ಬೆಂಗಳೂರಿನ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್
ಬೆಂಗಳೂರು(ಸೆ.20): ದಟ್ಟಣೆ ಇರುವ ರಸ್ತೆಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಪರಿಹಾರ ಉದ್ದೇಶದಿಂದ ನಗರದ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಶನಿವಾರ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಚಾಲನೆ ನೀಡಿದ್ದಾರೆ.

ಸೆಂಟ್ರಲ್ ಪಾರ್ಕಿಂಗ್ ಸವೀರ್‍ಸಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಗರದ ಕನ್ನಿಂಗ್ ಹ್ಯಾಮ್ ರಸ್ತೆ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ಹತ್ತು ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆಗೆ ಜಾರಿ ಮಾಡಲಾಗಿದೆ. ಈ ವೇಳೆ ಮಾತನಾಡಿದ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು, ಸೆನ್ಸಾರ್ ಆಧಾರಿತ ವ್ಯವಸ್ಥೆ ಇರುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಈ ಮೂಲಕ ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಮೀಟರ್ ಮೂಲಕ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಿ ರಶೀದಿ ಪಡೆಯಬಹುದು. ಈ ಯೋಜನೆಯಿಂದ ಪಾಲಿಕೆಗೆ ವಾರ್ಷಿಕ .31.56 ಕೋಟಿ ಆದಾಯ ಬರಲಿದೆ ಎಂದು ತಿಳಿಸಿದರು.

ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಸಾರ್ಟ್ ಪಾರ್ಕಿಂಗ್‌ಯೋಜನೆ ಜಾರಿ ಮಾಡಲಾಗಿದೆ. 87 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿ ಮಾಡುವ ಉದ್ದೇಶ ಇದೆ. ಈಗಾಗಲೇ ಹಲವು ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಬಹುತೇಕ ಅಂತಿಮವಾಗಿದೆ. ಇನ್ನು ಕೆಲವು ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಜಾರಿಯಲ್ಲಿರುವುದರಿಂದ ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣಗೊಂಡ ಮೇಲೆ ಸ್ಮಾರ್ಟ್ ಪಾರ್ಕಿಂಗ್ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ವಿವರಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್
ಮೊದಲ ಹಂತದಲ್ಲಿ ಚಾಲನೆ ನೀಡುತ್ತಿರುವ 10 ರಸ್ತೆಗಳಲ್ಲಿ 475 ಕಾರು ಮತ್ತು 510 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಇದೆ. ಎಲ್ಲ 87 ರಸ್ತೆಗಳಲ್ಲಿ ಒಟ್ಟು 8,000 ರಿಂದ 9,000 ವಾಹನ ಪಾರ್ಕಿಂಗ್ ಮಾಡಬಹುದು ಎಂದು ಹೇಳಿದರು.
ಸ್ಮಾರ್ಟ್ ಪಾರ್ಕಿಂಗ್ ಇರುವ 10 ರಸ್ತೆಗಳು: 1. ಕನ್ನಿಂಗ್ ಹ್ಯಾಮ್ ರಸ್ತೆ, 2. ಎಂ.ಜಿ.ರಸ್ತೆ, 3. ಕಸ್ತೂರು ಬಾ ರಸ್ತೆ, 4. ಸೆಂಟ್ ಮಾರ್ಕ್ಸ್ ರಸ್ತೆ, 5. ರೆಸಿಡೆನ್ಸಿ ರಸ್ತೆ, 6. ಮ್ಯೂಸಿಯಂ ಕ್ರಾಸ್ ರಸ್ತೆ, 7. ವಿಟ್ಟಲ್ ಮಲ್ಯ ರಸ್ತೆ, 8. ಮಲ್ಯ ಆಸ್ಪತ್ರೆ ರಸ್ತೆ, 9. ಚರ್ಚ್ ಸ್ಟ್ರೀಟ್, 10. ಅಲಿ ಅಸ್ಕರ್ ರಸ್ತೆ
ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ವಾಹನ ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಯುಪಿಐನಿಂದ ಹಣ ಪಾವತಿ ಮಾಡಬಹುದು. ವಾಹನ ನಿಲುಗಡೆ ಸ್ಥಳದಲ್ಲಿ ಸೆನ್ಸಾರ್‌ಗಳ ಅಳವಡಿಕೆ, ಎಷ್ಟುವಾಹನಗಳು ನಿಂತಿವೆ, ಇನ್ನೂ ಎಷ್ಟು ವಾಹನಗಳ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ತಿಳಿಯಲು ಡಿಜಿಟಲ್ ನಾಮಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆಗಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳಿಗೆ ಕ್ಲ್ಯಾಂಪ್ ಹಾಕುವುದು ಮತ್ತು ಟೋಯಿಂಗ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.