ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.16): ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ. ಜನರು ಹೆಚ್ಚೆತ್ತುಕೊಂಡರೆ ಪ್ರಜಾಪ್ರಭುತ್ವದಲ್ಲಿ ಆಗುತ್ತಿರುವ ತಪ್ಪನ್ನು ಸರಿಪಡಿಸಬಹುದು, ಇಲ್ಲದಿದ್ದರೆ ತಪ್ಪು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ. ಜಾಣ ಕುರುಡುತನಕ್ಕೆ ಬಲಿಯಾದರೆ ಏನು ಪ್ರಯೋಜನ ಆಗುವುದಿಲ್ಲ ಎಂದು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ದೇಶದಲ್ಲಿ ಗೋಲ್ಡ್ ಬಾಂಡ್ಸ್ ಗಳು ಇವೆ, ಜನರು ಅದರ ಮೇಲೆ ಹೂಡಿಕೆ ಮಾಡಿದ್ದಾರೆ. ಅದನ್ನು ವಾಪಸ್ ಪಡೆಯುವ ಸಮಯ ಹತ್ತಿರ ಬರುತ್ತಿದೆ. ಇದನ್ನು ಸರ್ಕಾರಕ್ಕೆ ವಾಪಸ್ ಕೊಡಲು ಸಾಧ್ಯವಿದೆಯೇ.? ಕೊಡುವುದಾದರೆ ಇಂದಿನ ಚಿನ್ನದ ಬೆಲೆಯ ಆಧಾರದಲ್ಲಿ ವಾಪಸ್ ಕೊಡಬೇಕು. ಕೋಟ್ಯಂತರ ರೂಪಾಯಿ ಮೌಲ್ಯದ ಗೋಲ್ಡ್ ಬಾಂಡ್ಸ್ ಇವೆ. ಆಮದು ಖಡಿತ ಗೊಳಿಸಬೇಕು ಎನ್ನುವುದೇನೋ ಸರಿ. ಆದರೆ ಚಿನ್ನ ಖರೀದಿ ನಿಲ್ಲಿಸಲು ಸಾಧ್ಯವಿದೆಯೇ. ಜನರು ತಮ್ಮ ಮಕ್ಕಳ ಒಂದೊಂದು ಕಾರ್ಯಕ್ರಮಗಳಲ್ಲಿ ಒಂದು ಗ್ರಾಂ, ಎರಡು ಗ್ರಾಂ ಎಂದು ಚಿನ್ನ ಖರೀದಿಸಿ ಉಳಿಸಿಕೊಳ್ಳುತ್ತಾರೆ.
ಆದರೆ ಹೀಗೆ ಖರೀದಿಸಿ ಉಳಿಸುವುದಕ್ಕೆ ಈಗ ಅವಕಾಶವಿಲ್ಲ. ದೇಶದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ವಿಫಲವಾಗಿದೆ. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಆದರೆ ಪರಿಸ್ಥಿತಿಯನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗದಿದ್ದರೆ ಟೀಕೆ ಮಾಡಲೇಬೇಕಾಗುತ್ತದೆ ಎಂದಿದ್ದಾರೆ. ಆದರೆ ದೇಶದ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರದವರು ಕ್ರಮ ಜರುಗಿಸುತ್ತಿಲ್ಲ. ಪರಿಸ್ಥಿತಿಯನ್ನು ನಿವಾರಿಸುವ ಬದಲು ದಾರಿ ತಪ್ಪಿಸುವ ಮಾತನಾಡುತ್ತಿದ್ದಾರೆ. ಆಡಳಿತದಲ್ಲಿ ಮಾವುದೇ ಪಾರದರ್ಶಕತೆ ಇಲ್ಲ. ಎಲ್ಲವನ್ನು ಮುಚ್ಚಿ ಗೌಪ್ಯವಾಗಿ ಆಡಳಿತ ನಡೆಸಲಾಗುತ್ತಿದೆ.
ಹೀಗಾಗಿ ಜನರು ಪ್ರಶ್ನೆ ಮಾಡಲು ಶುರುಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇದನ್ನು ಕೇಂದ್ರ ಸರ್ಕಾರ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಜನರು ಕೊಡುವ ಶಿಕ್ಷೆಗೆ ಸಿದ್ಧರಾಗಬೇಕು ಎಂದು ಪೊನ್ನಣ್ಣ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ದೇಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಇದರಿಂದ ದೇಶದಲ್ಲಿ ಇನ್ನಷ್ಟು ಆತಂಕಕಾರಿ ಪರಿಸ್ಥಿತಿ ಎದುರಾಗಲಿದ್ದು, ಅದನ್ನು ಬಗೆಹರಿಸುವ ಕೆಲಸ ದೇಶದ ಪ್ರಧಾನಿ ಮತ್ತು ಆರ್ಥಿಕ ಸಚಿವರ ಮೇಲಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಾವಲು ವಾಹನ ಸೇವೆ ಕೈಬಿಟ್ಟ ಪೊನ್ನಣ್ಣ
ಬೆಂಗಾವಲು ವಾಹನವನ್ನು ವಾಪಸ್ ತೆಗೆದುಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಹೇಳಿದ್ದೆ, ಹಿಂತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಹೈವೇ ಪ್ಯಾಟ್ರೋಲಿಂಗ್ ಸೇರಿ ಬೆಂಗಾವಲು ವಾಹನವನ್ನು ಪೊನ್ನಣ್ಣ ಬಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಎಸ್ಕಾರ್ಟ್ ಹಿಂತೆಗೆದುಕೊಳ್ಳುವಂತೆ ನಿನ್ನೆ ಕೊಡಗು ಎಸ್ ಪಿ ಗೆ ಪತ್ರ ಬರೆದಿದ್ದೆ. ದೇಶದ ಇಂದಿನ ಪರಿಸ್ಥಿತಿ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೆ. ಇದೆಲ್ಲವನ್ನೂ ಗಮನಿಸಿ ಬೆಂಗಾವಲು ವಾಹನಗಳಿಗೆ ಕಡಿತಕ್ಕೆ ಹೇಳಿದ್ದೆ, ಹೀಗಾಗಿ ಇಂದಿನಿಂದ ಬೆಂಗಾವಲು ಕಡಿತ ಮಾಡಿದ್ದಾರೆ.
ದೂರದ ಪ್ರಯಾಣಗಳಿಗೆಲ್ಲ ಒಂದು ವಾಹನ ಮಾತ್ರ ಬಳಸುತ್ತಿದ್ದೇನೆ. ಬೆಂಗಾವಲು ವಾಹನ ಹಿಂದಕ್ಕೆ ನೀಡಿರುವುದರಲ್ರಿ ಯಾವುದೇ ರಾಜಕೀಯವಿಲ್ಲ. ದೇಶದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಮ್ಮ ಕೈಲಾದಷ್ಟು ಮಾವು ಕೈಜೋಡಿಸಬೇಕು. ಆದರೆ ಇದಕ್ಕೆಲ್ಲ ಪರಿಹಾರ ಏನು ಎಂದು ಕೇಂದ್ರ ಕಂಡು ಹಿಡಿಯಬೇಕು. ಇಲ್ಲೊಂದು ಪ್ರವಚನ ಮಾಡಿ ಅವರು ಬೇರೊಂದನ್ನು ಮಾಡಬಾರದು ಎಂದು ಮಡಿಕೇರಿಯಲ್ಲಿ ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಹೇಳಿಕೆ ಕೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


