ಗಜೇಂದ್ರಗಡ: ಗೋಡೌನ್ ಮೇಲೆ ದಾಳಿ, ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿ ವಶ
ಅನ್ನಭಾಗ್ಯದ ಅಕ್ಕಿಯ ದಾಸ್ತಾನು ಹಾಗೂ ಸಾಗಾಟ ಮಾಡುವವರ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.
ಗಜೇಂದ್ರಗಡ(ಆ.27): ಪಟ್ಟಣದ ಹೊರವಲಯದ ಗೌಡಗೇರಿ ಗ್ರಾಮದ ಬಳಿಯ ಗೋಡೌನ್‌ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಾಲೂಕು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅನ್ನಭಾಗ್ಯದ ಅಕ್ಕಿಯನ್ನು ಪಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಬಡವರ ಹಸಿವು ನೀಗಿಸಲು ಸರ್ಕಾರ ಪಡಿತರ ವ್ಯವಸ್ಥೆ ಮೂಲಕ ವಿತರಿಸುತ್ತಿರುವ ಅನ್ನ ಭಾಗ್ಯದ ಅಕ್ಕಿಯನ್ನು ಕೆಲವರು ಮಾರಾಟ ಮಾಡುತ್ತಾರೆ ಎಂಬ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ಎಂಬಂತೆ ಗಜೇಂದ್ರಗಡ ಪಟ್ಟಣ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೆಲವರು ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಿ ಪಟ್ಟಣದಲ್ಲಿನ ಕೆಲವರಿಗೆ ಅಕ್ಕಿಯನ್ನು ಮಾರುತ್ತಾರೆ ಎಂಬ ದೂರುಗಳಿವೆ. ಹೀಗಾಗಿ ಅನ್ನಭಾಗ್ಯದ ಅಕ್ಕಿಯ ದಾಸ್ತಾನು ಹಾಗೂ ಸಾಗಾಟ ಮಾಡುವವರ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.
ಶರ್ಟ್ ಬಿಚ್ಚಿ ಚಿಕಿತ್ಸೆ ನೀಡುವ ವೈದ್ಯ! ಡಾಕ್ಟರ್ ವರ್ತನೆಗೆ ರೋಗಿಗಳು ಹೈರಾಣು!
ಪಟ್ಟಣದ ಹೊರ ವಲಯದ ಗೌಡಗೇರಿ ಗ್ರಾಮದ ಬಳಿಯ ಗೋಡೌನ್‌ನಲ್ಲಿ ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಸೈಬರ್ ಆರ್ಥಿಕ ಮತ್ತು ದ್ರವ್ಯ ಅಪರಾಧ (ಸಿಇಎನ್) ಪೊಲೀಸ್ ಠಾಣೆಯ ಮಾಹಿತಿ ಮೇರೆಗೆ ತಾಲೂಕು ಆಹಾರ ನಿರೀಕ್ಷಕರು ದಾಳಿ ನಡೆಸಿದರು. ಈ ವೇಳೆ ಗೋಡೌನ್ ಬಳಿಯಿದ್ದ ಓರ್ವ ವ್ಯಕ್ತಿಯನ್ನು ವಿಚಾರಿಸಿದಾಗ ಗೋಡೌನ್‌ನಲ್ಲಿ ಇರುವ ಅಕ್ಕಿಗೆ ಜಿಎಸ್‌ಟಿ ಬಿಲ್‌ನ್ನು ನೀಡಿದ್ದು, ಪಟ್ಟಣದಿಂದ ಗಂಗಾವತಿಗೆ ಅಕ್ಕಿಯನ್ನು ರವಾನಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದರಿಂದ ಅಧಿಕಾರಿಗಳು ಗೋಡೌನ್ ಕೀಲಿ ತೆಗೆಯಿರಿ ಎಂದರು. ಆಗ ಸ್ಥಳದಲ್ಲಿದ್ದ ವ್ಯಕ್ತಿಯು ನನ್ನ ಬಳಿ ಕೀಲಿ ಇಲ್ಲ, ತರಿಸುತ್ತೇನೆ ಎಂದು ೨ ತಾಸುಗಳ ಕಾಲ ಕಾಯಿಸಿದ್ದಾನೆ. ಬಳಿಕ ಅಂತಿಮವಾಗಿ ಗೋಡೌನ್ ಕೀಲಿ ಒಡೆದು ಗೋಡೌನ್‌ನ್ನು ಅಧಿಕಾರಿಗಳು ಪ್ರವೇಶಿಸಿ ವ್ಯಕ್ತಿ ನೀಡಿದ ಬಿಲ್ ಹಾಗೂ ಗೋಡೌನ್‌ನಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದಾಗ ಅಕ್ಕಿಯು ಮೇಲ್ನೋಟಕ್ಕೆ ಅನ್ನಭಾಗ್ಯ ಅಕ್ಕಿಯಂದು ಕಾಣುತ್ತಿದೆ. ಹೀಗಾಗಿ ಬಿಲ್‌ನಲ್ಲಿರುವ ಅಕ್ಕಿ ಪ್ರಮಾಣ ಮತ್ತು ಗೋಡೌನ್‌ನಲ್ಲಿ ಸಂಗ್ರಹವಿರುವ ಅಕ್ಕಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹೇಳಿದರು.
ಜಿಲ್ಲಾ ಆರ್ಥಿಕ ಮತ್ತು ದ್ರವ್ಯ ಅಪರಾಧ (ಸಿಇಎನ್) ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಗೌಡಿ, ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ಸೇರಿ ಆಹಾರ ಇಲಾಖೆ, ಸಿಇಎನ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರು.