ಸಾಗರ (ಅ.12):  ಪಾನ್‌ ಮಸಾಲಾ ಪ್ಯಾಕೆಟ್‌ನಲ್ಲಿ ಡ್ರಗ್ಸ್‌ ಸರಬರಾಜು ಮಾಡಲಾಗುತ್ತಿದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಸುಗ್ರಿವಾಜ್ಞೆ ಮೂಲಕ ಪಾನ್‌ ಮಸಾಲಾ ಬ್ಯಾನ್‌ ಮಾಡಲು ಮುಂದಾಗಿರುವ ಕ್ರಮವನ್ನು ಅಡಕೆ ವರ್ತಕರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಅಡಕೆ ಛೇಂಬ​ರ್‍ಸ್ ಉಪಾಧ್ಯಕ್ಷ ಅಶ್ವಿನಿ ಕುಮಾರ್‌ ತಿಳಿಸಿದರು.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ಕೆಲವು ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಸಂಬಂಧ ವ್ಯಾಪಕ ಚರ್ಚೆ ನಡೆಯುತ್ತಿದೆ. ಡ್ರಗ್ಸ್‌ ಮಾರಾಟ ಮತ್ತು ಬಳಕೆಯನ್ನು ಅಡಕೆ ವರ್ತಕರ ಸಂಘ ವಿರೋಧಿಸುತ್ತದೆ. ಆದರೆ ರಾಜ್ಯ ಸರ್ಕಾರ ಡ್ರಗ್ಸ್‌ ಮಾರಾಟ ಜಾಲವನ್ನು ಭೇದಿಸಿ ತಪ್ಪಿತಸ್ತರಿಗೆ ಶಿಕ್ಷೆ ವಿಧಿಸುವ ಬದಲು ಪಾನ್‌ ಮಸಾಲಾ ಬ್ಯಾನ್‌ ಮಾಡಲು ಹೊರಟಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವಂತಾಗಿದೆ ಎಂದರು.

ಜನರಿಗೆ ಮಾತ್ರ ಅಲ್ಲ, ಅಡಿಕೆಗೂ ವೈರಸ್ ಕಾಟ.. ಬೆಳೆಗಾರರ ಬದುಕು ಹೈರಾಣ! .

ಕೆಲ ವರ್ಷಗಳಿಂದ ಅಡಕೆ ಬೆಳೆ ಒಂದಿಲ್ಲೊಂದು ಸಂಕಷ್ಟಎದುರಿಸುತ್ತಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಊಹಾಪೋಹ ಹಬ್ಬಿಸಲಾಗಿತ್ತು. ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅಡಕೆ ಧಾರಣೆ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಅಡಕೆ ಟಾಸ್ಕ್‌ಫೋರ್ಸ್‌ ರಚಿಸಿದೆ. ಟಾಸ್ಕ್‌ಫೋರ್ಸ್‌ ಅಡಕೆ ಇತರೆ ಉಪಯೋಗ, ಔಷಧೀಯ ಗುಣ ಹಾಗೂ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎನ್ನುವ ಕುರಿತು ಸಂಶೋಧನೆಗೆ ಕ್ರಮ ಕೈಗೊಂಡಿದೆ. ಇಂತಹ ಹೊತ್ತಿನಲ್ಲಿ ಪಾನ್‌ ಮಸಾಲಾ ಬ್ಯಾನ್‌ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ದುರದೃಷ್ಟಕರ ಎಂದರು.

ಈಚೆಗೆ ಮುಖ್ಯಮಂತ್ರಿ ರಾಜ್ಯಪಾಲರ ಜೊತೆ ಚರ್ಚೆ ನಡೆಸುವಾಗ ಸುಗ್ರಿವಾಜ್ಞೆ ಮೂಲಕ ಪಾನ್‌ ಮಸಾಲಾ ಬ್ಯಾನ್‌ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಡಕೆ ನಂಬಿಕೊಂಡು ದೇಶದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಜನರು ಜೀವನ ನಡೆಸುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು, ಕೃಷಿ ಕೂಲಿಕಾರ್ಮಿಕರು, ವರ್ತಕರು, ದಲಾಲರು, ಕೈಗಾರಿಕೋದ್ಯಮಿಗಳು, ಬೀಡಾ ಅಂಗಡಿಯವರು, ಪಾನ್‌ವಾಲಾಗಳು ಅಡಕೆಯನ್ನೇ ನಂಬಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಾನ್‌ ಮಸಾಲಾ ಬ್ಯಾನ್‌ ಮಾಡಲು ಮುಂದಾದರೆ ಅಡಕೆ ಬೆಳೆಗಾರರು ಮತ್ತು ವರ್ತಕರು ಆತ್ಮಹತ್ಯೆ ದಾರಿ ತುಳಿಯುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ತಕ್ಷಣ ಪಾನ್‌ ಮಸಾಲಾ ಬ್ಯಾನ್‌ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಮುಖ್ಯಮಂತ್ರಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಮತ್ತು ಅಡಕೆ ಬೆಳೆಗಾರರ ಪರವಾಗಿ ನಿಲ್ಲಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಚ್‌.ಹಾಲಪ್ಪ, ಅರಗ ಜ್ಞಾನೇಂದ್ರ ಅವರು ಪಾನ್‌ ಮಸಾಲಾ ಬ್ಯಾನ್‌ ಮಾಡಬಾರದು ಎಂದು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಬಸವರಾಜ್‌ ಕೆ., ಪ್ರಮುಖರಾದ ಬಿ.ಎಚ್‌.ಲಿಂಗರಾಜ್‌, ಕೆ.ಎಸ್‌.ವೆಂಕಟೇಶ್‌, ಶಂಕರ್‌ ಅಳ್ವೆಕೋಡು, ಆರೀಫ್‌ ಆಲಿಖಾನ್‌, ಸುರೇಶ್‌, ಅಬ್ದುಲ್‌ ಜಬ್ಬಾರ್‌ ಹಾಜರಿದ್ದರು.