ಮಲ್ಲಿಕಾರ್ಜುನ ದರಗಾದ 

ಹುನಗುಂದ(ಮೇ.17): ಬಳ್ಳಾರಿಯ ಜಿಂದಾಲ್‌ ಕಂಪನಿಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ 200ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲದೆ ಕೈ ಖಾಲಿಯಾಗಿ ಬಳ್ಳಾರಿಯಿಂದ ಸುಮಾರು 2 ಸಾವಿರ ಕಿಲೊಮೀಟರ್‌ ದೂರದ ಬಿಹಾರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಂದಾಲ್‌ ಕಂಪನಿ ಬಂದ್‌ ಆಗಿರುವುದರಿಂದ ಈ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲ. ಕೈಯಲ್ಲಿದ್ದ ದುಡ್ಡಿನಲ್ಲಿ ಎರಡು ತಿಂಗಳು ಕಾಲ ಜೀವನ ಸಾಗಿಸಿದ ಇವರಿಗೆ ಈಗ ಕೈ ಖಾಲಿಯಾಗಿ ತಮ್ಮ ಊರಿಗೆ ಮರಳದೇ ಬೇರೆ ದಾರಿ ಇಲ್ಲ.

ಬಾಗಲಕೋಟೆ: ಕ್ವಾರಂಟೈನ್‌ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಇವರನ್ನು ದುಡಿಸಿಕೊಂಡ ಜಿಂದಾಲ್‌ ಕಂಪನಿ ಅವರ ರಾಜ್ಯಕ್ಕೆ ಕಳುಹಿಸುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಇನ್ನು ತವರಿಗೆ ತೆರಳುವ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಆರಂಭಿಸಿರುವ ‘ಸೇವಾಸಿಂಧು’ ಪೋರ್ಟ್‌ನಲ್ಲಿ ತಮ್ಮ ದಾಖಲಾತಿಗಳನ್ನು ನೀಡಿ ಹೆಸರು ನೋಂದಾಯಿಸಿದರೆ ತವರಿಗೆ ತಲುಪಿಸುವ ಸಾರಿಗೆ ವೆಚ್ಚವನ್ನು ಈ ಕಾರ್ಮಿಕರೇ ನೀಡಬೇಕು. ಇವರ ಬಳಿ ನಯಾಪೈಸೆ ಇಲ್ಲದ ಕಾರಣ ಹೆಸರು ನೊಂದಾಯಿಸುವ ಗೋಜಿಗೆ ಹೊಗಿಲ್ಲ.

ಕಾಲ್ನಡಿಗೆ ಪ್ರಯಾಣ:

ಇಂತಹ ಸಂಕಷ್ಟ ಸ್ಥಿತಿಯಲ್ಲಿರುವ ಈ ಕಾರ್ಮಿಕರು ಬಳ್ಳಾರಿಯಿಂದ ಬಿಹಾರವರೆಗೆ ನಡೆದುಕೊಂಡೆ ಹೊರಟಿದ್ದಾರೆ. ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುಂಪು ಗುಂಪಾಗಿ ಹೊರಟಿರುವ ದೃಶ್ಯ ಕಂಡುಬರುತ್ತಿದೆ.
ಶುಕ್ರವಾರ ಹುನಗುಂದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಕಾರ್ಮಿಕರು ಹೊರಟ ಸ್ಥಿತಿ ಕರಳು ಹಿಂಡುವಂತಿತ್ತು. ಬಿಸಿಲಿನಲ್ಲಿ ಬೆವರು ಹರಿಸುತ್ತಾ ಅಲ್ಲಲ್ಲಿ ಮರದಡಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾ ಪ್ರಯಾಣ ಮುಂದುವರೆಸಿದ್ದರು.

ಹೆದ್ದಾರಿಯಲ್ಲಿ ಸಹಾಯ:

ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಈ ಕಾರ್ಮಿಕರ ಬಳಿ ಕಾಸಿಲ್ಲ. ಯಾರಾದರೂ ಸಹಾಯ ಮಾಡಿದರೆ ಮಾತ್ರ ಊಟ, ಇಲ್ಲದಿದ್ದರೆ ಹಸಿದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ. ಇವರ ಈ ಸ್ಥಿತಿ ಕಂಡು ಸಾರ್ವಜನಿಕರು ವಿವಿಧೆಡೆ ಕುಡಿಯುವ ನೀರು, ಊಟ ವಿತರಣೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ರಸ್ತೆಯುದ್ದಕ್ಕೂ ಅನುಕೂಲವಾಗುವಂತೆ ಆಹಾರ ಪಾಕೇಟ್‌ ಹಣ್ಣುಗಳನ್ನು ಕಟ್ಟಿ ಕೊಡುತ್ತಿದ್ದಾರೆ.

150 ಕಿಮೀ ನಡೆದುಕೊಂಡು ಬಂದಿದ್ದೇವೆ

ರಸ್ತೆಯಲ್ಲಿ ಹೊರಟ ಈ ಕಾರ್ಮಿಕರನ್ನು ಕನ್ನಡಪ್ರಭ ಮಾತನಾಡಿಸಿದಾಗ ಲಾಕ್‌ಡೌನ್‌ ಹಿನ್ನಲೆಯಲ್ಲಿ ನಮ್ಮನ್ನು ಕೆಲಸದಿಂದ ತೆಗೆದು 2 ತಿಂಗಳು ಸಮೀಪಿಸಿದೆ. ಆಗಲೇ ನಮ್ಮ ರಾಜ್ಯಕ್ಕೆ ಹೊಗಬೇಕೆಂದರೆ ಸಂಚಾರ ನಿರ್ಬಂಧದಿಂದ ಸಾಧ್ಯವಾಗಲಿಲ್ಲ. ಇರುವ ದುಡ್ಡಿನಲ್ಲಿ ಇದುವರೆಗೂ ಜೀವನ ಕಳೆದೆವು. ಈಗ ಕೈ ಖಾಲಿಯಾಗಿದೆ. ದುಡಿಯಲು ಕೆಲಸವಿಲ್ಲ. ಹೊಟ್ಟೆತುಂಬಿಸಿಕೊಳ್ಳಲು ಭಿಕ್ಷೆ ಬೇಡುವ ಸ್ಥಿತಿ ಬಂದಕಾರಣ ನಡೆದುಕೊಂಡೆ ತವರಿಗೆ ಹೊರಟಿದ್ದೇವೆ. ದಾರಿಯಲ್ಲಿ ಯಾರಾದರೂ ಊಟ ಹಾಕಿದರೆ ಉನ್ನುತ್ತೇವೆ. ಇಲ್ಲದಿದ್ದರೆ ಹಸಿದ ಹೊಟ್ಟೆಯಲ್ಲಿಯೇ ಸಾಗುತ್ತಿದ್ದೇವೆ. ಕಳೆದ ಮೂರು ದಿನಗಳಿಂದ ಸುಮಾರು 150 ಕಿಮೀ ನಡೆದುಕೊಂಡು ಬಂದಿದ್ದೇವೆ ಎಂದು ತಮ್ಮ ನೋವು ಹೇಳಿಕೊಂಡರು
ನಡೆದುಕೊಂಡು ಹೊರ ರಾಜ್ಯಕ್ಕೆ ಹೊರಟಿರುವ ಕಾರ್ಮಿಕರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹುನಗುಂದ ತಹಸೀಲ್ದಾರ್‌ಬಸವರಾಜ ನಾಗರಾಳ ಅವರು ಹೇಳಿದ್ದಾರೆ.