ಕೊಯ್ನಾದಿಂದ ವಿಜಯಪುರ ಜಿಲ್ಲೆಗೆ 3 ಟಿಎಂಸಿ ನೀರು ಯತ್ನ: ಸಚಿವ ಎಂ.ಬಿ.ಪಾಟೀಲ

ಕೂಡಲೇ ಜಿಲ್ಲಾಡಳಿತ ಕನಿಷ್ಠ 3 ಟಿಎಂಸಿ ನೀರನ್ನಾದರೂ ವಿಜಯಪುರಕ್ಕೆ ಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಿ ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದ ಎಂ.ಬಿ.ಪಾಟೀಲ 

Attempt 3 TMC Water Release from Koyna Dam to Vijayapura district Says MB Patil grg

ವಿಜಯಪುರ(ಜೂ.24):  ವಿಜಯಪುರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಪರಿಹರಿಸಲು ಕೊಯ್ನಾ ಅಣೆಕಟ್ಟೆಯಿಂದ 3 ಟಿಎಂಸಿ ನೀರು ಹರಿಸುವಂತೆ ಕೋರಿ ಮಹಾರಾಷ್ಟ್ರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು. ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಮೊದಲ ಕೆಡಿಪಿ (ತ್ರೈಮಾಸಿಕ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕೊಯ್ನಾ ಜಲಾಶಯದಿಂದ ನೀರು ಪಡೆಯುವಂತೆ ಸಲಹೆ ನೀಡಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ, ನಿಮ್ಮ ಪಕ್ಕದಲ್ಲಿಯೇ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಕುಳಿತಿದ್ದಾರೆ. ಅವರ ಬಳಿಯೇ ಚಾವಿ ಇದೆ ಎಂದರು. ಆಗ ಪ್ರಕಾಶ ಹುಕ್ಕೇರಿ, ನೀರು ಹರಿಸಿಕೊಳ್ಳವುದು ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ನಡೆಯುವಂತಹದ್ದಲ್ಲ. ಎರಡು ಸರ್ಕಾರಗಳು ಕುಳಿತು ಮಾತನಾಡಿದಾಗ ನೀರು ಬರಬಹುದು ಎಂದರು.

ದೇವರ ಹೆಸರಿನಲ್ಲಿ ಕಂಟ್ರಿ ಸಾರಾಯಿ ಮಾರಾಟ: ಗಲ್ಲಿ ಗಲ್ಲಿಯಲ್ಲಿ ಕಳ್ಳಬಟ್ಟಿಯದ್ದೇ ಸಾಮ್ರಾಜ್ಯ !

ಆಗ ಸಚಿವ ಎಂ.ಬಿ.ಪಾಟೀಲ, ಕೂಡಲೇ ಜಿಲ್ಲಾಡಳಿತ ಕನಿಷ್ಠ 3 ಟಿಎಂಸಿ ನೀರನ್ನಾದರೂ ವಿಜಯಪುರಕ್ಕೆ ಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಿ ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.
ಸಚಿವ ಶಿವಾನಂದ ಪಾಟೀಲ ಅವರು, ಪ್ರಸ್ತುತ ಸರ್ಕಾರಕ್ಕೆ ಅದರ ಜೊತೆಗೆ ಜಲಸಂಪನ್ಮೂಲ ಸಚಿವರಿಗೂ ಮನವಿ ಮಾಡಿ, ನಿಯೋಗದೊಂದಿಗೆ ಈ ವಿಷಯವಾಗಿ ಭೇಟಿ ಮಾಡಿದರೂ ಪರವಾಯಿಲ್ಲ ಎಂದು ಸಲಹೆ ನೀಡಿದರು.

ಗ್ರಾಮೀಣ ಕುಡಿಯುವ ನೀರಿನ ಕುರಿತು ವಿವರಣೆ ನೀಡಿದ ಸಿಇಒ ರಾಹುಲ್‌ ಶಿಂಧೆ, ಇಂಡಿ ಭಾಗದ ಅಡವಿ ವಸ್ತಿಯಲ್ಲಿ ಹಳಗುಣಕಿ, ಬಸನಾಳ, ಚವಡಿಹಾಳ, ಶಿರನಾಳ ಗ್ರಾಮದಲ್ಲಿ ಎಪ್ರಿಲ್‌ ತಿಂಗಳಿಂದಲೇ 7 ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಮೇ-ಜೂನ್‌ ತಿಂಗಳಲ್ಲಿ ಚಡಚಣ, ಹಲಸಂಗಿ, ಜಿಗಜಿವಣಗಿ ಗ್ರಾಮದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ತಿಕೋಟಾ ಬಹುಹಳ್ಳಿ ಕುಡಿಯುವ ಯೋಜನೆ 400 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಕೆಟ್ಟಿರುವುದರಿಂದ ಸ್ಥಗಿತಗೊಂಡಿದ್ದು, ಟಕ್ಕಳಕಿ, ಇಟ್ಟಂಗಿಹಾಳ, ಜಾಲಗೇರಿ ಗ್ರಾಮಗಳಿಗೆ ಟ್ಯಾಂಕರ್‌ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಬಗ್ಗೆ ನಿರ್ಲಕ್ಷ್ಯ ತೋರದೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಜುಲೈ ಮಾಸಾಂತ್ಯದವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿದೆ. ಜುಲೈ ನಂತರ ಕುಡಿಯುವ ನೀರಿನ ಕೊರತೆ ಆಗದಂತೆ ಸನ್ನದ್ಧರಾಗಿರಬೇಕು. ಇದರಲ್ಲಿ ಏನಾದರೂ ಲೋಪವೆಸಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವದ್ವಯರು ಎಚ್ಚರಿಸಿದರು

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜುಲೈನಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಶಾಲೆ, ಆಸ್ಪತ್ರೆ ಹಾಗೂ ಸರ್ಕಾರಿ ಆಸ್ತಿಯಲ್ಲಿರುವ 890 ಕೊಳವೆಬಾವಿ ಹಾಗೂ 653 ಖಾಸಗಿ ಬೋರವೆಲ್‌ಗಳನ್ನು ಗುರುತಿಸಲಾಗಿದ್ದು, ಬೋರವೆಲ್‌ನಲ್ಲಿ ನೀರು ಬತ್ತಿದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದರು.

ಟ್ಯಾಂಕರ್‌ ಮುಖಾಂತರ ನೀರು ಪೂರೈಕೆಗೂ ಮುನ್ನ ಒಂದು ಅಥವಾ ಎರಡು ಬೋರವೆಲ್‌ಗಳನ್ನು ಕೊರೆಯಿಸಿ ನೋಡಿ, ಅಲ್ಲಿ ನೀರು ಲಭ್ಯವಾಗದೇ ಇದ್ದರೆ ಟ್ಯಾಂಕರ್‌ ಮೂಲಕ ನೀರು ಕೊಡಿ ಎಂದು ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.

ಜಾತಿ, ಧರ್ಮ ಆಧರಿಸಿ ಅಭಿವೃದ್ಧಿ ಬೇಡ

ವಿಜಯಪುರ ನಗರದಲ್ಲಿ ಜಾತಿ, ಧರ್ಮ ಆಧರಿಸಿ ನಗರದ ವಾರ್ಡ್‌ಗಳಿಗೆ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಮಾಡುವುದು ನಡೆದಿದೆ. ಈ ರೀತಿ ಆದರೆ ನಾನು ಹಾಗೂ ನಮ್ಮ ಸರ್ಕಾರ ಸಹಿಸುವುದಿಲ್ಲ, ನಗರದಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿದೆ. ಆದರೆ ಅದನ್ನು ಬೆಳೆಸಲು ಹೋಗುವುದಿಲ್ಲ. ಜಿಲ್ಲಾಧಿಕಾರಿ ಸಹ ಈ ವಿಷಯವಾಗಿ ಮೌನ ವಹಿಸಿದ್ದೀರಿ ಎಂದು ಎಂ.ಬಿ.ಪಾಟೀಲ ಗರಂ ಆದರು. ನಮ್ಮ ಸರ್ಕಾರದಲ್ಲಿ ಈಗ ಈ ರೀತಿ ನಡೆಯಲ್ಲ, ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಎಲ್ಲ ವಾರ್ಡ್‌ಗಳಲ್ಲಿ ಜಾತಿ, ಧರ್ಮ ಯಾವ ಬೇಧವೂ ಇಲ್ಲದೇ ಅಭಿವೃದ್ಧಿ ಕಾಮಗಾರಿ ನಡೆಯಬೇಕು ಎಂದು ಸೂಚಿಸಿದರು.

ತಾಜ್‌ ಬಾವಡಿ ನೀರು ಗೃಹ ಬಳಕೆಗೆ ಬಳಸಿ

ಐತಿಹಾಸಿಕ ತಾಜ್‌ಬಾವಡಿ ಮೊದಲಾದ ಬಾವಿಗಳನ್ನು ಈಗಾಗಲೇ ಪುನರುಜ್ಜೀವನ ಮಾಡಲಾಗಿದ್ದು, ಗೃಹಬಳಕೆಯ ಉದ್ದೇಶಕ್ಕೆ ಬಳಸಿದರೆ ಉತ್ತಮ, ಇದರಿಂದ ಕುಡಿವ ನೀರಿನ ಮೇಲೆ ಅವಲಂಬನೆಯ ಒತ್ತಡ ಕಡಿಮೆ ಆಗಲಿದೆ. ಸರ್ಕಾರ ಹಾಗೂ ದಾನಿಗಳ ನೆರವು ಪಡೆದು ಒಟ್ಟು .9 ಕೋಟಿಗಳನ್ನು ಐತಿಹಾಸಿಕ ಬಾವಡಿಗಳ ಪುನರುಜ್ಜೀವನ ಮಾಡಲಾಗಿದೆ, ಒಂದು ರೀತಿ ಭೀಕ್ಷೆ ಬೇಡಿ ಹಣ ತಂದಿದ್ದೇನೆ. ಆದರೆ, ಉದ್ದೇಶ ಸಫಲವಾಗಿಲ್ಲ ಎಂದು ಎಂ.ಬಿ.ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ವರ್ಷ ಕಳೆದರೂ ಈ ಬಾವಡಿಗಳ ಬಗ್ಗೆ ಯಾರೂ ಯೋಚಿಸಿಲ್ಲ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾದರೆ, ಕೋಟ್ಯಂತರ ಹಣ ವ್ಯರ್ಥವಾದಂತಾಗಿದೆ. ನಾನೇ ಖುದ್ದಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಐತಿಹಾಸಿಕ ತಾಜ್‌ ಬಾವಡಿ ನೀರನ್ನು ಜಿಲ್ಲಾ ಆಸ್ಪತ್ರೆ ಹಾಗೂ ಸೈನಿಕ ಶಾಲೆಗೆ ಪೂರೈಸಿ ಪಂಪ್‌ ಮಾಡುವ ದೃಷ್ಟಿಯಿಂದ . 2.18 ಕೋಟಿ ನೀಡಿದ್ದೆನು. ಆದರೆ, ಇಂದಿಗೂ ಆ ನೀರು ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಡಿಒಗಳ ಮೊಬೈಲ್‌ ಆಫ್‌; ಇಒಗಳು ಯೂಸ್‌ಲೆಸ್‌!

ಪಿಡಿಓಗಳು ಫೋನ್‌ ಬಂದ್‌ ಮಾಡಿದ್ದಾರೆ, ಯಾವ ನಂಬರ್‌ ಆನ್‌ ಇಲ್ಲ. ತಾಲೂಕಾ ಪಂಚಾಯಿತಿ ಇಒಗಳು ಯೂಸ್‌ಲೆಸ್‌ ಆಗಿದ್ದಾರೆ, ಸಿಪಾಯಿಗಳೇ ಅವರಿಗೆ ಅಂಜುತ್ತಿಲ್ಲ ಇನ್ನೂ ಪಿಡಿಒ ಅಂತೂ ಬಿಡಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಇಒಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದರು. ಕುಡಿಯುವ ನೀರು ಪೂರೈಕೆಯಲ್ಲಿ ತಹಸೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡಿ, ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಸೂಚಿಸಿದರು.

ಮುದ್ದೇಬಿಹಾಳ: ಮಳೆ ಹನಿ ಕಾಣದೆ ಕಂಗಾಲಾದ ರೈತ..!

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಶಿಂಧೆ, ಕೂಡಲೇ ಪಿಡಿಒಗಳಿಗೆ ನೂತನ ನಂಬರ್‌ಗಳನ್ನು ನೀಡಲಾಗುವುದು, ಕಡ್ಡಾಯವಾಗಿ ಸರ್ಕಾರಿ ಮೊಬೈಲ್‌ ಸಂಖ್ಯೆಯ ನಂಬರ್‌ಗಳನ್ನು ಆನ್‌ ಇರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ ಎಂದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ವಿಠಲ ಕಟಕಧೋಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios