ಕಡಲ್ಕೊರೆತ ವಿಚಾರದಲ್ಲಿ ಸರ್ಕಾರ ನನಗೆ ಸಪೋರ್ಟ್ ಮಾಡ್ತಿಲ್ಲ: ಯು.ಟಿ.ಖಾದರ್ ಗಂಭೀರ ಆರೋಪ
ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ, ಕಳೆದ ಮೂರು ವರ್ಷಗಳಿಂದ ನನಗೆ ಬಿಜೆಪಿ ಸರ್ಕಾರ ಬೆಂಬಲ ನೀಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು(ಜು.1): ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ, ಕಳೆದ ಮೂರು ವರ್ಷಗಳಿಂದ ನನಗೆ ಬಿಜೆಪಿ ಸರ್ಕಾರ ಬೆಂಬಲ ನೀಡ್ತಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಮತ್ತು ದ.ಕ ಜಿಲ್ಲಾಡಳಿದ ವಿರುದ್ದ ಯು.ಟಿ.ಖಾದರ್ ನೇರ ಆರೋಪ ಮಾಡಿದ್ದಾರೆ. ಕಡಲ್ಕೊರೆತ ಸಂಬಂಧಿಸಿ ನನಗೆ ಸರ್ಕಾರದಿಂದ ಯಾವುದೇ ಸಪೋರ್ಟ್ ಸಿಗ್ತಿಲ್ಲ. ನಾವು ಇದ್ದಾಗ ಅಲ್ಲಿ ರಸ್ತೆ ಕಟ್ ಮತ್ತು ಮನೆ ಬಿದ್ದಾಗ ತುರ್ತು ಕ್ರಮ ಕೈಗೊಂಡಿದ್ದೆವು. ಆದರೆ ಈ ಸರ್ಕಾರ ಬಂದ ಬಳಿಕ ಒಂದೇ ಒಂದು ಕೆಲಸ ಆಗಿಲ್ಲ. ಅಧಿಕಾರಿಗಳ ಬಳಿ ಕೇಳಿದ್ರೆ ನಮಗೆ ಮೇಲಿಂದ ಆದೇಶ ಬಂದಿಲ್ಲ ಅಂತಾರೆ.
ದ.ಕ ಜಿಲ್ಲೆಯಲ್ಲಿ ಅಧಿಕಾರಿ ವರ್ಗದ ಕೆಲಸ ಶ್ಲಾಘಿಸ್ತೇನೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಎಲ್ಲಿದ್ದಾರೆ? ಅವರು ಸಭೆ ಕರೆದು ಮಳೆ ಸಂಬಂಧ ತುರ್ತು ಕೆಲಸ ಮಾಡಬೇಕು. ಉಸ್ತುವಾರಿ ಸಚಿವರ ಯಾವುದೇ ಸಭೆ ಈವರೆಗೆ ಜಿಲ್ಲೆಯಲ್ಲಿ ಆಗಿಲ್ಲ. ನನ್ನ ಕ್ಷೇತ್ರದ ಕಡಲ್ಕೊರೆತ ಸಂಬಂಧ ಕಳೆದ ಹತ್ತು ದಿನದಿಂದ ಹೇಳ್ತಾ ಇದೀನಿ. ಜಿಲ್ಲಾಧಿಕಾರಿ, ಜಿಲ್ಲೆಯ ಮಂತ್ರಿಗಳಿಗೆ ಹೇಳಿದ್ರೂ ಕ್ಯಾರೇ ಅಂತಿಲ್ಲ. ಸ್ಥಳಕ್ಕೆ ಭೇಟಿ ಕೊಟ್ಟು ತುರ್ತು ಕೆಲಸ ಮಾಡಬೇಕಾದ ಕಿಂಚಿತ್ತೂ ಆಲೋಚನೆಯೂ ಇಲ್ಲ. ಕಡಲಿಗೆ 70 ಮೀ. ಕಲ್ಲು ಹಾಕಿದ್ರೆ ನೂರಾರು ಮನೆಗಳು ಉಳಿಯುತ್ತೆ.
ಐದು ಜಿಲ್ಲೆಗಳಲ್ಲಿ ಭಾರೀ ಮಳೆ: ಮಂಗ್ಳೂರಲ್ಲಿ ಪ್ರವಾಹ, ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಆದರೆ ಇದನ್ನ ಸರ್ಕಾರ ಮತ್ತು ಜಿಲ್ಲಾಡಳಿತ ಮಾಡ್ತಿಲ್ಲ. ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಆಗೋದು ಸಹಜ. ಆದರೆ ಇದರ ಬಗ್ಗೆ ಚರ್ಚಿಸಲು ಮಳೆಗಾಲದ ಅಧಿವೇಶನ ನಡೆಸಬೇಕು. ಆದರೆ ಈ ಬಾರಿ ಇನ್ನೂ ಮಳೆಗಾಲದ ಅಧಿವೇಶನ ಕರೆದಿಲ್ಲ, ನಾವು ಜನರ ನೋವನ್ನ ಎಲ್ಲಿ ಚರ್ಚಿಸಬೇಕು. ಜನರ ನೋವು, ಆಗದ ಕೆಲಸ ಚರ್ಚಿಸಲು ತಕ್ಷಣ ಅಧಿವೇಶನ ಕರೆಯಿರಿ ಎಂದು ಅಗ್ರಹಿಸಿದ್ದಾರೆ.
ಯಾರೊಬ್ಬರೂ ನಮ್ಮ ಸಮಸ್ಯೆ ಕೇಳಲ್ಲ: ಕಡಲ್ಕೊರೆತ ಸಂತ್ರಸ್ತರ ಹಿಡಿ ಶಾಪ
ಮಂಗಳೂರಿನ ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ಉಚ್ಚಿಲ-ಬಟ್ಟಪಾಡಿ ಮಧ್ಯೆ ರಸ್ತೆ ಕಡಿತಗೊಂಡು ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಕಣ್ಣೀರಿಟ್ಟ ಬಟ್ಟಪಾಡಿ ಗ್ರಾಮಸ್ಥರು, ನಮ್ಮ ಸಮಸ್ಯೆ ಕೇಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಬರ್ತಿಲ್ಲ. ನಾವು ಕಡಲ್ಕೊರೆತಕ್ಕೆ ಬಾಡಿಗೆ ಕೊಟ್ಟು ಬೇರೆ ಕಡೆ ಉಳಿಯುತ್ತಿದ್ದೇವೆ. ಕೂಲಿ ನಾಲಿ ಮಾಡಿ ಬದುಕುವ ಹಣದಲ್ಲಿ ಬಾಡಿಗೆ ಕೊಡಬೇಕಿದೆ. ಬಾಡಿಗೆ ಹಣವಾಗಲೀ ಮನೆ ಡ್ಯಾಮೇಜ್ ಪರಿಹಾರವಾಗಲೀ ಸರ್ಕಾರ ಕೊಟ್ಟಿಲ್ಲ.
ಭಾರೀ ಮಳೆಯ ಮುನ್ಸೂಚನೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಕಡಲಿಗೆ ಕಲ್ಲು ಹಾಕಿ ಕಡಲ್ಕೊರೆತ ನಿಯಂತ್ರಿಸೋ ಕೆಲಸವನ್ನು ಮಾಡ್ತಿಲ್ಲ. ಸ್ಥಳೀಯ ಪಂಚಾಯತ್ ನವರು ಬಲವಂತವಾಗಿ ಸಹಿ ಪಡೆದಿದ್ದಾರೆ ಮನೆ ಖಾಲಿ ಮಾಡಿ ಸರ್ಕಾರಿ ಶಾಲೆಗೆ ಹೋಗಿ ಅಂತಿದ್ದಾರೆ. ಪ್ರಾಣಕ್ಕೆ ಅಪಾಯವಾದ್ರೆ ನಾವು ಜವಾಬ್ದಾರರಲ್ಲ ಅಂತ ಸಹಿ ಪಡೆದಿದ್ದಾರೆ. ಆದರೆ ಸಮುದ್ರಕ್ಕೆ ಕಲ್ಲು ಹಾಕಿ ಪರಿಹಾರ ಮಾಡುವ ಕೆಲಸ ಮಾಡ್ತಿಲ್ಲ. ಸದ್ಯ ರಸ್ತೆ ಸಂಪರ್ಕ ಕೂಡ ಕಟ್ ಆಗಿದ್ದು, ವಾಹನದಲ್ಲಿ ಹೋಗಲು ದಾರಿ ಇಲ್ಲ. ಹಲವು ವರ್ಷಗಳಿಂದ ಟ್ಯಾಕ್ಸ್ ಕಟ್ಟಿ ನಾವು ಇಲ್ಲಿ ಇದ್ದೇವೆ. ಆದರೆ ಕಡಲ್ಕೊರೆತಕ್ಕೆ ನಮಗೆ ಸಮಸ್ಯೆ ಆದಾಗ ಯಾರೊಬ್ಬರೂ ನಮ್ಮ ಸಮಸ್ಯೆ ಕೇಳಲ್ಲ ಅಂತ ದೂರಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಮಳೆ ನಿಂತರೂ ಭಾರೀ ಕಡಲ್ಕೊರೆತ ನಿಂತಿಲ್ಲ. ಉಚ್ಚಿಲ, ಬಟ್ಟಪಾಡಿ, ಉಳ್ಳಾಲ ಕಡಲ ತೀರದಲ್ಲಿ ಭಾರೀ ಅಲೆಗಳ ಅಬ್ಬರ ಜೋರಾಗಿದ್ದು, ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಪರ್ಕವಣೆ ಇಲ್ಲದೇ ದ್ವೀಪದಂತಾಗಿದೆ. ರಸ್ತೆ ಸಂಪರ್ಕವಿಲ್ಲದೇ ಸುಮಾರು 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಟ್ತಿದ್ದು, ಸಮುದ್ರ ಸಮೀಪದ ಮನೆಗಳಿಗೆ ಅಲೆಗಳು ಬಡಿಯುತ್ತಿದೆ. ಉಚ್ಚಿಲದ ಕೆಲ ಖಾಸಗಿ ಬೀಸ್ ರೆಸಾರ್ಟ್ ಗಳ ತಡೆಗೋಡೆ ನೀರುಪಾಲಾಗಿದೆ.