರ ಜನಸಂಖ್ಯೆಗೆ ಒಂದರಂತೆ ಇರುತ್ತದೆ.

*ತೀರಾ ಸಣ್ಣಪುಟ್ಟಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಚಿಕಿತ್ಸೆ

*ತಮ್ಮ ವ್ಯಾಪ್ತಿಯಲ್ಲಿರುವ ಜನರ ಆರೋಗ್ಯ ಮಾಹಿತಿ ಸಂಗ್ರಹಣೆ

*ಆಹಾರ, ಯೋಗ, ತರಬೇತಿ ನೀಡಿಕೆ

*ಟೆಲಿ ಕಮ್ಯುನಿಕೇಷನ್‌ ಮೂಲಕ ಚಿಕಿತ್ಸೆ ನೀಡಿಕೆ