ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಖಾಸಗಿ ಶಾಲೆಯೊಂದು ಶುಲ್ಕ ಪಾವತಿಸದ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಬಿಡದೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದೆ. ಪೋಷಕರು ಕಾಲಾವಕಾಶ ಕೇಳಿದರೂ ಸ್ಪಂದಿಸದ ಶಾಲಾ ಆಡಳಿತ ಮಂಡಳಿಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ಅ.01): ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ವಿರುದ್ಧ ಪೋಷಕರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶುಲ್ಕ ಪಾವತಿಸಲು ತಡವಾದ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಯು ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿತರನ್ನಾಗಿಸಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಏನಿದು ಪ್ರಕರಣ?
ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಮಗು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಇನ್ನೊಂದು ಮಗುವಿಗೆ ಪರೀಕ್ಷೆ ಬರೆಯದಂತೆ ಶಾಲಾ ಆಡಳಿತ ಮಂಡಳಿ ತಡೆಹಿಡಿದಿದೆ. ಶುಲ್ಕ ಪಾವತಿ ಬಾಕಿ ಇದ್ದ ಕಾರಣ, ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಬಿಡದೇ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರ ಮನವಿಗೂ ಸ್ಪಂದಿಸದ ಶಾಲೆ:
ಪೋಷಕರು ಶಾಲೆಯ ಶುಲ್ಕದ ಬಗ್ಗೆ ಇ-ಮೇಲ್ ಮೂಲಕ ಸಂಪರ್ಕಿಸಿ, ಆರ್ಥಿಕ ಮುಗ್ಗಟ್ಟಿನಿಂದಾಗಿ ಸದ್ಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಿಲ್ಲ, ದಯವಿಟ್ಟು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಶಾಲೆ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದೆ ನೇರವಾಗಿ ಮಕ್ಕಳನ್ನು ಪರೀಕ್ಷೆಯಿಂದ ದೂರವಿಟ್ಟಿದೆ.
1 ಲಕ್ಷ ರೂಪಾಯಿ ಫೀಸ್, ಪಾವತಿಗೆ ಪರದಾಟ:
ಒಂದನೇ ತರಗತಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ ಮೊದಲ ಕಂತಾಗಿ 25 ಸಾವಿರ ರೂ. ಪಾವತಿಸಲಾಗಿದೆ. ಎರಡನೇ ಕಂತಿನ 25 ಸಾವಿರ ರೂ. ಪಾವತಿಗೆ ಪೋಷಕರು ಕಾಲಾವಕಾಶ ಕೇಳಿದರೂ ಶಾಲೆ ಒಪ್ಪಿಲ್ಲ.
ಶಾಲಾ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಎಷ್ಟು ಸರಿ?' ಎಂದು ಪೋಷಕರು ಪ್ರಶ್ನಿಸಿದ್ದಾರೆ. ಮಕ್ಕಳ ಮನಸ್ಥಿತಿಯ ಮೇಲೆ ಈ ಘಟನೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಯ ಇಂತಹ ಕಠಿಣ ಕ್ರಮದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


