ಮಂಗಳೂರು(ಜೂ.10): ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅವಧಿಗಿಂತ ಮೊದಲೇ ಹೊಸ ಅಡಕೆ ಕಿಲೋಗೆ 300 ರು. ತಲುಪಿದೆ. ಬೆಳೆಗಾರರ ಹಿತದೃಷ್ಟಿಯಿಂದ ಅಡಕೆ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದ್ದಾರೆ. ಲಾಕ್‌ಡೌನ್‌ ವೇಳೆ ಕಿಲೋಗೆ 250 ರು. ದರ ನಿಗದಿಪಡಿಸಿ ಬೆಳೆಗಾರರ ನೆರವಿಗೆ ಧಾವಿಸಿದ ಕ್ಯಾಂಪ್ಕೋ, ಹಂತ ಹಂತವಾಗಿ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಮಾಡುತ್ತಿದೆ. ಹೊಸ ಅಡಕೆಗೆ ಆಗಸ್ಟ್‌ ಬಳಿಕ ದರ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಈ ಬಾರಿ ಉತ್ತರ ಭಾರತದಲ್ಲಿ ಅಡಕೆ ಮಾರುಕಟ್ಟೆಗೆ ಬೇಡಿಕೆ ವಿಪರೀತ ಕುದುರಿರುವುದರಿಂದ ಈಗಲೇ ದರ ಏರಿಕೆಯಾಗಿದೆ. ಇದನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ಯಾಂಪ್ಕೋ ಶ್ರಮಿಸಲಿದ್ದು, ಬೆಳೆಗಾರರು ಮಾರುಕಟ್ಟೆಗೆ ಅಡಕೆ ಮಾರಾಟಕ್ಕೆ ಮುಂದಾಗುವುದಕ್ಕೆ ಇದು ಸಕಾಲ ಎಂದು ಅವರು ಅಭಿಪ್ರಾಯಪಟ್ಟರು.

ವಾರದಲ್ಲೇ ದರ ಏರಿಕೆ:

ಲಾಕ್‌ಡೌನ್‌ ವೇಳೆ ನೇಪಾಳ ಮತ್ತು ಬಾಂಗ್ಲಾ ಗಡಿಯನ್ನು ಸಂಪೂರ್ಣ ಮುಚ್ಚಿದ ಕಾರಣ ಈ ಬಾರಿ ಅಡಕೆ ಆಮದು ಸಾಧ್ಯವಾಗಿಲ್ಲ. ಲಾಕ್‌ಡೌನ್‌ ಸಂದರ್ಭ ಉತ್ತರ ಭಾರತದಲ್ಲಿ ಅಡಕೆ ಮಾರಾಟಕ್ಕೆ ಸಾಧ್ಯವಾಗಲಿಲ್ಲ. ಆದರೆ ಅಲ್ಲಿನ ಮನೆಗಳಲ್ಲಿ ಬಿಳಿ ಅಡಕೆ ಬಳಕೆಯಾಗುತ್ತಿತ್ತು.

ಕ್ವಾರಂಟೈನ್‌ನಲ್ಲಿದ್ದಾಕೆಗೆ ಗರ್ಭಪಾತ: ವೈದ್ಯರ ಅಮಾನತಿಗೆ ಶ್ರೀರಾಮಲು ಆದೇಶ

ದ.ಕ. ಜನಪ್ರತಿನಿಧಿಗಳ ಪ್ರಯತ್ನ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಸೂಕ್ತ ಸಮಯದಲ್ಲಿ ಅಡಕೆಯನ್ನು ಉತ್ತರ ಭಾರತಕ್ಕೆ ರವಾನಿಸಲು ಸಾಧ್ಯವಾಯಿತು. ಇದರಿಂದಾಗಿ ಅಡಕೆಗೆ ಅಲ್ಲಿಂದ ಸಾಕಷ್ಟುಪ್ರಮಾಣದಲ್ಲಿ ಬೇಡಿಕೆ ಕುದುರಿತು. ಕ್ಯಾಂಪ್ಕೋ ಕೇಜಿಗೆ 250 ರು. ದರ ನಿಗದಿಪಡಿಸಿದ ಒಂದೇ ವಾರದಲ್ಲಿ 300 ರು.ಗೆ ತಲುಪಿತು. ಇಷ್ಟೊಂದು ಸೀಮಿತ ಅವಧಿಯಲ್ಲಿ ದರ ಏರಿಕೆಯಾಗಿರುವುದು ಇದೇ ಮೊದಲು. ಪ್ರಸಕ್ತ ಹಳತು ಅಡಕೆಗೆ ಕಿಲೋಗೆ 320 ರು. ಇದೆ. ಲಾಕ್‌ಡೌನ್‌ ಸಡಿಲಗೊಂಡ ದಿನಗಳಲ್ಲಿ ಕ್ಯಾಂಪ್ಕೋಗೆ ಮಂಗಳೂರು ಮತ್ತು ಪುತ್ತೂರು ವ್ಯಾಪ್ತಿಯಲ್ಲಿ ಪ್ರತಿದಿನ 2 ಸಾವಿರ ಕ್ವಿಂಟಾಲ್‌ ಅಡಕೆ ಮಾರುಕಟ್ಟೆಗೆ ಬರುತ್ತಿದೆ ಎಂದರು.

ಕ್ಯಾಂಪ್ಕೋ ಮಹಾಪ್ರಬಂಧಕಿ ರೇಷ್ಮಾ ಮಲ್ಯ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು. ಭಾಸ್ಕರ ರೈ ಕಟ್ಟನಿರೂಪಿಸಿದರು.

ಕ್ಯಾಂಪ್ಕೋ ಮೈಲುತುತ್ತು ಮುಕ್ತ ಮಾರುಕಟ್ಟೆಗೆ

ಇದುವರೆಗೆ ಸಬ್ಸಿಡಿ ದರದಲ್ಲಿ ಅಡಕೆ ಬೆಳೆಗಾರರಿಗೆ ಲಭ್ಯವಾಗುತ್ತಿದ್ದ ಕ್ಯಾಂಪ್ಕೋ ಬ್ರಾಂಡ್‌ನ ಮೈಲುತುತ್ತು ಇನ್ನು ಮುಂದೆ ಹೊರಮಾರುಕಟ್ಟೆಯಲ್ಲೂ ಸಿಗಲಿದೆ. 40ರು.ಗಳಷ್ಟುಸಬ್ಸಿಡಿ ದರದಲ್ಲಿ ಕ್ಯಾಂಪ್ಕೋ ಮೈಲುತುತ್ತನ್ನು ನೀಡಲಾಗುತ್ತಿತ್ತು. ಇದು ಅಡಕೆಗೆ ಕೊಳೆರೋಗ ತಡೆಯಲು ಬೋರ್ಡೋ ದ್ರಾವಣ ಸಿಂಪರಣೆಗೆ ನೆರವಾಗುತ್ತಿತ್ತು. ಇದೀಗ ಕ್ಯಾಂಪ್ಕೋ ಬ್ರಾಂಡ್‌ ಮೈಲುತುತ್ತನ್ನು ಹೊರ ಮಾರುಕಟ್ಟೆಗೆ ಮುಕ್ತಗೊಳಿಸಲಾಗಿದೆ. ವೈಜ್ಞಾನಿಕವಾಗಿ ಗುಣಮಟ್ಟಖಾತರಿಪಡಿಸಿಯೇ ಮೈತುತುತ್ತನ್ನು ಬೆಳೆಗಾರರಿಗೆ ಮಾರಾಟ ಮಾಡಲಾಗುತ್ತಿದೆ. ಸಬ್ಸಿಡಿ ದರ ಕಾರಣಕ್ಕೆ ಮೈತುತುತ್ತು ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೋ ಎಂಡಿ ಸುರೇಶ್‌ ಭಂಡಾರಿ ಸ್ಪಷ್ಟಪಡಿಸಿದ್ದರು.

ನಾಲ್ಕು ಚಾಕಲೇಟ್‌ ಉತ್ಪನ್ನ ಚಿಲ್ಲರೆ ಮಾರಾಟ:

ಕ್ಯಾಂಪ್ಕೋ ಹೊರತಂದ ಜನಪ್ರಿಯ ನಾಲ್ಕು ಉತ್ಪನ್ನಗಳು ಇನ್ನು ಮುಂದೆ ರಖಂ ಮಾತ್ರವಲ್ಲ ಚಿಲ್ಲರೆಯಾಗಿಯೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಇದುವರೆಗೆ ಈ ಉತ್ಪನ್ನಗಳು ಗಿಫ್ಟ್‌ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುತ್ತಿತ್ತು. ಸಾಮಾನ್ಯ ಗ್ರಾಹಕರಿಗೂ ಕೈಗೆಟುಕುವಂತಾಗಲು 50 ಗ್ರಾಂಗಳಲ್ಲಿ ಚಿಲ್ಲರೆಯಾಗಿ ಮಾರಾಟವಾಗಲಿದೆ. ಕ್ಯಾಂಪ್ಕೋ ಮಿಲ್ಕ್ ಮಾರ್ನೆಲ್‌, ಡಾರ್ಕ್ ಚಾಕಲೇಟ್‌, ಶುಗರ್‌ ಫ್ರೀ ಡಯೆಟ್‌, ವೈಟ್‌ ಚಾಕಲೇಟ್‌ಗಳು ಚಿಲ್ಲರೆ ಪ್ಯಾಕ್‌ಗಳಲ್ಲಿ ಸಿಗಲಿದೆ ಎಂದು ಸತೀಶ್ಚಂದ್ರ ಹೇಳಿದರು.