Asianet Suvarna News Asianet Suvarna News

ಸಂಕೀರ್ತನಾ ಯಾತ್ರೆ ವೇಳೆ ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ

ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ಸಂಕೀರ್ತನಾ ಯಾತ್ರೆ ನಡೆಯಿತು. ಈ ವೇಳೆ ಜಾಮೀಯಾ ಮಸೀದಿ ಬಳಿ ಬಂದಾಗ, ಹನುಮ ಮಾಲಾಧಾರಿಗಳು ಮಸೀದಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ, ಅವರ ಯತ್ನ ವಿಫಲಗೊಳಿಸಿದರು

Attempt to break into the mosque during Sankirtana Yatra shrirangapatna rav
Author
First Published Dec 5, 2022, 10:34 AM IST

ಕೇಸರಿ ಕಹಳೆ

ಮಂಡ್ಯ/ಶ್ರೀರಂಗಪಟ್ಟಣ (ಡಿ.5) : ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ಸಂಕೀರ್ತನಾ ಯಾತ್ರೆ ನಡೆಯಿತು. ಗಂಜಾಂನಿಂದ ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದವರೆಗೆ ಸುಮಾರು 6 ಕಿ.ಮೀ ದೂರ ಯಾತ್ರೆ ಸಾಗಿತು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಚಿವ ಕೆ.ಸಿ ನಾರಾಯಣಗೌಡ ಯಾತ್ರೆಯಲ್ಲಿ ಪಾಲ್ಗೊಂಡು, ಯಾತ್ರೆಗೆ ಬೆಂಬಲ ಸೂಚಿಸಿದರು. ಸುಮಾರು 15 ರಿಂದ 20 ಸಾವಿರ ಹನುಮ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು, ಜೈ ಹನುಮಾನ್‌ ಘೋಷಣೆ ಕೂಗಿದರು.

ಈ ಮಧ್ಯೆ, ಯಾತ್ರೆ ಜಾಮೀಯಾ ಮಸೀದಿ ಬಳಿ ಬಂದಾಗ, ಹನುಮ ಮಾಲಾಧಾರಿಗಳು ಮಸೀದಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ, ಅವರ ಯತ್ನ ವಿಫಲಗೊಳಿಸಿದರು. ಇದರಿಂದಾಗಿ ಮಸೀದಿ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು.

ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ: ಜಾಮಿಯಾ ಮಸೀದಿ ಬಳಿ ರಾರಾಜಿದ ಕೇಸರಿ ಧ್ವಜಗಳು

ಗಂಜಾಂನಲ್ಲಿ ಚಾಲನೆ:

ಬೆಳಗ್ಗೆ 10.30ಕ್ಕೆ ಗಂಜಾಂನ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಾ.ಭಾನುಪ್ರಕಾಶ್‌ ಶರ್ಮಾ ಅವರು ವಿಶೇಷ ಪೂಜೆ ಸಲ್ಲಿಸಿ, ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡಿ, ಯಾತ್ರೆಗೆ ಚಾಲನೆ ನೀಡಿದರು. ಬಳಿಕ, ಯಾತ್ರೆ ಗಂಜಾಂನ ಬೇಸಿಗೆ ಅರಮನೆ, ಆಸ್ಪತ್ರೆ, ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪುರಾತನಕೋಟೆ ದ್ವಾರದಲ್ಲಿ ಸಂಚರಿಸಿ, ಮಧ್ಯಾಹ್ನ 2.30ರ ವೇಳೆಗೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ತಲುಪಿತು. ಅಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ, ಮಾಲಾಧಾರಿಗಳು ತಮ್ಮ ಮಾಲೆ ವಿಸರ್ಜಿಸಿದರು.

ಸಚಿವ ಕೆ.ಸಿ ನಾರಾಯಣಗೌಡ ಯಾತ್ರೆಯಲ್ಲಿ ಪಾಲ್ಗೊಂಡು, ಸ್ವಲ್ಪ ದೂರದವರೆಗೆ ಸಾಗಿ, ಯಾತ್ರೆಗೆ ಬೆಂಬಲ ನೀಡಿದರು. ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್‌, ಯುವ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಫೈಟರ್‌ ರವಿ ಸೇರಿದಂತೆ ಇತರರು ಸಾಥ್‌ ನೀಡಿದರು. ಮೆರವಣಿಗೆಯುದ್ದಕ್ಕೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಹನುಮ ಮಾಲಾಧಾರಿಗಳು ಕೇಸರಿ ಧ್ವಜ ಹಿಡಿದು, ಜೈ ಶ್ರೀರಾಮ್‌, ಶ್ರೀರಾಮ, ಭಜರಂಗಿ ಭಜರಂಗಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಹನುಮ ಚಾಲಿಸ್‌ ಪಠಿಸಿದರು. ಭಜನೆ, ಕೀರ್ತನೆಗಳನ್ನು ಹಾಡಿದರು. ಪುಟ್ಟಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮನ ವೇಷ ತೊಟ್ಟು ಗಮನ ಸೆಳೆದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಗಾರಿ, ಗೊಂಬೆಕುಣಿತ, ತಮಟೆ ಹಾಗೂ ಮಂಗಳವಾದ್ಯಗಳು ಮೊಳಗಿದವು.

ಯಾತ್ರೆ ಸಾಗುವ ದಾರಿಯುದ್ದಕ್ಕೂ ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ದಾರಿಯುದ್ದಕ್ಕೂ ಹನುಮ ಮಾಲಾಧಾರಿಗಳಿಗೆ ಮಜ್ಜಿಗೆ, ಪಾನಕ ನೀಡಿ ಜನ ಸತ್ಕರಿಸಿದರು. ಹನುಮನ ಉತ್ಸವ ಮೂರ್ತಿಗೆ ಹಣ್ಣು, ಕಾಯಿ ಒಡೆದು ಪೂಜೆ ಸಲ್ಲಿಸಿದರು.

ಮಸೀದಿಗೆ ನುಗ್ಗಲು ಯತ್ನ:

ಯಾತ್ರೆ ಜಾಮೀಯಾ ಮಸೀದಿ ಬಳಿ ಆಗಮಿಸುತ್ತಿದ್ದಂತೆ ಹನುಮ ಮಾಲಾಧಾರಿಗಳು, ‘ಅಯೋಧ್ಯೆಯಲ್ಲಿ ರಾಮಮಂದಿರ, ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ, ಹನುಮನ ಪಾದದ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವು’ ಎಂಬ ಘೋಷಣೆಗಳನ್ನು ಕೂಗಿದರು. ಮಸೀದಿ ಸುತ್ತ ಹಾಕಿದ್ದ ಮರದ ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ, ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ, ಭಕ್ತರು ಬ್ಯಾರಿಕೇಡ್‌ ಮುಂದೆಯೇ ಕುಳಿತು ಪ್ರತಿಭಟನೆ ನಡೆಸಿದರು. ಸ್ವಲ್ಪ ಸಮಯದ ನಂತರ, ಯಾತ್ರೆ ಅಲ್ಲಿಂದ ಮುಂದಕ್ಕೆ ಸಾಗಿತು.

Hanuman Jayanti 2022: ಹನುಮ ಜಯಂತಿ ದಿನಾಂಕ, ಮುಹೂರ್ತ, ಪೂಜಾ ವಿಧಿ ಇಲ್ಲಿದೆ..

ಹಸಿರು ಬಾವುಟ ಕಿತ್ತ ಭಕ್ತರು:

ಯಾತ್ರೆ ಗಂಜಾಂನ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದ ವೇಳೆ ಮುಸ್ಲಿಮರೊಬ್ಬರ ಮನೆ ಮೇಲೆ ಹಸಿರು ಬಣ್ಣದ ಬಾವುಟ ಹಾರುತ್ತಿರುವುದು ಕಂಡು ಬಂತು. ತಕ್ಷಣವೇ ಹನುಮ ಮಾಲಾಧಾರಿಗಳು, ಮನೆ ಮೇಲೇರಿ, ಹಸಿರು ಬಾವುಟ ಕಿತ್ತೆಸೆದು, ಕೇಸರಿ ಬಾವುಟ ಹಾರಿಸಿದರು.

Follow Us:
Download App:
  • android
  • ios