ಹಫ್ತಾ ಕೊಡದ ಕಾರಣಕ್ಕೆ ಪಬ್ ಮೇಲೆ ದಾಳಿ: ಯು.ಟಿ.ಖಾದರ್ ಗಂಭೀರ ಆರೋಪ
ಮಂಗಳೂರಿನ ಬಲ್ಮಠದ ಬಳಿಯ ಪಬ್ ಮೇಲೆ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್ ಭಜರಂಗದಳದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಭಜರಂಗದಳದವರು ಹಫ್ತಾ ಕೊಡದ ಕಾರಣಕ್ಕೆ ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಲಿ ಎಂದು ಖಾದರ್ ಹೇಳಿದ್ದಾರೆ.
ಮಂಗಳೂರು: ನಗರದ ಬಲ್ಮಠ ಬಳಿ ನಿನ್ನೆ (ಸೋಮವಾರ ಜು.25) ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸ್ತಾ ಇದ್ದ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ತಡೆಯೊಡ್ಡಿದ್ದು, ಪಾರ್ಟಿಯಲ್ಲಿ ತೊಡಗಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪಬ್‌ನಿಂದ ಹೊರಗೆ ಕಳುಹಿಸಿದ ಘಟನೆ ನಡೆದಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಭಜರಂಗದಳದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಭಜರಂಗದಳದವರು ಹಫ್ತಾ ಕೊಡದ ಕಾರಣಕ್ಕೆ ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಲಿ ಎಂದು ಖಾದರ್ ಹೇಳಿದ್ದಾರೆ.
ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ ವಿಚಾರ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಯು.ಟಿ.ಖಾದರ್ ಮಂಗಳೂರಿನಲ್ಲಿ ಬಾರ್ ಮುಂದೆ ನಡೆದ ಘಟನೆ ಬ್ರಾಂಡ್ ಮಂಗಳೂರಿಗೆ ಹೊಡೆತ ಕೊಟ್ಟಿದೆ. ಸಮಾಜದ್ರೋಹಿ ಶಕ್ತಿಗಳು ಮತ್ತು ದಾರಿ ತಪ್ಪಿದ ಯುವಕರು ಈ ಕೃತ್ಯವೆಸಗಿದ್ದಾರೆ. ಇದರಿಂದ ಬ್ರಾಂಡ್ ಮಂಗಳೂರು ಗೌರವಕ್ಕೆ ಕಪ್ಪು ಚುಕ್ಕೆ ಬಂದಿದೆ. ಇದು ಭವಿಷ್ಯದ ಮಂಗಳೂರಿನ ಅಭಿವೃದ್ಧಿಗೆ ಮಾರಕ. ಹೀಗಾಗಿ ಇಂಥವರನ್ನ ಪತ್ತೆ ಹಚ್ಚಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.
ಕಡಲ್ಕೊರೆತ ವಿಚಾರದಲ್ಲಿ ಸರ್ಕಾರ ನನಗೆ ಸಪೋರ್ಟ್ ಮಾಡ್ತಿಲ್ಲ: ಯು.ಟಿ.ಖಾದರ್ ಗಂಭೀರ ಆರೋಪ
ಈಗಾಗಲೇ ವ್ಯಾಪಾರಸ್ಥರು ಕೋವಿಡ್‌ನಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಟ್ಯಾಕ್ಸ್, ಜಿಎಸ್‌ಟಿ ಕಟ್ಟುವ ಜೊತೆ ಈ ರೌಡಿಗಳಿಗೆ ಹಫ್ತಾ ಕೊಡಬೇಕು. ಇದೊಂದು ಇವರ ಹಫ್ತಾ ವಸೂಲಿ ತಂತ್ರ ಅಷ್ಟೇ. ಸರ್ಕಾರ ಇದನ್ನ ಗಮನಿಸಲಿ, ಜನರ ನೆಮ್ಮದಿ ಹಾಳಾಗ್ತಿದೆ. ಈ ಘಟನೆಗಳಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳೇ ಪ್ರೇರಣೆ. ಸಿಎಂ ಹೇಳಿದ ಆಕ್ಷನ್ ರಿಯಾಕ್ಷನ್ ಹೇಳಿಕೆ ಈ ಯುವಕರ ತಲೆಯಲ್ಲಿ ಇದೆ. ನಿನ್ನೆ ಪಬ್‌ಗೆ ಹೋಗಿ ಗಲಾಟೆ ಮಾಡಿದವರು ರಿಯಾಕ್ಷನ್ ಅಂತಿದಾರೆ. ಅಲ್ಲಿದ್ದ ಮಕ್ಕಳಿಗೆ ತಂದೆ-ತಾಯಿ ಇದ್ದಾರೆ. ಅದನ್ನು ಕೇಳೋಕೆ ಇವರ್ಯಾರು?. ಖಾಸಗಿ ಜಾಗಕ್ಕೆ ಹೋಗಿ ಯಾರ್ಯಾರ ಮಕ್ಕಳಿಗೆ ನಿಂದಿಸಲು ಅವಕಾಶ ಕೊಟ್ಟದ್ಯಾರು? ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನ ಸಮಗ್ರ ತನಿಖೆ ನಡೆಸಲಿ ಎಂದು ಖಾದರ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಬ್ಯುಸಿನೆಸ್ ಮಾಡುವವರಿಗೆ ನೆಮ್ಮದಿಯಾಗಿರಲು ಅವಕಾಶ ಕೊಡಿ. ಈ ಬ್ಲ್ಯಾಕ್ ಮೇಲರ್, ಹಫ್ತಾ ವಸೂಲಿಯವರ ಮೇಲೆ ಕ್ರಮ ಕೈಗೊಳ್ಳಿ. ಮಂಗಳೂರಿನ ಗೌರವ ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿ. ಇನ್ಫೋಸಿಸ್ ಒಂದು ಬಿಟ್ಟು ಇಲ್ಲಿಗೆ ಯಾವುದೇ ಐಟಿ ಕಂಪನಿ ಬರ್ತಿಲ್ಲ. ಇದು ಮಂಗಳೂರು ಅಭಿವೃದ್ಧಿಗೆ ಮಾರಕ, ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದರು.
Mangaluru: ಕುಡಿದು ಮೋಜು-ಮಸ್ತಿ: ಭಜರಂಗದಳದಿಂದ ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಅಡ್ಡಿ
ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣದಲ್ಲಿ ಅವರ ಮೇಲೆ ಕೇಸ್ ಆಗಿದೆ. ನಿನ್ನೆಯ ಘಟನೆ ಬಗ್ಗೆ ಸರ್ಕಾರ ಮತ್ತು ಪೊಲೀಸರ ಆಕ್ಷನ್ ಏನು? ಈ ಬಗ್ಗೆ ಸುಮ್ಮನೆ ಕೂರ್ತಾರಾ? ಇದರ ವಿಚಾರದಲ್ಲಿ ಮೌನ ಯಾಕೆ? ಅವರು ಹಫ್ತಾ ಕೊಡದ ಕಾರಣಕ್ಕೆ ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಲಿ. ಸರ್ಕಾರ ಸುಮ್ಮನೆ ಕೂರುವುದಾದರೆ ಎಲ್ಲಾ ಪಬ್ ಗಳ ಲೈಸೆನ್ಸ್ ರದ್ದು ಮಾಡಲಿ. ಪಬ್ ಮತ್ತು ಡ್ಯಾನ್ಸ್ ಬಾರ್ ಎಲ್ಲವನ್ನೂ ಇವರು ಬಂದ್ ಮಾಡಲಿ. ನಮ್ಮ ಜಿಲ್ಲೆಯ ಹೆಸರು ಕೆಡಬಾರದು, ತಕ್ಷಣ ಕ್ರಮ ಆಗಲಿ. ಈ ರೀತಿ ಅನೈತಿಕ ಗೂಂಡಾಗಿರಿ ಮಾಡಿದ್ರೆ ಅದನ್ನ ಮಟ್ಟ ಹಾಕಬೇಕು. ಕಾನೂನು ಬದ್ದ ವ್ಯಾಪಾರ ಮಾಡುವವರಿಗೆ ನೆಮ್ಮದಿಯಾಗಿರಲು ಬಿಡಬೇಕು. ಅಪ್ರಾಪ್ತರು ಬಂದಿದ್ದರೆ ಅವರ ಮೇಲೆ ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಲಿ ಎಂದು ಖಾದರ್ ಆಗ್ರಹಿಸಿದರು.