ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಚಿನ್ನದ ಕರಡಿಗೆ ನೀಡಿದ್ದು ತಾನೇ ಎಂಬ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಹೇಳಿಕೆಯನ್ನು ಮಠ ತಳ್ಳಿಹಾಕಿದೆ. ಕರಡಿಗೆಯನ್ನು ಹುಲಿಕುಂಟೆ ಸೋಮಣ್ಣ ಎಂಬುವವರು ನೀಡಿದ್ದರು ಎಂದು ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಹೇಳಿಕೆ ನೀಡಿದ ಖೇಣಿ ವಿರುದ್ಧ ತುಮಕೂರಿನಲ್ಲಿ ದೂರು ದಾಖಲಾಗಿದೆ.
ತುಮಕೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ತುಮಕೂರಿನಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿವಾದ ಕುರಿತು ಸ್ಪಷ್ಟನೆ ನೀಡಿರುವ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು, ಅಶೋಕ್ ಖೇಣಿ ಚಿನ್ನದ ಕರಡಿಗೆ ಕೊಟ್ಟಿಲ್ಲ. ಈ ಬಗ್ಗೆ ಯಾವುದೇ ಮಾಹಿತಿನೂ ಇಲ್ಲ, ದಾಖಲೆನೂ ಇಲ್ಲ, ನಮಗ್ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶ್ರೀಗಳ ಚಿನ್ನದ ಕರಡಿಗೆ ಕೊಟ್ಟಿದ್ದಾರು? ಅಸಲಿ ಸತ್ಯ ಬಿಚ್ಚಿಟ್ಟ ಮಠ
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಗೆ ಚಿನ್ನದ ಕರಡಿಗೆ ನೀಡಿದ ವಿಚಾರವಾಗಿ ಸ್ಪಷ್ಟನೆ ನೀಡಿದರು. ಅಶೋಕ್ ಖೇಣಿ ಚಿನ್ನದ ಕರಡಿಗೆ ಕೊಟ್ಟಿಲ್ಲ. ಮಾಹಿತಿನೂ ಇಲ್ಲ, ದಾಖಲೆನೂ ಇಲ್ಲ, ನಮಗ್ಯಾರಿಗೂ ಗೊತ್ತಿಲ್ಲ. ಸ್ಚಾಮೀಜಿಗೆ ಬಹಳ ವರ್ಷಗಳ ಹಿಂದೆ ಹುಲಿಕುಂಟೆ ಸೋಮಣ್ಣ ಎಂಬುವರು ಚಿನ್ನದ ಕರಡಿಗೆ ನೀಡಿದ್ದರು. ಅವರು ಬಂದು ಮೂರ್ನಾಲ್ಕು ತಿಂಗಳು ಬಂದು ಕಾಡಿ ಬೇಡಿದ್ದರು. ಪೂಜ್ಯರು ಅದೆಲ್ಲಾ ಬೇಡ ಅಂತ ಹೇಳುತ್ತಿದ್ದರು, ಅದರ ಬದಲು ಹುಡುಗರಿಗೆ ಎರಡು ರೂಮ್ ಕಟ್ಟಿಸಿಕೊಡಿ ಅಂದಿದ್ದರಂತೆ. ಆದರೂ ಅವರ ಕುಟುಂಬದವರು ಒತ್ತಾಯ ಮಾಡಿದ್ದರು. ನೀವು ಹಾಕಿಕೊಂಡಿರೋದನ್ನ ನಾವು ನೋಡಬೇಕು ಅಂತ ಒತ್ತಾಯ ಮಾಡಿ ಹಾಕಿದ್ದರು. ಕೊನೆ ತನಕ ಸ್ವಾಮೀಜಿ ಅದನ್ನ ಹಾಕಿಕೊಂಡಿದ್ದರು. ಆ ಕರಡಿಗೆ ನಮ್ಮಲ್ಲಿ ಹಾಗೇ ಇದೆ, ಅಷ್ಟು ಬಿಟ್ಟರೆ ಖೇಣಿ ಹೇಳಿದ್ದಂತೆ ಅವರು ಕೊಟ್ಟಿರೊದು ದಾಖಲೆ ಇಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.
ಸತ್ಯಕ್ಕೆ ದೂರವಾದ ಮಾತು, ಬಹಳ ಬೇಸರ ಆಗಿದೆ
ಖೇಣಿ ಅವರ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಆದ್ದರಿಂದಲೇ ಮಠದಿಂದ ಪ್ರತಿಯೊಂದು ಅಂಶಕ್ಕೂ ಸ್ಪಷ್ಟನೆ ನೀಡಿದ್ದೇವೆ. ಖೇಣಿ ಅವರು ಹೇಳಿದೆಲ್ಲಾ ಸತ್ಯಕ್ಕೆ ದೂರವಾದ ಮಾತು, ಆ ಸಂದರ್ಭದಲ್ಲಿ ಬಿಟ್ಟರೆ ಅವರು ಮಠಕ್ಕೆ ಇನ್ಯಾವತ್ತು ಬಂದಿಲ್ಲ. ಅವರು ಕೊಟ್ಟಂತಹ ದಾಖಲೆ ಯಾವುದು ಇಲ್ಲ. ಸುಮ್ಮನೆ ಉತ್ಪ್ರೇಕ್ಷೆಯಾಗಿ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ ಎಂದರು.
ಅಲ್ಲದೇ, ಸ್ವಾಮೀಜಿ ಲಿಂಗೈಕ್ಯರಾದಗ ಆ ಮನುಷ್ಯ ಇಲ್ಲಿಗೆ ಬಂದಿಲ್ಲ. ಇಲ್ಲಿ ಇರಲೇ ಇಲ್ಲ, ಆ ರೀತಿ ಉದ್ಭವ ಆಗೋದಿಕ್ಕೆ ಸಾಧ್ಯನೇ ಇಲ್ಲ. ಯಾವುದೇ ಚಿನ್ನ ನೀಡಲ್ಲ, ಎಲ್ಲಾದಕ್ಕೂ ದಾಖಲೆ ಇಟ್ಟಿದ್ದೇವೆ, ಇನ್ನು ತೆಗೆದು ನೋಡಿಲ್ಲ. ಒಂದು ಕಮಿಟಿ ಮಾಡಿದ್ದೇವೆ, ಏನೇನು ಇತ್ತು ಅಂತ ಪರಿಶೀಲನೆ ಮಾಡಿ ಇಟ್ಟಿದ್ದೇವೆ. ಅದರಲ್ಲಿ ಅವರದ್ದು ಯಾವುದು ಬಂದಿಲ್ಲ. ನಮಗಂತೂ ಯಾವುದು ಗೊತ್ತಿಲ್ಲ, ಅದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಇಲ್ಲದ ವಿಚಾರ ಮಾತನಾಡಿರೋದು ಬಹಳ ಬೇಸರವಾಗಿದೆ. ಮಠದಿಂದ ಪ್ರಕಟಣೆ ನೀಡಿದ್ದೇವೆ. ಅವರು ಏನೇನು ಮಾತನಾಡಿದ್ದಾರೋ ಅದಕ್ಕೆ ಖಂಡಿಕೆವಾರು ಪ್ರತಿಕ್ರಿಯೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನೈಸ್ ಯೋಜನೆ ವಿರೋಧವಿಲ್ಲ, ಆದರೆ!
ಇದೇ ವೇಳೆ ನೈಸ್ ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ ಸ್ವಾಮೀಜಿ, ನಾವು ಡಿಕೆ ಶಿವಕುಮಾರ್ ಅವರು ಸಿಎಂ ಆದ ಬಳಿಕ ಅವರ ನಿವಾಸಕ್ಕೆ ಹೋಗಿದ್ದು ಸತ್ಯ. ಏಕೆಂದರೆ ನಮಗೆ ಬಿಡಿಎದಲ್ಲಿ ಕೆಲಸ ಆಗಬೇಕಿತ್ತು. ಎರಡ್ಮೂರು ವಿಚಾರಗಳಲ್ಲಿ ಅವರನ್ನ ಖುದ್ದಾಗಿ ಭೇಟಿ ಮಾಡಿದ್ದೇವು. ಏಕೆಂದರೆ ಆ ವಿಚಾರಗಳು ಕ್ಯಾಬಿನೆಟ್ ಗೆ ಹೋಗಬೇಕಿತ್ತು. ಹಾಗಾಗಿ ಅವರನ್ನ ಭೇಟಿ ಮಾಡಿದ್ವಿ. ನೈಸ್ ರಸ್ತೆಗೆ ನಮ್ಮ ಆಕ್ಷೇಪ ಇಲ್ಲ. ಹೆಚ್ಚುವರಿಯಾಗಿ ನೈಸ್ ರಸ್ತೆ ಹೆಸರಲ್ಲಿ ಜಮೀನು ತೆಗೆದುಕೊಂಡಿದ್ದಾರೆ. ಉಳಿದ ಜಮೀನು ವಾಪಸ್ ಕೊಡಿ ಅಂತ ರೈತರು ಒತ್ತಾಯ ಮಾಡ್ತಿದ್ದಾರೆ. ನಮ್ಮಜೊತೆಗೆ ಜಮೀನು ಕೊಟ್ಟಂತಹ ರೈತರು ಬಹಳ ಜನರಿದ್ದಾರೆ ಎಂದು ತಿಳಿಸಿದರು.
2001-2002 ರಲ್ಲಿ ಖೇಣಿಯವರು ಮಠಕ್ಕೆ ಬಂದಿದ್ದರು. ಶಿವಕುಮಾರ ಸ್ವಾಮೀಜಿ ಅವರನ್ನು ಯೋಜನೆಗೆ ಭೂಮಿ ನೀಡಲು ಒಪ್ಪಿಸಿದ್ರು. ಅಲ್ಲಿ ಮಠದ್ದು 7ಎಕರೆ 39 ಗುಂಟೆ ಜಮೀನು ಇತ್ತು. ಸೋಂಪುರದಲ್ಲಿ ಮಠಕ್ಕೆ ಭಕ್ತರೊಬ್ಬರು ದಾನ ನೀಡಿದ್ದರು. ಆ ಜಮೀನು ಹಾಗೆ ಇತ್ತು, ಜಮೀನು ರಸ್ತೆಗೆ ಬೇಕಿದೆ ಕೊಡಿ ಅಂತ ಕೇಳಿದ್ದರು. ಪೂಜ್ಯರಿಗೆ ಒಂದು ಭರವಸೆ ಕೊಟ್ಟಿದ್ರು. ಪತ್ರದಲ್ಲಿ ಬರೆದು ಸೈಟ್ ಕೊಡ್ತೀವಿ ಅಂತ ಹೇಳಿದ್ದರು. ಜೊತೆಗೆ ಮಠಕ್ಕೆ ನಿಶ್ಚಿತ ಆದಾಯ ಬರುವಂತೆ ಮಾಡಿಕೊಡ್ತೀನಿ ಅಂತ ಭರವಸೆ ಕೊಟ್ಟಿದ್ದರು. ಅದ್ಯಾವುದು ಕೂಡ ಈಡೇರಿಲ್ಲ. 8 ವರ್ಷದಿಂದ ಅವರನ್ನ ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಅದ್ಯಾವುದು ಆಗಿಲ್ಲ. ಅವರಿಗೆ ಪತ್ರ ಬರೆದಿದ್ದೇವೆ ಅದಕ್ಕೆ ಉತ್ತರ ಇಲ್ಲ. ಈಗ ರೈತರು ಒತ್ತಾಯ ಮಾಡ್ತಿದ್ದಾರೆ. ಮಠದವ್ರೆ ಕೊಟ್ಟವ್ರೆ ನಾವೇನು ಅಂತ ಜಮೀನು ನೀಡಿದ್ವಿ ನೀವು ಬನ್ನಿ ಅಂತ ಒತ್ತಾಯ ಮಾಡಿದ್ದರು, ಸಿಎಂ ಭೇಟಿ ಮಾಡೋಣ ಅಂತ ಒತ್ತಾಯ ಮಾಡಿದ್ದರು. ರಸ್ತೆಗೆ ಬಳಸಿಕೊಂಡಿರೊದನ್ನ ಬಿಟ್ಟು ಉಳಿಕೆ ಜಮೀನು ಅನ್ನು ರೈತರಿಗೆ ವಾಪಸ್ ಕೊಡಿ ಅಂತ ಕೇಳಿದ್ದೇವೆ. ಅದೇನು ತೀರ್ಮಾನ ಮಾಡ್ತಾರೊಗೊತ್ತಿಲ್ಲ, ಅದನ್ನ ಬಿಟ್ಟು ಬೇರೆ ವಿಚಾರವಿಲ್ಲ. ಎರಡು ಎಕರೆ ರಸ್ತೆಗೆ ಬಳಸಿಕೊಂಡಿದ್ದಾರೆ. 6 ಎಕರೆ ಜಮೀನು ಹಾಗೇ ಇದೆ. ನಮ್ಮದು 6 ಎಕರೆ, ರೈತರದ್ದು ಬೇರೆ ಬೇರೆ ಇದೆ. ಸುಪ್ರೀಂ ಕೋರ್ಟ್ ದು ಆದೇಶ ಇದೆಯಂತೆ ಸ್ವಾಧೀನ ಮಾಡಿಕೊಂಡ ಜಮೀನು 25 ವರ್ಷದಲ್ಲಿ ಬಳಸಿಕೊಳ್ಳದೆ ಇದ್ರೆ ವಾಪಸ್ ಕೊಡುವಂತೆ ಆದೇಶ ಇದೆ. ಹಾಗಾಗಿ ಜಮೀನು ವಾಪಸ್ ಕೊಡುವಂತೆ ಕೇಳಿಕೊಂಡಿದ್ದೇವೆ ಎಂದು ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದರು.


