ಆಸ್ಪತ್ರೆ ನೋಡುತ್ತಿದ್ದಂತೆ ರೋಗಿಗಳಿಗೆ ಕಾಯಿಲೆ ವಾಸಿಯಾಗಬೇಕು. ಸುಮಾರು 23 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ನಿರ್ಮಾಣ ಕೈಗೊಂಡಿರುವುದಾಗಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಪಾವಗಡ : ಆಸ್ಪತ್ರೆ ನೋಡುತ್ತಿದ್ದಂತೆ ರೋಗಿಗಳಿಗೆ ಕಾಯಿಲೆ ವಾಸಿಯಾಗಬೇಕು. ಸುಮಾರು 23 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ನಿರ್ಮಾಣ ಕೈಗೊಂಡಿರುವುದಾಗಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಶನಿವಾರ ಪಟ್ಟಣದ 6ನೇ ವಾರ್ಡ್‌ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ 4 ಕೋಟಿ 89 ಲಕ್ಷ ವೆಚ್ಚದ 100ಕೆಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಅಡುಗೆ, ಇತರೆ ದಾಸ್ತಾನು ಕೊಠಡಿ ಸಿಬ್ಬಂದಿಯ ಹೆಚ್ಚುವರಿ ವಸತಿ ಗೃಹಗಳ ನಿರ್ಮಾಣ ಹಾಗೂ ಹಾಲಿ ಸರ್ಕಾರಿ ಆಸ್ಪತ್ರೆಯ ನವೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಆಸ್ಪತ್ರೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗಬಾರದು, ಹೊಸ ಪೈಪ್‌ಲೈನ್‌ ಅಳವಡಿಸಿ ತ್ವರಿತ ಕಾಮಗಾರಿ ನಿರ್ವಹಣೆಗೆ ನೀರು ಒದಗಿಸುವಂತೆ ಪುರಸಭೆಯ ವಾಟರ್‌ಮ್ಯಾನ್‌ ರಿಯಾಜ್‌ಗೆ ಆದೇಶಿಸಿದರು. ಲೋಕಾರ್ಪಣೆ ಹಿನ್ನಲೆಯಲ್ಲಿ ನಿಯಮಾನುಸಾರ ಇದೇ ಮಾಚ್‌ರ್‍ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಆಸ್ಪತ್ರೆಯ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗೆ ಆದೇಶಿಸಿದರು. ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಸೊಳ್ಳೆ ಹಾಗೂ ಕ್ರಿಮಿ, ಕೀಟಗಳ ಹಾವಳಿ ತಡೆಯಬೇಕು. ಪಟ್ಟಣದ ರೈಜ್‌ಗೇಜ್‌ ಬಡಾವಣೆಯಿಂದ ಹರಿದುಬರುವ ನೀರು ಸರಾಗವಾಗಿ ಹೋಗಬೇಕು. ಈ ಹಿನ್ನಲೆಯಲ್ಲಿ ನೈರ್ಮಲ್ಯ, ಶುಚಿತ್ವಕ್ಕೆ ಆಸಕ್ತಿವಹಿಸಿ, ಕೂಡಲೇ ಒಳಚರಂಡಿ ದುರಸ್ತಿ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಯಾರಾದರೂ ಆಸ್ಪತ್ರೆ ಕಾಂಪೌಂಡು ಒಳಗೆ ಕಸವಿಲೇವಾರಿ ಮಾಡಿದರೆ, ಮೊದಲು ಎಚ್ಚರಿಕೆ ನೀಡಿ ಬಳಿಕ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ವೈದ್ಯ ಡಾ.ಕಿರಣ್‌ಗೆ ಆದೇಶಿಸಿದರು.

ಸರ್ಕಾರಿ ಆಸ್ಪತ್ರೆ ಹಾಗೂ ವಾರ್ಡ್‌ಗಳಲ್ಲಿನ ಸಮಸ್ಯೆ ಕುರಿತು ವೈದ್ಯರು ಮತ್ತು ಪುರಸಭೆ ಸದಸ್ಯರಿಂದ ಮಾಹಿತಿ ಪಡೆದರು. ಇದೇ ವೇಳೆ ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀಗೋವಿಂದರಾಜು, ಉಪಾಧ್ಯಕ್ಷೆ ಶಶಿಕಲಾ ಬಾಲಾಜಿ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕಿರಣ್‌, ಹಿರಿಯ ಮುಖಂಡರಾದ ಸುದೇಶ್‌ಬಾಬು, ಎ.ಶಂಕರರೆಡ್ಡಿ, ಪ್ರಮೋದ್‌ಕುಮಾರ್‌, ಎಂ.ಎಸ್‌.ವಿಶ್ವನಾಥ್‌, ಗುತ್ತಿಗೆದಾರ ಪವನ್‌ ಸಾಗರ್‌, ಪಿ.ಎಚ್‌.ರಾಜೇಶ್‌, ತೆಂಗಿನಕಾಯಿ ರವಿ, ಮೈಲಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಐ.ಜಿ.ನಾಗರಾಜ್‌, ಆರ್‌.ಎ.ಹನುಮಂತರಾಯಪ್ಪ, ಸದಸ್ಯರಾದ ಬಾಲಸುಬ್ರಣ್ಯಂ, ಕೋಳಿಬಾಲಾಜಿ, ಗುಟ್ಟಹಳ್ಳಿ ಅಂಜಪ್ಪ ಕಿರಣ್‌ಕುಮಾರ್‌, ಅವಿನಾಶ್‌ ಟಿಪ್ಪು ಇತರರಿದ್ದರು.

ಪಾವಗಡ ತಾಲೂಕಿನ ಬಡ ರೋಗಿಗಳ ಸುರಕ್ಷತೆಗಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ 17 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಇದರ ಜತೆಗೆ ಆಕ್ಸಿಜನ್‌ ಇತರೆ ದುರಸ್ತಿ ಕಾರ್ಯಕ್ಕೆ 3 ಕೋಟಿ ಬಿಡುಗಡೆ ಸೇರಿದಂತೆ ಆಸ್ಪತ್ರೆಯ ಆವರಣದಲ್ಲಿ ಅಡುಗೆ, ದಾಸ್ತಾನು, ವಸತಿ ಗೃಹ ಹಾಗೂ ಸುಣ್ಣಬಣ್ಣದೊಂದಿಗೆ ಹಾಲಿ ಸರ್ಕಾರಿ ಆಸ್ಪತ್ರೆಯ ನವೀಕರಣಕ್ಕೆ 4.89 ಕೋಟಿ ಬಿಡುಗಡೆಗೊಳಿಸಿ ಗುದ್ದಲಿಪೂಜೆ ನೆರವೇರಿಸಲಾಗಿದೆ.

ವೆಂಕಟರಮಣಪ್ಪ ಶಾಸಕ