MES Flyover: ಬೆಂಗ್ಳೂರಲ್ಲಿ ಮತ್ತೊಂದು ಫ್ಲೈಓವರ್‌ ಅಪಾಯದಲ್ಲಿ..!

*  ಎಂಇಎಸ್‌ ಮೇಲ್ಸೇತುವೆಯ ಬೇರಿಂಗ್‌ನಲ್ಲಿ ಬಿರುಕು
*  ಹೆಬ್ಬಾಳದಿಂದ ತುಮಕೂರು ರಸ್ತೆಗೆ ಹೋಗುವ ರಿಂಗ್‌ ರಸ್ತೆಯ ಫ್ಲೈಓವರ್‌
*  5 ವರ್ಷ ಹಿಂದಷ್ಟೇ ರೈಲ್ವೆಯಿಂದ ನಿರ್ಮಾಣ
 

Another Flyover in Bengaluru is in Danger grg

ಬೆಂಗಳೂರು(ಫೆ.20):  ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು ರಸ್ತೆ ಮೇಲ್ಸೇತುವೆ(Flyover) ಕಳಪೆ ಕಾಮಗಾರಿ ಪತ್ತೆಯಾದ ಬೆನ್ನಲ್ಲೇ ನಗರದ ಮತ್ತೊಂದು ಮೇಲ್ಸೇತುವೆಯ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ಹೆಬ್ಬಾಳದಿಂದ (ಬಳ್ಳಾರಿ ರಸ್ತೆ) ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯಲ್ಲಿರುವ ಎಂಇಎಸ್‌ ಮೇಲ್ಸೇತುವೆಯ(MES Flyover) ಬೇರಿಂಗ್‌ನಲ್ಲಿ ಬಿರುಕು(Crack) ಕಾಣಿಸಿಕೊಂಡಿದೆ. ಈ ಮೇಲ್ಸೇತುವೆ ನಿರ್ಮಾಣಗೊಂಡು ಐದು ವರ್ಷಗಳಲ್ಲೇ ಬೇರಿಂಗ್‌ ಸವೆದು ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಯೇ ಕಾರಣವಾಗಿದೆ ಎನ್ನಲಾಗಿದೆ.

Bengaluru: ಈಜಿಪುರ ಫ್ಲೈಓವರ್‌ ಗುತ್ತಿಗೆದಾರರ ವಿರುದ್ಧ ಕೇಸ್‌ ದಾಖಲಿಸಿ: ಹೈಕೋರ್ಟ್‌

ತುಮಕೂರು ರಸ್ತೆ ಮೇಲ್ಸೇತುವೆ ಒಂದು ಭಾಗದಲ್ಲಿ ದುರಸ್ತಿ ಕೈಗೊಂಡ ಹಿನ್ನೆಲೆಯಲ್ಲಿ ಹಲವಾರು ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ವಾಹನಗಳು(Vehicles) ಸಂಚರಿಸಲು ಬೆವರು ಸುರಿಸಬೇಕಿತ್ತು. ಜೊತೆಗೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಗುಣಮಟ್ಟದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿ, ನಗರದಲ್ಲಿ ಇರುವ ಎಲ್ಲ ಮೇಲ್ಸೇತುವೆಗಳ ಗುಣಮಟ್ಟ ಪರೀಕ್ಷಿಸುವಂತೆ ಆಗ್ರಹಿಸಿದ್ದರು. ಹೀಗಿರುವಾಗ ಮತ್ತೊಂದು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿ ಇರುವುದು ಸಾರ್ವಜನಿಕರಲ್ಲಿ ಕಳವಳಕ್ಕೆ ಕಾರಣವಾಗಿದೆ.

2021ರಲ್ಲಿ ಬಿರುಕು ಪತ್ತೆ:

2017ರಲ್ಲಿ ರೈಲ್ವೆ ಇಲಾಖೆಯಿಂದ(Department of Railways) ಎಂಇಎಸ್‌ ಮೇಲ್ಸೇತುವೆ ನಿರ್ಮಾಣಗೊಂಡಿದ್ದು 2020ರಲ್ಲಿ ನಿರ್ವಹಣೆಗೆಂದು ಬಿಬಿಎಂಪಿಗೆ(BBMP) ಹಸ್ತಾಂತರಿಸಲಾಗಿತ್ತು. 2021ರಲ್ಲಿ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಾಂತ್ರಿಕ ಸಂಸ್ಥೆಯ ತಜ್ಞರಿಂದ ಗುಣಮಟ್ಟದ ಮೌಲ್ಯ ಮಾಪನ ಮಾಡಿಸಿತ್ತು. ಈ ಸಂದರ್ಭದಲ್ಲಿ ಮೇಲ್ಸೇತುವೆ ಬೇರಿಂಗ್‌ ಸವೆದಿರುವುದು ಮತ್ತು ಕಾಂಕ್ರಿಟ್‌ ಎಕ್ಸ್‌ಪೆನ್ಷನ್‌ ಜೋಡಣೆಯಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು.

ತಜ್ಞರು ಈ ಬಗ್ಗೆ ಬಿಬಿಎಂಪಿಗೆ ವರದಿ ಸಲ್ಲಿಸಿದ್ದು, ಬೇರಿಂಗ್‌ ಮತ್ತು ಕಾಂಕ್ರಿಟ್‌ ಎಕ್ಸ್‌ಪೆನ್ಷನ್‌ ಜೋಡಣೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡದಿದ್ದರೆ ದೊಡ್ಡ ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದೆ ಎಂಬ ವರದಿ ನೀಡಿದ್ದರು. ಗುಣಮಟ್ಟ ಮೌಲ್ಯಮಾಪನದಲ್ಲಿ ಘನ ವಾಹನಗಳ ಓಡಾಟಕ್ಕೆ ಯೋಗ್ಯವಲ್ಲ ಎಂಬ ವಿಚಾರ ವರದಿಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎಂಇಎಸ್‌ ಮೇಲ್ಸೇತುವೆಯನ್ನು ರೈಲ್ವೆ ಇಲಾಖೆಯೇ ನಿರ್ಮಿಸಿದ್ದರಿಂದ ಬೇರಿಂಗ್‌ ಮತ್ತು ಕಾಂಕ್ರಿಟ್‌ ಎಕ್ಸ್‌ಪೆನ್ಷನ್‌ ಜೋಡಣೆ ಬಿರುಕು ಸರಿಪಡಿಸುವಂತೆ ಬಿಬಿಎಂಪಿ ರೈಲ್ವೆ ಇಲಾಖೆಗೆ ಪತ್ರ ಬರೆದಿದೆ.

ಪ್ರಮುಖ ರಸ್ತೆ

ಬಳ್ಳಾರಿ ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯಲ್ಲಿ ನಿರ್ಮಿಸಿರುವ ಎಂಇಎಸ್‌ ಮೇಲ್ಸೇತುವೆಯು ಒಂದು ಪ್ರಮುಖ ಮೇಲ್ಸೇತುವೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮುಖ್ಯವಾಗಿ ಸರಕು ಸಾಗಣಿಕೆ ವಾಹನಗಳು ತುಮಕೂರು ರಸ್ತೆಯಿಂದ ಗೊರಗುಂಟೆಪಾಳ್ಯ ವೃತ್ತದಲ್ಲಿ ಎಡಕ್ಕೆ ತಿರುಗಿ ರಿಂಗ್‌ ರಸ್ತೆ ಮೂಲಕ ಬಳ್ಳಾರಿ ರಸ್ತೆ ಕಡೆಗೆ ಸಂಚರಿಸುತ್ತವೆ. ಹಾಗೆಯೇ ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ಗೊರಗುಂಟೆಪಾಳ್ಯ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ತುಮಕೂರು ರಸ್ತೆ ಇಲ್ಲವೇ ಲಗ್ಗೆರೆ ರಿಂಗ್‌ ರಸ್ತೆ(Ring Road) ಮಾರ್ಗವಾಗಿ ಸುಮನಹಳ್ಳಿ ಮೇಲ್ಸೇತುವೆ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಪಡೆದುಕೊಳ್ಳುತ್ತವೆ. ಆದ್ದರಿಂದ ಎಂಇಎಸ್‌ ಮೇಲ್ಸೇತುವೆ ಪ್ರಮುಖವಾಗಿದೆ.

Bengaluru: ಪೀಣ್ಯ ಫ್ಲೈಓವರ್‌ ಟೆಸ್ಟ್‌ಗೇ 9 ತಿಂಗಳು ಬೇಕು..!

ಎಂಇಎಸ್‌ ಮೇಲ್ಸೇತುವೆ ಇಲ್ಲದಿದ್ದರೆ ಬಳ್ಳಾರಿ ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸಲು ಸ್ಯಾಂಕಿ ರಸ್ತೆಯಿಂದ ಮಲ್ಲೇಶ್ವರ ಮತ್ತು ಯಶವಂತಪುರ ಮಾರ್ಗವಾಗಿ ಬಳಸಿ ಬರಬೇಕಾಗುತ್ತದೆ. ಇಲ್ಲವೇ ಯಲಹಂಕದಿಂದ ಎನ್‌ಇಎಸ್‌, ಯಲಹಂಕ ನ್ಯೂಟೌನ್‌, ಅಟ್ಟೂರು ಲೇಔಟ್‌, ಎಂಎಸ್‌ಪಾಳ್ಯ, ಗಂಗಮ್ಮ ಸರ್ಕಲ್‌ದಿಂದ ಕಮ್ಮಗೊಂಡನಹಳ್ಳಿಯಿಂದ ಜಾಲಹಳ್ಳಿ ಕ್ರಾಸ್‌ಗೆ ಸುತ್ತಿಬಳಸಿ ಸುಮಾರು 18ರಿಂದ 20 ಕಿ.ಮೀ ಕ್ರಮಿಸಬೇಕಾಗುತ್ತದೆ. ಆದರೆ, ಹೆಬ್ಬಾಳದಿಂದ ಗೊರಗುಂಟೆ ಪಾಳ್ಯಕ್ಕೆ ರಿಂಗ್‌ ರಸ್ತೆ ಮೂಲಕ ಕೇವಲ 9ರಿಂದ 10 ಕಿ.ಮೀ ಅಷ್ಟೇ ಇದೆ. ಒಂದು ವೇಳೆ ಮೇಲ್ಸೇತುವೆ ಹಾಳಾಗಿ ಕಾಮಗಾರಿ ಆರಂಭಗೊಂಡರೆ ಸರಕು ಸಾಗಣಿಕೆ ವಾಹನ ಸಂಚಾರ ದುಸ್ತರವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಇಲಾಖೆ ಎಂಇಎಸ್‌ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಬಿಬಿಎಂಪಿಗೆ ಕಳೆದ ಎರಡು ವರ್ಷಗಳ ಹಿಂದೆ ನಿರ್ವಹಣೆಗೆ ನೀಡಿತ್ತು. ಮೇಲ್ಸೇತುವೆಗಳ ಗುಣಮಟ್ಟದ ಮೌಲ್ಯಮಾಪನ ಸಂದರ್ಭದಲ್ಲಿ ಎಂಇಎಸ್‌ ಮೇಲ್ಸೇತುವೆ ಬೇರಿಂಗ್‌ ಬಿರುಕು ಕಂಡು ಬಂದಿತ್ತು. ಅದನ್ನು ರೈಲ್ವೆ ಇಲಾಖೆ ಗಮನಕ್ಕೆ ಪತ್ರದ ಮೂಲಕ ಬಿಬಿಎಂಪಿ ತಂದಿದ್ದು, ಸರಿಪಡಿಸುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ ಅಂತ ಬಿಬಿಎಂಪಿ ಮೂಲಸೌಕರ್ಯ ಮತ್ತು ರಸ್ತೆ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios