ಮುದ್ದೇಬಿಹಾಳ: ಮಳೆ ಹನಿ ಕಾಣದೆ ಕಂಗಾಲಾದ ರೈತ..!

ರೈತರಿಗೆ ಮುಂಗಾರು ಬರೆ ಎಳೆದಿದೆ. ಜೂನ್‌ ತಿಂಗಳ ಅಂತ್ಯದೊಳಗೆ 174 ಮಿಮೀ.ಮಳೆ ಆಗಬೇಕಿತ್ತು ಆದರೇ 95.9 ಮಿ.ಮೀ. ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.

Farmers Faces Problems Due to Monsoon Rain Delay at Muddebihal in Vijayapura grg

ನಾರಾಯಣ ಮಾಯಾಚಾರಿ

ಮುದ್ದೇಬಿಹಾಳ(ಜೂ.23):  ನೀರು ಹೊರಗೆ ಹಾಕಲು ಬಿಕ್ಕುತ್ತಿರುವ ಬೋರ್‌ವೆಲ್‌ಗಳು, ಬಿರು ಬಿಸಿಲಿಗೆ ಒಣಗಿ ನಿಂತ ಕಬ್ಬು ಬೆಳೆ, ಆಷಾಢ ಮಾಸ ಎದುರಾದರೂ ಸದ್ದು ಮಾಡದ ಮುರುಗನ (ಮೃಗಶಿರ) ಮಳೆ, ಪೂರ್ವದ ಅಡ್ಡ ಮಳೆಗಳು, ಬಿತ್ತನೆಗೆ ಪೂರಕ ಸಜ್ಜಾಗದ ಕೃಷಿ ಭೂಮಿ, ಮಳೆ ಹನಿ ಕಾಣದೆ ಕಂಗಾಲದ ರೈತ. ಒಟ್ಟಿನಲ್ಲಿ ಬರದ ಛಾಯೆ ಆವರಿಸುವ ಆತಂಕ ಎದುರಾಗಿದೆ ಎಂದರೆ ತಪ್ಪಾಗಲಾರದು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಇನ್ನೇನು ರೈತರು ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಂಡು ಬಿತ್ತನೆಯಲ್ಲಿ ತೊಡಗಬಹುದು ಎಂಬ ಆಶಾ ಭಾವನೆಯಲ್ಲಿದ್ದ ರೈತರಿಗೆ ಮುಂಗಾರು ಬರೆ ಎಳೆದಿದೆ. ಜೂನ್‌ ತಿಂಗಳ ಅಂತ್ಯದೊಳಗೆ 174 ಮಿಮೀ.ಮಳೆ ಆಗಬೇಕಿತ್ತು ಆದರೇ 95.9 ಮಿ.ಮೀ. ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.

ವಿಜಯಪುರ: ಕಳ್ಳರ ಕೈಚಳಕ, ಕುಡಿವ ನೀರಿಗೆ ಕಂಟಕ..!

ಮುಂಗಾರಿನಲ್ಲಿ ಉತ್ತಮ ಫಸಲು ತೆಗೆಯಬಹುದು ಎಂಬ ರೈತನ ಆಸೆಗೆ ಮಳೆ ತಣ್ಣೀರೆರಚಿದೆ. ರೈತನ ಮುಖದಲ್ಲಿ ನಿರಾಸೆ ಮೂಡಿದೆ. ಮತಕ್ಷೇತ್ರದಲ್ಲಿ ಎಲ್ಲಿ ನೋಡಿದರಲ್ಲಿ ಬರಗಾಲದ ಕರಿ ಛಾಯೆ ಆವರಿಸಿದೆ. ಈ ಮಧ್ಯೆ ಮತಕ್ಷೇತ್ರದಲ್ಲಿರುವ ಏಕೈಕ ಮಹಾ ನದಿಗಳಲ್ಲೊಂದಾದ ಕೃಷ್ಣಾ ನದಿ ಕೂಡ ಸಂಪೂರ್ಣ ಬತ್ತಿ ಹೋಗಿದೆ. ಮಾತ್ರವಲ್ಲದೇ ಅಂತರ್ಜಲ ಕುಸಿತಗೊಂಡು ಜನ-ಜಾನುವಾರುಗಳಿಗೆ ಕುಡಿಯಲೂ ನೀರು ದೊರಕದ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಬಹುತೇಕ ಎಲ್ಲ ಗ್ರಾಮಗಳಲ್ಲಿನ ರೈತರು ಬಿತ್ತನೆಗಾಗಿ ಮುಗಿಲ ಕಡೆ ಮುಖ ಮಾಡಿ ಯಾವಾಗ ಮಳೆ ಸುರಿಯುತ್ತದೋ? ಎಂದು ನೋಡುತ್ತಿದ್ದಾರೆ. ಬೇಸಿಗೆ ಬಿಸಿಲಿನ ತಾಪಮಾನ ದಿನೇದಿನ ಏರಿಕೆಯಾಗುತ್ತಲೇ ಇದೆ. ಜೂನ್‌ ತಿಂಗಳು ಮುಗಿಯುತ್ತ ಬಂದರೂ ಮಳೆ ಸುರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಮೋಡ ನಿಚ್ಚಳವಾಗಿರುವುದು ಗೋಚರಿಸುತ್ತಿದೆ.

ಕರ್ನಾಟಕ ಮಾತ್ರವಲ್ಲದೆ, ಪಕ್ಕದ ಮಹಾರಾಷ್ಟ್ರದಲ್ಲಿಯೂ ಸಮರ್ಪಕ ಮಳೆ ಇಲ್ಲದ ಕಾರಣ ಕೋಯ್ನಾ, ರಾಜಪೂರ ಜಲಾಶಯಗಳ ಹಿನ್ನೀರಿನ ಮಟ್ಟ ಕುಂಠಿತಗೊಳ್ಳುತ್ತಿರುವುದರಿಂದ ಆ ಜಲಾಶಯಗಳಿಂದ ಕೃಷ್ಣೆಗೆ ನೀರು ಹರಿ ಬಿಡುತ್ತಿಲ್ಲ. ಇದರಿಂದಾಗಿ ನಮ್ಮ ಕೃಷ್ಣಾ ನದಿಯನ್ನೇ ನಂಬಿ ಬದುಕುತ್ತಿರುವ ರೈತರು ಸಂಕಷ್ಟಎದುರಿಸಬೇಕಾಗುತ್ತದೆ.

ಜೂ.15ರೊಳಗೆ ಮಳೆಯಾಗಿದ್ದರೆ ಹೆಸರು, ತೊಗರಿ, ಸಜ್ಜೆ, ಗೋವಿನ ಜೋಳ, ಹತ್ತಿ, ಸೂರ್ಯಕಾಂತಿ ಬಿತ್ತನೆಗೆ ರೈತರು ತರಾತುರಿಯಲ್ಲಿದ್ದರು. ಮಳೆ ಅಭಾವದಿಂದ ಹೆಸರು ಕಾಳು ಬೇಳೆಯಲು ಬರುವುದಿಲ್ಲ ಒಂದು ವೇಳೆ ಬೆಳೆದರೆ ರೋಗ ಮತ್ತು ಕೀಟಬಾಧೆ ಹೆಚ್ಚಾಗಿ ಇಳುವರಿ ಸಂಪೂರ್ಣ ಕುಂಠಿತಗೊಂಡು ಆರ್ಥಿಕ ಸಂಕಷ್ಟಎದುರಿಸಬೇಕಾಗುತ್ತದೆ ಎಂಬುದು ಕೃಷಿಕರ ಚಿಂತೆ.

ಒಂದು ವಾರದೊಳಗೆ ಹದವಾದ ಮಳೆಯಾದರೆ ಹೆಸರು ಕಾಳು ಹೊರತುಪಡಿಸಿ ಇನ್ನುಳಿದ ಮುಂಗಾರು ಬೆಳೆಗಳನ್ನು ಬೆಳೆಯಬಹುದಾಗಿದೆ. ರೈತರು ಸ್ವಲ್ಪ ಮಟ್ಟಿಗಾದರೂ ಸಂಕಷ್ಟದಿಂದ ಪಾರಾಗಬಹುದಾಗಿದೆ. ಆದರೇ ಮಳೆ ಬಾರದೆ ಕೈಕೊಟ್ಟರೆ ಹನಿ ನೀರಿಗೂ ಜನ-ಜಾನುವಾರು ಪರದಾಡುವ ಸ್ಥಿತಿ ಎದುರಾಗುವ ಸಂಭವವಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಗೋವಿನಜೋಳ 3492 ಹೇಕ್ಟರ್‌ ಬಿತ್ತನೆ ಗುರಿಯಿತ್ತು. ಆದರೆ, ಕೇವಲ 75 ಹೆ. ಅದೂ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಜ್ಜೆ 4850 ಗುರಿ, ತೊಗರಿ 70 ಸಾವಿರ ಹೆ. ಗುರಿಯಿತ್ತು. ಕೇವಲ 24 ಹೆಕ್ಟೇರ್‌ ಬಿತ್ತನೆಯಾಗಿದೆ. ಹೆಸರು 60 ಹೆ. ಗುರಿಯಾಗಿತ್ತು. ಆದರೆ, ಒಂದೇ ಒಂದು ಹೆಕ್ಟೇರ್‌ ಬಿತ್ತನೆ ಕಂಡಿಲ್ಲ.

ಸೂರ್ಯಕಾಂತಿ 10300 ಹೆ. ಗುರಿಯಾಗಿತ್ತು ಕೇವಲ 2 ಹೆ. ಬಿತ್ತನೆಯಾಗಿದೆ. ಹತ್ತಿ 14100 ಗುರಿಯಾಗಿತ್ತು 65 ಹೆ. ಬಿತ್ತನೆಯಾಗಿದೆ. ತಾಲೂಕಿನಲ್ಲಿ ವಿವಿಧ ಬೆಳೆಗಳ ಬಿತ್ತನೆಗೆ 1,11,401 ಗುರಿಯಲ್ಲಿ ಕೇವಲ 166 ಹೆಕ್ಟೇರ್‌ ಬಿತ್ತನೆಯಾಗಿದೆ.

ಕುಡಿವ ನೀರಿನ ಸಮಸ್ಯೆ ಹೊಸ್ತಿಲಲ್ಲಿ ವಿಜಯಪುರ ಜಿಲ್ಲೆ..!

ತಾಲೂಕಿನ ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದಲ್ಲಿ 56 ಕ್ವಿಂ.ತೊಗರಿ, 2 ಕ್ವಿಂ.ಹೆಸರು, 10 ಕ್ವಿಂ. ಗೋವಿನ ಜೋಳ, ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ 40 ಕ್ವಿಂ., 5 ಕ್ವಿಂ. ಗೋವಿನಜೊಳ, ನಾಲತವಾಡ ರೈತ ಸಂಪರ್ಕ ಕೇಂದ್ರದಲ್ಲಿ 111 ಕ್ವಿಂ.ತೊಗರಿ, 2 ಕ್ವಿಂ. ಹೆಸರು, ತಾಳಿಕೋಟಿ ರೈತ ಸಂಪರ್ಕ ಕೇಂದ್ರದಲ್ಲಿ 106 ಕ್ವಿಂ.ತೊಗರಿ, 2 ಕ್ವಿಂ. ಸೇರಿದಂತೆ ಇತರೆ ಬೆಳೆಗಳ ದಾಸ್ತಾನು ಮಾಡಲಾಗಿದೆ. 3373 ಟನ್‌ ರಸಗೊಬ್ಬರದ ಬೇಡಿಕೆ ಇದ್ದು ಸದ್ಯ 3237

ಟನ್‌ ರಸಗೊಬ್ಬರ ದಾಸ್ತಾನಿದೆ.

ಈ ವರ್ಷ ವಾಡಿಕೆ ಮಳೆಗಿಂತಲೂ ಕಡಿಮೆ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ನಾಲ್ಕೈದು ದಿನಗಳಲ್ಲಿ ಮಳೆಯಾದರೆ ಒಳ್ಳೆಯದು ಇಲ್ಲದಿದ್ದರೆ ತುಂಬಾ ಸಂಕಷ್ಟಎದುರಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ. ಮಾತ್ರವಲ್ಲದೇ ರೈತರು ಮತ್ತು ಜನ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃತ ಕ್ರಮ ವಹಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂದ ವೇಳೆ ಮಳೆಯಾಗದೇ ಇದ್ದರೆ ಮೋಡ ಬಿತ್ತನೆ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಅಂತ ಮುದ್ದೇಬಿಹಾಳ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ.ಭಾವಿಕಟ್ಟಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios