Asianet Suvarna News Asianet Suvarna News

Chikkamagaluru: ಕಿಲ್ಲರ್ ಒಂಟಿ ಸಲಗ ಆಪರೇಷನ್ ವೇಳೆ ಮತ್ತೊಂದು ಕಾಡಾನೆ ಸೆರೆ

ಜಿಲ್ಲೆಯ ಸಾರಗೋಡು ಸಮೀಪ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.ನಿನ್ನೆ(ಬುಧವಾರ) ಮಧ್ಯಾಹ್ನ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲಾಗಿತ್ತು. 
 

Another Elephant Caught During The Wild Elephant Operation At Chikkamagaluru gvd
Author
First Published Nov 16, 2023, 11:26 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ನ.16): ಜಿಲ್ಲೆಯ ಸಾರಗೋಡು ಸಮೀಪ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.ನಿನ್ನೆ(ಬುಧವಾರ) ಮಧ್ಯಾಹ್ನ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲಾಗಿತ್ತು. ಆನೆ ಸುಮಾರು 8 ಕಿಲೋ ಮೀಟರ್ ನಷ್ಟು ದೂರ ಸಾಗಿ ಸಾರಗೋಡು ಸಮೀಪ ಅರಣ್ಯದಲ್ಲಿ ಬಿದ್ದಿತ್ತು ಎನ್ನಲಾಗಿದೆ.ನಂತರ ಸಂಜೆ ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಆನೆಯನ್ನು ತಡರಾತ್ರಿ ಲಾರಿಗೆ ತುಂಬಿಸಿ ಒಂದು ದಿನ ವಿಶ್ರಾಂತಿ  ಬಳಿಕ ಮತ್ತೆ ಭದ್ರ ಅಭಯಾರಣ್ಯಕ್ಕೆ ಬಿಡುವ ಚಿಂತನೆಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ್ದಾರೆ.

ಸೆರೆಯಾಗಿರುವ ಆನೆಯಿಂದ ರೈತರಿಗೆ ಉಪಟಳ: ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ನವೆಂಬರ್ 8 ರಂದು ಮಹಿಳೆಯನ್ನು ಕೊಂದ ದಿನವೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದರು. ಅವರ ಸೂಚನೆಯ ಮೇರೆಗೆ ಈ ಆನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರ ಆದೇಶ ಮಾಡಿತ್ತು. ಈ ಆನೆ ಮಲೆನಾಡು ಭಾಗದಲ್ಲಿ ಹಲವು ಜೀವಹಾನಿಗೆ ಕಾರಣವಾಗಿತ್ತು. ಅದರ ಸೆರೆಗೆ ಮತ್ತು ಆಲ್ದೂರು ಸುತ್ತಮುತ್ತ ಸಂಚರಿಸುತ್ತಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟಲು ಒಟ್ಟು 9 ಸಾಕಾನೆಗಳನ್ನು ಕರೆತರಲಾಗಿತ್ತು. 

ಮಲೆನಾಡಿನಲ್ಲಿ ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ: ಸೆರೆ ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ!

ಒಂಟಿ ಸಲಗದ ಪತ್ತೆಗೆ ಸತತ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ನಿಗದಿತ ಒಂಟಿ ಸಲಗ ಕಾರ್ಯಾಚರಣೆ ವೇಳೆ ಪತ್ತೆಯಾಗಿರಲಿಲ್ಲ. ಪ್ರಾಣಹಾನಿ ಉಂಟುಮಾಡುತ್ತಿದ್ದ ಒಂಟಿಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದು ಕಾಡಾನೆಯನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಆನೆಯೂ ಸಹ ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಉಪಟಳ ನೀಡುತ್ತಿತ್ತು ಎನ್ನಲಾಗಿದೆ.

ಪ್ರಾಣಹಾನಿ ಮಾಡಿದ ಆನೆಯಲ್ಲ ಸ್ಥಳೀಯರ ಆರೋಪ: ಈಗ ಸೆರೆಯಾಗಿರುವ ಆನೆ ಜನರನ್ನು ಸಾಯಿಸಿರುವ ಆನೆಯಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮೊನ್ನೆ ಆಲ್ದೂರು ಸಮೀಪ ಮಹಿಳೆಯನ್ನು ಸಾಯಿಸಿದ್ದ ಆನೆಯ ಬೆನ್ನಿನ ಭಾಗದಲ್ಲಿ ದಪ್ಪದ ಗಂಟು ಇತ್ತು. ಅದರ ದಂತಗಳು ಚಿಕ್ಕದಾಗಿದ್ದವು, ಈಗ ಹಿಡಿದಿರುವ ಆನೆಯ ದಂತಗಳು ತುಂಬಾ ಉದ್ದವಾಗಿವೆ. ಹಾಗಾಗಿ ಈಗ ಹಿಡಿದಿರುವುದು ಮನುಷ್ಯರನ್ನು ಕೊಂದಿರುವ ಒಂಟಿಸಲಗವಲ್ಲ ಎಂದು ಹೇಳುತ್ತಿದ್ದಾರೆ.

ಕಾರ್ಯಾಚರಣೆ ಮುಂದುವರಿಯುತ್ತದೆ ಅರಣ್ಯ ಇಲಾಖೆ ಸ್ಪಷ್ಟನೆ: ಒಂಟಿ ಸಲಗವನ್ನು ಸೆರೆ ಹಿಡಿಯಲು ಒಟ್ಟು 9 ಸಾಕಾನೆಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದವು. ಸತತ ಐದು ದಿನಗಳಿಂದ ಕಾಡಾನೆ ಸೆರೆಗೆ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಮನುಷ್ಯರನ್ನು ಸಾಯಿಸಿದ್ದ ಒಂಟಿಸಲಗದ ಸುಳಿವು ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ರೈತರ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿಸಲಗವನ್ನು ಸೆರೆ ಹಿಡಿಯಲಾಗಿದೆ.  ಒಂದು ದಿನದ ವಿಶ್ರಾಂತಿ ನಂತರ ಮತ್ತಾವರ ಭಾಗದಲ್ಲಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟುವ ಮತ್ತು ಮನುಷ್ಯರ ಸಾವಿಗೆ ಕಾರಣವಾಗಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂಟಿಸಲಗದ ಸುಳಿವು ಸಿಕ್ಕರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.

ಊರೊಳಗೆ ಬಂದ ಕಾಡಾನೆ ಹಿಂಡು: ಅತ್ತ ಮೂಡಿಗೆರೆಯಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿದ್ರೆ ಇತ್ತ ಚಿಕ್ಕಮಗಳೂರಿನ ನಗರದ ಹೊರವಲಯದಲ್ಲಿ ಆನೆಗಳ ಹಿಂಡು‌ ಪ್ರತ್ಯಕ್ಷವಾಗಿದೆ.ನಗರದ ಹೊರವಲಯವಾದ ಮತ್ತಾವರ, ನಲ್ಲೂರು, ಇಂದಾವರದಲ್ಲಿ‌ಮಿತಿ ಮೀರಿದ ಕಾಡಾನೆ ಹಾವಳಿಯಿಂದ‌ ಜನರು‌‌ ತತ್ತರಿಸಿ ಹೋಗುತ್ತಿದ್ದಾರೆ.ನಲ್ಲೂರು ಗ್ರಾಮದಳಗೆ  ಕಾಡಾನೆ ಹಿಂಡು ಕಾಣಿಸಿಕೊಂಡಿರುವ ಪರಿಣಾಮ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಗರದಂಚಿನ ನಲ್ಲೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು  ಕಬ್ಬಿನ ಗದ್ದೆಯನ್ನು ನಾಶಪಡಿಸುವೆ. 

ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ: ಮೂರು ಆನೆಗಳು ಭಾಗಿ!

ಕಳೆದೊಂದು ತಿಂಗಳಿಂದ ಚಿಕ್ಕಮಗಳೂರು ನಗರದ ಅಂಚಿನಲ್ಲೇ  ಕಾಡಾನೆ ಹಿಂಡು ಇದ್ದು ರೈತರು‌ ಬೆಳೆದಿರುವ ಬೆಳೆಗಳನ್ನು  ನಾಶಪಡಿಸುತ್ತಿವೆ. ನಾಲ್ಕರಿಂದ ಐದು ಆನೆಗಳಿದ್ದು ಅದರಲ್ಲಿ ಮರಿಆನೆ ಇರುವುದರಿಂದ‌ ಗೆದ್ದ ,ತೋಟಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಸದ್ಯ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವ ಕಾಡಾನೆ ಓಡಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು,  ಪೊಲೀಸರು ಮೊಕ್ಕಂ ಹಾಕಿದ್ದಾರೆ.

Follow Us:
Download App:
  • android
  • ios