ತೆರೆಮರೆಯಲ್ಲಿ ಕೊರೋನಾ ವಾರಿಯರ್ಸ್‌ನಂತೆ ಸಹಾಯ ಮಾಡಿದ ಆಟೋ ಚಾಲಕ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯಲ್ಲೊಬ್ಬ ವಾರಿಯರ್‌| ಸ್ವಂತ 2 ಎಕರೆ ಜಮೀನನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು 1.30 ಲಕ್ಷ ಸಾಲ ಪಡೆದುಕೊಂಡ ಚಾಲಕ, ಇದರಿಂದಲೇ ಅವರು ಆಟೋ ಖರೀದಿ| 200ಕ್ಕೂ ಅಧಿಕ ವೃದ್ಧರಿಗೆ ಉಚಿತ ಸೇವೆಯನ್ನು ನೀಡಿ ಸಾಮಾಜಿಕ ಜವಾಬ್ದಾರಿ ಮೆರೆದ ಆಟೋ ಚಾಲಕ ಯಮನಪ್ಪ ಹಲ್ಯಾಳ| 

ನರಸಿಂಹಮೂರ್ತಿ 

ಅಮೀನಗಡ(ಮೇ.24): ಕೊರೋನಾ ತಡೆಗೆ ವೈದ್ಯರು, ದಾದಿಯರು ಸೇರಿದಂತೆ ಸಾಕಷ್ಟು ವಾರಿಯರ್ಸ್‌ಗಳು ಫ್ರಂಟ್‌ಲೈನ್‌ನಲ್ಲಿ ಹೋರಾಟ ನಡೆಸಿದ್ದಾರೆ. ಕೆಲವರು ತೆರೆಮರೆಯ ಕಾಯಿಯಂತೆಯೂ ಕೊರೋನಾ ವಾರಿಯರ್ಸ್‌ ಆಗಿ ಹೋರಾಟ ಮಾಡಿದ್ದಾರೆ. ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ವೃದ್ಧರು, ಗರ್ಭಿಣಿಯರು ವಾಹನವಿಲ್ಲದೆ ಪರದಾಡುವಂತಹ ಸಂದರ್ಭದಲ್ಲಿ ಅವರಿಗೆ ಉಚಿತ ಸೇವೆ ನೀಡುವ ಮೂಲಕ ಆಟೋ ಚಾಲಕನೊಬ್ಬ ತೆರೆಮರೆಯಲ್ಲಿ ಹೋರಾಟ ನಡೆಸಿದ್ದಾನೆ.

ಹೌದು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಯಮನಪ್ಪ ಹುಲ್ಯಾಳ ಎಂಬ ಆಟೋ ಚಾಲಕ ಗರ್ಭಿಣಿಯರು, ವೃದ್ಧರು ಜತೆಗೆ ಅಸಹಾಯಕರಿಗೆ ಉಚಿತ ಆಟೋ ಸೇವೆ ನೀಡುವ ಮೂಲಕ ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.

ಹುನಗುಂದ: ಕೈಯಲ್ಲಿ ನಯಾಪೈಸೆ ಇಲ್ಲ: 2 ಸಾವಿರ ಕಿಮೀ ನಡೆದು ಬಿಹಾರಕ್ಕೆ ಹೊರಟ ಕಾರ್ಮಿಕರು!

ಮಾ.24ರಿಂದಲೇ ಈ ಸೇವೆ:

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಜತೆಗೆ ಜನಸಂಚಾರ ಕೂಡ ಸಂಪೂರ್ಣ ಸ್ತಬ್ಧವಾಗಿತ್ತು. ಹೀಗಾಗಿ ಆ ವೇಳೆ ಜನರ ಸೇವೆಗೆ ಮುಂದಾಗಬೇಕು ಎಂದುಕೊಂಡ ಯಮನಪ್ಪ ಅವರು ಗರ್ಭಿಣಿಯರು ಮತ್ತು ವೃದ್ಧರಿಗೆ ಉಚಿತ ಆಟೋ ಸೇವೆ ನೀಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ಹುನಗುಂದ ತಾಲೂಕಿನ ಸೂಳೇಬಾವಿ ಮತ್ತು ಕುಣಿಬೆಂಚಿ ಗ್ರಾಮಗಳಲ್ಲಿ ತಾವು ಈ ರೀತಿ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ತಮ್ಮ ಮೊಬೈಲ್‌ ನಂಬರ್‌ ಅನ್ನು ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರಿಗೆ ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡುತ್ತಾರೆ. ಅಂದಿನಿಂದ ಅವರ ಉಚಿತ ಆಟೋ ಸೇವೆ ಆರಂಭವಾಗಿದೆ.

30 ಜನರಿಗೆ ಲಾಭ:

ಲಾಕ್‌ಡೌನ್‌ ಶುರುವಾದಾಗಿನಿಂದ ಇಲ್ಲಿಯವರೆಗೆ ಸೂಳೇಬಾವಿ ಮತ್ತು ಕುಣಿಬೆಂಚಿ ಗ್ರಾಮಗಳೆರಡೂ ಸೇರಿದಂತೆ ಇದುವರೆಗೆ 30ಕ್ಕೂ ಅಧಿಕ ಗರ್ಭಿಣಿಯರನ್ನು ಸೂಳೇಬಾವಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ಕರೆತಂದಿದ್ದಾರೆ. ಎರಡನೂರಕ್ಕೂ ಅಧಿಕ ವೃದ್ಧರಿಗೆ ಉಚಿತ ಸೇವೆಯನ್ನು ನೀಡಿ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊರೋನಾ ಕುರಿತು ಜಾಗೃತಿಯನ್ನೂ ಮೂಡಿಸಿದ್ದಾರೆ. ಆ್ಯಂಬುಲೆನ್ಸ್‌ ಇದ್ದರೂ ಕೊರೋನಾದಂತಹ ಸಂದರ್ಭದಲ್ಲಿ ಸುಲಭವಾಗಿ ಸಿಗುವುದು ಅನುಮಾನ ಎಂಬ ಕಾರಣಕ್ಕೆ ಜನರು ಕೂಡ ಆಟೋ ಯಮನಪ್ಪನವರನ್ನೇ ಹೆಚ್ಚಾಗಿ ಅವಲಂಬಿಸಿದ್ದರು.

ಹೊಲ ಅಡವಿಟ್ಟು ಆಟೋ ಖರೀದಿ

ತಾಯಿ, ಪತ್ನಿ, ಮೂವರು ಮಕ್ಕಳ ಕೂಡು ಕುಟುಂಬ ಹೊಂದಿರುವ ಯಮನಪ್ಪ ಅವರಿಗೆ ಆಟೋವೊಂದೇ ಜೀವನಾಧಾರವಾಗಿದೆ. ಸೂಳೇಬಾವಿಯಲ್ಲಿ ಸ್ವಂತ 2 ಎಕರೆ ಜಮೀನು ಹೊಂದಿರುವ ಇವರು, ಅದನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ನಾಲ್ಕು ವರ್ಷಗಳ ಹಿಂದೆ 1.30 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ಇದರಿಂದಲೇ ಅವರು ಆಟೋವನ್ನು ಖರೀದಿಸಿದ್ದಾರೆ. ಲಾಕ್‌ಡೌನ್‌ ಆದಾಗ ಜೀವನಾಧಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಒಟ್ಟು 80 ಕೆಜಿ ಅಕ್ಕಿ (ಎರಡು ತಿಂಗಳ ಪಡಿತರ), ಗೋದಿ, ಬೇಳೆಯೇ ಆಸರೆಯಾಗಿದೆ. ಇದರ ಜೊತೆಗೆ ಲಾಕ್‌ಡೌನ್‌ ಸಂಪೂರ್ಣವಾಗಿ ತೆಗೆಯುವವರೆಗೆ, ಜನಜೀವನ ಸಹಜಸ್ಥಿತಿಗೆ ಬರುವವರೆಗೆ ತಮ್ಮ ಈ ಆಟೋ ಉಚಿತ ಸೇವೆಯನ್ನು ಮುಂದುವರಿಸುವುದಾಗಿ ಹೇಳುತ್ತಾರೆ ಯಮನಪ್ಪ.

ಲಾಕ್‌ಡೌನ್‌ ನಿಮಿತ್ತ ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಹೀಗಾಗಿ ಸಮಾಜಕ್ಕೆ ನನ್ನಿಂದ ಏನಾದರೂ ಸೇವೆ ಆಗಬೇಕು ಎಂದುಕೊಂಡು ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ಗರ್ಭಿಣಿಯರು ಮತ್ತು ವೃದ್ಧರಿಗೆ ಉಚಿತ ಆಟೋ ಸೇವೆ ನೀಡುತ್ತಿದ್ದೇನೆ. ಜತೆಗೆ ಲಾಕ್‌ಡೌನ್‌ ಮುಗಿದು ಜನಜೀವನ ಸಹಜಸ್ಥಿತಿಗೆ ಬರುವವರೆಗೂ ಈ ಸೇವೆ ನೀಡುತ್ತೇನೆ ಎಂದು ಆಟೋ ಚಾಲಕ ಯಮನಪ್ಪ ಹಲ್ಯಾಳ ಅವರು ಹೇಳಿದ್ದಾರೆ.