ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ತುಮಕೂರಿನಲ್ಲಿ ದೂರು ದಾಖಲಾಗಿದೆ. ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್ ಈ ದೂರು ನೀಡಿದ್ದು, ಖೇಣಿ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ತುಮಕೂರು (ಸೆ.30): ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹಾಗೂ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ 'ನೈಸ್' (NICE) ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ತುಮಕೂರಿನಲ್ಲಿ ಪೊಲೀಸ್ ದೂರು ದಾಖಲಾಗಿದೆ.

ವಿಜಯಸೇನೆಯ ರಾಜ್ಯಾಧ್ಯಕ್ಷ ದೀಪಕ್ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ಲಿಖಿತ ದೂರು ನೀಡಿದ್ದು, ಅಶೋಕ್ ಖೇಣಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿದೆ?

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅಶೋಕ್ ಖೇಣಿ, ಡಾ. ಶಿವಕುಮಾರ ಸ್ವಾಮೀಜಿಗಳ ಕುರಿತು ಪ್ರಸ್ತಾಪಿಸಿದ್ದರು. ಈ ವೇಳೆ ಅವರು ಶ್ರೀಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ. 'ಅಶೋಕ್ ಖೇಣಿ ಅವರು ಕೇವಲ ತಮ್ಮ ವೈಯಕ್ತಿಕ ಪ್ರಚಾರಕ್ಕೋಸ್ಕರ ತಪ್ಪು ಮಾಹಿತಿಯನ್ನು ನೀಡಿ, ವಿಶ್ವವಿಖ್ಯಾತ ಶ್ರೀ ಸಿದ್ದಗಂಗಾ ಮಠಕ್ಕೆ ಮತ್ತು ಪರಮಪೂಜ್ಯ ಸ್ವಾಮೀಜಿಗಳಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಅವರ ಈ ಬೇಜವಾಬ್ದಾರಿ ಹೇಳಿಕೆಯಿಂದ ನಾಡಿನಾದ್ಯಂತ ಇರುವ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟಾಗಿದೆ. ಸಾರ್ವಜನಿಕವಾಗಿ ಸುಳ್ಳುಗಳನ್ನು ಹಬ್ಬಿಸುತ್ತಿರುವ ಈ ವ್ಯಕ್ತಿಯ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು' ಎಂದು ದೀಪಕ್ ಅವರು ಎಸ್‌ಪಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ:

ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್, ಅಶೋಕ್ ಖೇಣಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಶೋಕ್ ಖೇಣಿ ಅವರು ಸಂದರ್ಶನದಲ್ಲಿ ಹೇಳಿರುವುದೆಲ್ಲವೂ ಶುದ್ಧ ಸುಳ್ಳು. ಅವರು ಸಿದ್ದಗಂಗಾ ಮಠ ಹಾಗೂ ಶ್ರೀಗಳ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ತಾವು ಆಡಿದ ಮಾತುಗಳಿಗೆ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಿ, ಅವರ ಮನೆಗೆ ಮುತ್ತಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸದ್ಯ ತುಮಕೂರು ಎಸ್‌ಪಿ ಕಚೇರಿಯಲ್ಲಿ ದೂರು ಸ್ವೀಕೃತವಾಗಿದ್ದು, ಪೊಲೀಸರು ಈ ಬಗ್ಗೆ ಯಾವ ರೀತಿಯ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ. ನಾಡಿನ ಆರಾಧ್ಯ ದೈವದಂತಿರುವ ಸಿದ್ದಗಂಗಾ ಶ್ರೀಗಳ ಕುರಿತಾದ ಈ ವಿವಾದ ಇದೀಗ ಭಕ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.