Asianet Suvarna News Asianet Suvarna News

ಸಸಿ ನಿರ್ವಹಣೆಗೆ ಆಡಿಟ್‌, ಜಿಯೋ ಟ್ಯಾಗ್‌: ಸಚಿವ ಈಶ್ವರ ಖಂಡ್ರೆ

ಸಸಿಗಳ ವಿತರಣೆ, ನಿರ್ವಹಣೆ ಹಾಗೂ ಬೆಳವಣಿಗೆಯ ಆಡಿಟ್‌ ಮಾಡಿಸಿ ಜಿಯೋ ಟ್ಯಾಗ್‌ ಮಾಡಿಸಿ ಕನಿಷ್ಠ 5 ವರ್ಷದಲ್ಲಿ ಶೇ. 80ರಷ್ಟುಬದುಕುಳಿಯುವಂತೆ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ ಎಂದು ಅರಣ್ಯ, ಪರಿಸರ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು.

Audit for sapling management geo tag Says Minister Eshwar Khandre gvd
Author
First Published Jul 2, 2023, 11:41 PM IST

ಬೀದರ್‌ (ಜು.02): ಸಸಿಗಳ ವಿತರಣೆ, ನಿರ್ವಹಣೆ ಹಾಗೂ ಬೆಳವಣಿಗೆಯ ಆಡಿಟ್‌ ಮಾಡಿಸಿ ಜಿಯೋ ಟ್ಯಾಗ್‌ ಮಾಡಿಸಿ ಕನಿಷ್ಠ 5 ವರ್ಷದಲ್ಲಿ ಶೇ. 80ರಷ್ಟುಬದುಕುಳಿಯುವಂತೆ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ ಎಂದು ಅರಣ್ಯ, ಪರಿಸರ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು. ಅವರು ನಗರ ಹೊರವಲಯದ ಕೋಳಾರ (ಕೆ) ರೇಷ್ಮೆ ಇಲಾಖೆ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ‘ನನ್ನ ಮರ ನನ್ನ ಹೆಮ್ಮೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದರು.

ಸಸಿ ನೆಡುವದಷ್ಟೇ ಅಲ್ಲ, ಅವು ಮರ ಆಗುವವರೆಗೆ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಮುಖ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಪಣ ತೊಡಬೇಕಿದೆ. ಬೇಸಿಗೆ ಕಾಲದಲ್ಲಿ ಸಸಿಗಳಿಗೆ ನೀರುಣಿಸುವ ಕಾರ್ಯವನ್ನು ತಪ್ಪದೆ ಮಾಡಿ ಎಂದು ಕರೆ ನೀಡಿದರು. ಹಸಿರಿದ್ದರೇ ಉಸಿರು. ಆದರೆ ಆಧುನಿಕ ಜೀವನದಲ್ಲಿ ಪ್ರಕೃತಿ ಪರಿಸರ ಶೋಷಣೆಗೆ ಒಳಪಟ್ಟು ನಾಶವಾಗುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ, ಆಹಾರ ಮಾಲಿನ್ಯವಾಗುತ್ತಿದೆ, ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಪರಿಸರ ಹಾನಿಯ ಈ ದುರಾವಸ್ಥೆ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಗಂಡಾಂತರ ಕಾದಿದೆ. 

ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್‌ ಟಾಂಗ್‌

ಮುಂದಿನ ಪೀಳಿಗೆಗೆ ನಾವು ಸುರಕ್ಷಿತ ಪರಿಸರ, ಭೂಮಿಯನ್ನು ಹಸ್ತಾಂತರಿಸಲು ಪರಿಸರ ಸುರಕ್ಷತೆಗಾಗಿ ಅರಣ್ಯೀಕರಣಕ್ಕೆ ಶ್ರಮಿಸೋಣ ಎಂದರು. ಕನಿಷ್ಠ ಶೇ. 33ರಷ್ಟುಅರಣ್ಯ ಪ್ರದೇಶ ಇರಬೇಕು. ಆದರೆ ರಾಜ್ಯದಲ್ಲಿ ಶೇ. 21ರಷ್ಟುಮಾತ್ರ ಅರಣ್ಯವಿದ್ದು, ಬೀದರ್‌ ಜಿಲ್ಲೆಯಲ್ಲಿ ಶೇ. 7.2ರಷ್ಟುಮಾತ್ರ ಅರಣ್ಯ ಪ್ರದೇಶವಿದೆ. ಇದನ್ನು ಬರುವ 5 ವರ್ಷದಲ್ಲಿ ಗಮನಾರ್ಹವಾಗಿ ಹೆಚ್ಚಿಸುವ ಪಣ ತೊಟ್ಟಿರುವ ಸರ್ಕಾರಕ್ಕೆ ಸರ್ವರೂ ಸಾಥ್‌ ನೀಡಬೇಕು ಎಂದರು. ಪರಿಸರ ರಕ್ಷಿಸುವವರಿಗೆ ಪ್ರಕೃತಿ ರಕ್ಷಿಸುತ್ತದೆ ಎಂಬುವದರಲ್ಲಿ ಸಂದೇಹವಿಲ್ಲ. ಬೀದರ್‌ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 5ಲಕ್ಷ ಸಸಿಗಳನ್ನು ನೆಡುವ ಗುರಿಯಿದ್ದು, ಮೂರು ದಿನಗಳಲ್ಲಿ ಒಟ್ಟು 15ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ. 

ಜೆಡಿಎಸ್‌ನಿಂದ ಹಣ ಪಡೆದು ಪಕ್ಷ ವಿರೋಧಿ ಚಟುವಟಿಕೆ: ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ ಒಟ್ಟಾರೆ 25 ಕೋಟಿ ಸಸಿ ನೆಡುವ ಉದ್ದೇಶ ಸರ್ಕಾರ ಹೊಂದಿದೆ ಎಂದರು. ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್‌ಖಾನ್‌, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ವಿಧಾನಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ್‌ ಮಾತನಾಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್‌ ರಂಜನ್‌, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಾನತಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ. ಹಾಗೂ ಎಸ್ಪಿ ಚೆನ್ನಬಸವಣ್ಣ ಎಸ್‌ಎಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಚನ್ನಬಸವ ಹೇಡೆ ನಿರೂಪಿಸಿದರು.

Follow Us:
Download App:
  • android
  • ios