ಶ್ರೀರಂಗಪಟ್ಟಣ(ಏ.24): ಕೊರೋನಾ ಪರೀಕ್ಷೆ ನಡೆಸಲು ಹೋಗಿದ್ದ ಆಶಾ ಕಾರ್ಯಕರ್ತೆಯೊಬ್ಬರನ್ನು ಗ್ರಾಪಂ ಸಿಬ್ಬಂದಿ ಹಾಗೂ ಆತನ ತಂದೆ ಹಿಯಾಳಿಸಿದ ಹಿನ್ನೆಲೆ ಮನನೊಂದ ಆಶಾ ಕಾರ್ಯಕರ್ತೆಯೊಬ್ಬರು ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ಮಾಪ್ತಿಯ ಹುರಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ಜರುಗಿದೆ.

ಆಶಾ ಕಾರ್ಯಕರ್ತೆ ಮೀನಾಕ್ಷಿ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದವರು. ವಿಷ ಸೇವಿಸಿದ್ದ ಈ ಕೊರೋನಾ ವಾರಿಯರ್‌ರನ್ನು ಈಗ ಮೈಸೂರಿನ ನರ್ಸಿಂಗ್‌ ಹೋಂ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರ್ತವ್ಯ ಪ್ರಜ್ಞೆ: ಮದುವೆ ಮುಂದೂಡಿದ ಮಂಡ್ಯ DySP ಪೃಥ್ವಿ

ಘಟನೆಯ ವಿವರ:

ಇತ್ತೀಚೆಗೆ ಮೈಸೂರಿನ ಮಹದೇಶ್ವರ ನರ್ಸಿಂಗ್‌ ಹೋಂನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿತ್ತು. ಆಗ ಹುರಳಿ ಕ್ಯಾತನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಮಹದೇಶ್ವರ ಆಸ್ಪತ್ರೆಗೆ ತೆರಳಿದ್ದರು ಎಂಬ ಮಾಹಿತಿಯನ್ನು ಗ್ರಾಪಂ ಸಿಬ್ಬಂದಿಯೊಬ್ಬರು ಆಶಾ ಕಾರ್ಯಕರ್ತೆ ಮೀನಾಕ್ಷಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ಆಶಾ ಕಾರ್ಯಕರ್ತೆ ಮೀನಾಕ್ಷಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡುವ ಸಲುವಾಗಿ ತನಗೆ ಬಂದ ಮಾಹಿತಿಯನ್ನು ಶಂಕಿತ ವ್ಯಕ್ತಿಯ ಎದುರು ಹೇಳಿದ್ದಾರೆ.

ಗ್ರಾಪಂ ಸಿಬ್ಬಂದಿ ಹೆಸರು ಹೇಳಿದ್ದರಿಂದ ಕುಪಿತಗೊಂಡ ಗ್ರಾಪಂ ಸಿಬ್ಬಂದಿ ಹಾಗೂ ಆತನ ತಂದೆ ಆಶಾ ಕಾರ್ಯಕರ್ತೆಯ ವಿರುದ್ಧ ಹರಿಹಾಯ್ದಿದ್ದಾರೆ. ಆ ವೇಳೆಗೆ ಗ್ರಾಮದಲ್ಲಿ ಸೇರಿದ ಕೆಲವು ಜನ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡು ನಿಂದಿಸಿದ್ದಾರೆ.

ಈ ಘಟನೆಯಿಂದ ಮನನೊಂದ ಆಕೆ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಆಶಾ ಕಾರ್ಯಕರ್ತೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾಸಕ ರವೀಂದ್ರ ಶ್ರೀಕಂಠಯ್ಯ, ಉಪ ವಿಭಾಗಾಧಿಕಾರಿ ಶೈಲಜಾ ಹಾಗೂ ತಹಸೀಲ್ದಾರ್‌ ಎಂ.ವಿ. ರೂಪಾ ಆಸ್ಪತ್ರೆಗೆ ತೆರಳಿ ಆಶಾ ಕಾರ್ಯಕರ್ತೆ ಆರೋಗ್ಯ ವಿಚಾರಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೆ ಹೋಗುವ ಆಶಾ ಕಾರ್ಯಕರ್ತೆರಿಗೆ ರಕ್ಷಣೆ ಇಲ್ಲ. ಹಳ್ಳಿಗಳಲ್ಲಿ ಕೆಲವು ಜನ ಆಶಾ ಕಾರ್ಯಕರ್ತೆಯರು ಬರುವುದನ್ನೇ ಸಹಿಸುವುದಿಲ್ಲ. ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ಕೊರೋನಾ ವಾರಿಯರ್ಸ್‌ ಕೆಲಸ ಮಾಡುತ್ತಿದ್ದರೆ ಕೆಲವರು ನಿಂದಿಸಿ ಬಾಯಿಗೆ ಬಂದಂತೆ ಬೈಯುತ್ತಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.