ಬೆಳಗಾವಿ(ಜು.24):  ನಗರದ ಜಿಲ್ಲಾಸ್ಪತ್ರೆ(ಬಿಮ್ಸ್‌) ಎದುರು ನಿಲ್ಲಿಸಿದ್ದ ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಿ ವಾಹ​ನ​ಗ​ಳನ್ನು ಜಖಂಗೊ​ಳಿ​ಸಿ, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು, 14 ಜನ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಜುಲೈ 19ರಂದು ನಗರದ 55 ವರ್ಷದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್‌ ಸೋಂಕು ದೃಢವಾಗಿದ್ದರಿಂದ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಿ ಐಸೋಲೇಶನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದ.

ಬೆಳಗಾವಿ: ಕೊರೋನಾ ಸೋಂಕಿತ ಸಾವು, ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಈ ಸುದ್ದಿ ತಿಳಿದ ರೋಗಿಯ ಕಡೆಯ ಸುಮಾರು 30ಕ್ಕೂ ಹೆಚ್ಚು ಜನ ಇದಕ್ಕೆ ವೈದ್ಯರೇ ಕಾರ​ಣ​ವೆಂದು ಹಲ್ಲೆಗೆ ಯತ್ನಿ​ಸಿ​ದ್ದಾರೆ. ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ​ದ್ದರು. ಕಾರಾಗೃಹದ ವಾಹನ ಸೇರಿ ನಾಲ್ಕೈದು ವಾಹನಗಳಿಗೆ ಕಲ್ಲೆಸೆದು ಗಾಜುಗಳನ್ನು ಜಖಂಗೊಳಿಸಿ ಪರಾ​ರಿ​ಯಾ​ಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ 14 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಆಯುಕ್ತ ಡಾ.ಕೆ.ತ್ಯಾಗರಾಜನ್‌, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ಇನ್ನುಳಿದವರ ಪತ್ತೆಗೆ ಶೋಧ ನಡೆ​ದಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಡಿಸಿಪಿ ಸೀಮಾ ಲಾಟ್ಕರ್‌ ಪ್ರತಿಕ್ರಿಯಿಸಿ, ಆ್ಯಂಬುಲೆನ್ಸ್‌ಗೆ ಬೆಂಕಿ ಇಟ್ಟು ಹಾಗೂ ಕಲ್ಲು ತೂರಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೃತ್ಯದಲ್ಲಿ ತೊಡಗಿದವರ ಪತ್ತೆ ಕಾರ್ಯ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.