ರೋಣ: ನೀರಿಗಾಗಿ ಜಾನುವಾರುಗಳ ಪಾಡು ಶೋಚನೀಯ

ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಹಳ್ಳಹಿಡಿದ ನೀರಿನ ತೊಟ್ಟಿ ನಿರ್ಮಾಣ ಯೋಜನೆ| ಕೆಲವೆಡೆ ನೀರಿನ ತೊಟ್ಟಿ ಇದ್ದರೂ ಜಾಲಿ ಕಂಟಿಗಳ ಆಗರ| ಗದಗ ಜಿಲ್ಲೆಯ ರೋಣ ತಾಲೂಕಿನ 24 ಗ್ರಾಮಗಳ ಪೈಕಿ ಒಟ್ಟು 37000 ಎಮ್ಮೆ, 26000 ಆಕಳು, 12000 ಕುರಿ, 65000 ಆಡು(ಮೇಕೆ) ಸೇರಿ ಒಟ್ಟು 2 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ| 

Animals Faces Water Problems in Gadag Due to Summer grg

ಪಿ.ಎಸ್‌. ಪಾಟೀಲ

ರೋಣ(ಏ.03):  ಯಾಕಾದರೂ ಬೇಸಿಗೆ ಬರುತ್ತೆ, ಒಂದೆಡೆ ಬಿಸಿಲಿನ ಪ್ರಖರತೆ. ಮತ್ತೊಂದಡೆ ಜಾನುವಾರುಗಳಿಗೆ ನೀರಿನ ಸಮಸ್ಯೆ. ತಿನ್ನಲು ಹುಲ್ಲು, ಮೇವು ಸಿಗುವುದಿರಲಿ, ಕುಡಿವ ನೀರಿಗೂ ಪರಿತಪಿಸುವ, ಎಲ್ಲೆಂದರಲ್ಲಿ ಅಲೆಯುವ ಪರಿಸ್ಥಿತಿ ಬಂದೊದಗಲಿದೆ ಎಂದು ಚಿಂತೆಗೀಡಾಗಿದ್ದಾರೆ ತಾಲೂಕಿನ ಕುರಿಗಾಹಿಗಳು ಮತ್ತು ಜಾನುವಾರುಗಳ ಮಾಲೀಕರು.

ಹೌದು, ಆಹಾರ ಅರಸಿ ಕಾಡು, ಮೇಡು ಸುತ್ತುವ ಆಡು, ಕುರಿ, ಮೇಕೆಗಳ ಪಾಡು ನೀರು ಸಿಗದೇ ಶೋಚನೀಯ ಸ್ಥಿತಿ ಎದುರಿಸುವಂತಾಗಿದೆ. ಪ್ರತಿಯೊಂದು ಜೀವಿಗೂ ಆಹಾರಕ್ಕಿಂತ ನೀರು ಅತೀ ಮುಖ್ಯ. ಮನುಷ್ಯ ತನಗೆ ನೀರು ಬೇಕಾದಲ್ಲಿ ಎಲ್ಲೆಂದರಲ್ಲಿ ಸುತ್ತಾಡಿ ಪಡೆಯುತ್ತಾನೆ, ಯಾರನ್ನಾದರೂ ಕೇಳುತ್ತಾನೆ. ಇಲ್ಲವಾದಲ್ಲಿ ಹಣ ಕೊಟ್ಟು ನೀರು ಪಡೆಯುತ್ತಾನೆ. ಆದರೆ ಮೂಕ ಪ್ರಾಣಿ, ಪಕ್ಷಿಗಳು ನೀರಿನ ದಾಹ ನೀಗಿಸಿಕೊಳ್ಳಲು ಯಾರಲ್ಲಿ ಮೊರೆ ಇಡಬೇಕು? ಎಲ್ಲಿಗೆ ಹೋಗಬೇಕು, ಏನು ಮಾಡಬೇಕು? ಎಂಬೆಲ್ಲ ಪ್ರಶ್ನೆಗಳು ಕಾಡುತ್ತದೆ.

ತೊಟ್ಟಿಗಳಿಗೆ ಪೂರೈಕೆಯಾಗ್ತಿಲ್ಲ ನೀರು

ಬೇಸಿಗೆಯಲ್ಲಿ ಮೇವು ಹುಡುಕಿಕೊಂಡು ಮೇಯಲು ತೆರಳಿದ ಜಾನುವಾರುಗಳ ನೀರಿನ ದಾಹ ನೀಗಿಸಲೆಂದು ಸರ್ಕಾರ ಜಿಪಂ ಮೂಲಕ ನೀರಿನ ತೊಟ್ಟಿನಿರ್ಮಾಣ ಯೋಜನೆ ಅನುಷ್ಠಾನಗೊಳಿಸಿದ್ದು, ಬೇಸಿಗೆ ಪೂರ್ವದಲ್ಲಿಯೇ ನಿರ್ಮಾಣಗೊಳ್ಳಬೇಕಿದ್ದ ನೀರಿನ ತೊಟ್ಟಿಗಳು, ಗ್ರಾಪಂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿದ್ದು, ಇದರಿಂದ ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ. ಕೆಲ ಗ್ರಾಪಂ ಕಾಟಾಚಾರಕ್ಕೆ ಎಂಬಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದು, ಆದರೆ ನೀರು ಮಾತ್ರ ತುಂಬಿಸುತ್ತಿಲ್ಲ. ಇದರಿಂದ ತೊಟ್ಟಿಗಳು ಜಾಲಿಕಂಟಿಗಳ ಆಗರವಾಗಿವೆ.

ರೋಣ: ಬಿಎಸ್‌ಎಫ್‌ ಸೇರಿದ ಕವಿತಾ, ಸೇನೆಗೆ ಆಯ್ಕೆಯಾದ ಗದಗ ಜಿಲ್ಲೆಯ ಪ್ರಥಮ ಯುವತಿ..!

2 ಲಕ್ಷಕ್ಕೂ ಹೆಚ್ಚು ಜಾನುವಾರು

ತಾಲೂಕಿನ 24 ಗ್ರಾಮಗಳ ಪೈಕಿ ಒಟ್ಟು 37000 ಎಮ್ಮೆ, 26000 ಆಕಳು, 12000 ಕುರಿ, 65000 ಆಡು(ಮೇಕೆ) ಸೇರಿ ಒಟ್ಟು 2 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ಇವುಗಳು ಮನೆಯಲ್ಲಿ ಇದ್ದಾಗ ಮಾಲೀಕರು ತಾವು ತಮಗೆ ಸಂಗ್ರಹಿಸಿಟ್ಟನೀರಿನಲ್ಲಿ ಕುಡಿಸುತ್ತಾರೆ. ಆದರೆ ಇವು ಮೇಯಲು ಹೊಲಗಳಿಗೆ ತೆರಳಿದಾಗ ನೀರಿನ ಸಮಸ್ಯೆ ಎದುರಾಗುವುದು. ತನಗೆ ನೀರು ಬೇಕಿದೆ ಎಂದು ಹೇಳಲು ಬಾರದ ಮೂಖ ಪ್ರಾಣಿಗಳು, ತನ್ನ ಮಾಲೀಕ ತನ್ನನ್ನು ಮನೆಗೆ ಕರೆದುಕೊಂಡು ಬರುವವರೆಗೂ ಯಾತನೆ ಪಡುತ್ತಿವೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀರಿನ ತೊಟ್ಟಿ ನಿರ್ಮಿಸಲು ಅವಕಾಶವಿದೆ. ಬೇಸಿಗೆ ಪೂರ್ವದಲ್ಲಿಯೇ ನೀರಿನ ತೊಟ್ಟಿ ನಿರ್ಮಾಣವಾಗಬೇಕು. ಈ ಕುರಿತು ಸಾರ್ವಜನಿಕರು, ಆಯಾ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಕೇಳಿದಲ್ಲಿ, ಕೆಲ ಗ್ರಾಪಂ ಅಧಿಕಾರಿಗಳಿಗೆ ಈ ಕುರಿತು ಮಾಹಿತಿಯೇ ಇಲ್ಲ. ಇನ್ನು ಕೆಲ ಪಿಡಿಒಗಳಿಗೆ ಇದರ ಕುರಿತು ಮಾಹಿತಿ ಇದ್ದರೂ ಇಚ್ಛಾಸಕ್ತಿ ತೋರಿಸುತ್ತಿಲ್ಲ.

'ಸಿದ್ದು ವ್ಯಕ್ತಿತ್ವ ಹೇಗಿದೆ ಅಂತ ನೀವೇ ತೂಕಮಾಡಿ, ಅವರೆಂತ ನಾಯಕ ಅನ್ನೋದು ನಿಮಗೇ ಗೊತ್ತಾಗುತ್ತೆ'

ತಾಂತ್ರಿಕ ಸಮಸ್ಯೆಯೂ ಇದೆ

ಊರಾಚೆ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳ ಬಳಿ ತಾತ್ಕಾಲಿಕ ನೀರಿನ ತೊಟ್ಟಿನಿರ್ಮಿಸಲು ಗ್ರಾಪಂ ಮುಂದಾದಲ್ಲಿ ನೀರು ಪೂರೈಕೆ ಸಮಸ್ಯೆ ಎದುರಾಗಲಿದೆ. ನೀರಿನ ತೊಟ್ಟಿನಿರ್ಮಾಣಕ್ಕೆ ನರೇಗಾದಲ್ಲಿ ಅನುದಾನವಿದೆ. ಆದರೆ ತೊಟ್ಟಿಇರುವಲ್ಲಿಗೆ ನೀರು ಪೂರೈಸಲು ಪೈಪ್‌ಲೈನ್‌ನಿರ್ಮಾಣಕ್ಕೆ ಅವಕಾಶ ಇಲ್ಲದಿರುವ ತಾಂತ್ರಿಕ ಸಮಸ್ಯೆಯಿದೆ. ಇದೇ ನೆಪ ಮುಂದಿಟ್ಟುಕೊಂಡು ಬಹುತೇಕ ಗ್ರಾಪಂ ಅಧಿಕಾರಿಗಳು ನೀರಿನ ತೊಟ್ಟಿನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂಬುದು ವಿಪರ್ಯಾಸ ಸಂಗತಿಯಾಗಿದೆ.

ಅಲ್ಲಲ್ಲಿ ಜನತೆಗೆ ನೀರಿನ ಸಮಸ್ಯೆ

ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ದಿನದ 24 ತಾಸು ಬಹು ಗ್ರಾಮ ಕುಡಿವ ನೀರಿನ ಯೋಜನೆ (ಡಿಬಿಒಟಿ) ಮೂಲಕ ಜನತೆಗೆ ಕುಡಿವ ನೀರು ಪೂರೈಸಲಾಗುತ್ತಿದ್ದು, ಆದರೆ ಸವಡಿ, ಶಾಂತಗೇರಿ ಸೇರಿದಂತೆ ಕೆಲ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ. ರೋಣ ಪಟ್ಟಣದ ಶಿವಾನಂದ ನಗರ, ಗಾಂಧಿನಗರ, ಶಿವಪೇಟಿ ಬಡಾವಣೆಯಲ್ಲಿ 4 ದಿನ ಬದಲಿಗೆ 8 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನಿಗದಿತ ಸಮಯಕ್ಕೆ ನೀರು ಪೂರೈಸುವಂತೆ ಪುರಸಭೆಗೆ ಜನತೆ ಆಗ್ರಹವಾಗಿದೆ.

ಬ್ಯಾಸಿಗೆ ಬಂತದ್ರ ಆಡು, ಕುರಿ, ಮೇಕೆಗೆ ನೀರು ಕುಡಿಸೋದೆ ಒಂದು ದೊಡ್ಡ ಚಿಂತೆ ಆಗೆತ್ರಿ. ಕೆರೆ, ಹಳ್ಳ, ಕೊಳ್ಳದಾಗ ಇರೋ ನೀರು ಕಡಿಮೆಯಾಗಾಕತ್ತಾವ್ರು. ಈಗ ಹಿಂಗ್‌ಆದ್ರೆ, ಬರು ಬರುತ್ತಾ ಇನ್ನು ಹೆಂಗ್‌ಆಗಬಹುದ್ರಿ. ನೆತ್ತಿ ಸುಡೊ ಬಿಸಿಲಾಗ ಎಲ್ಲೆಂದರಲ್ಲಿ ನೀರು ಹುಡಕಿ ಆಡು, ಕುರಿ ,ಮೇಕೆಗೆ ಕುಡಿಸಬೇಕ್ರಿ. ಅಲ್ಲಲ್ಲಿ ಊರು ಹತ್ರ ಪಂಚಾಯತಿಯವರು ನೀರಿನ ತೊಟ್ಟಿಕಟ್ಟಿಸಿದ್ರ ಬಾಳ್‌ಚೊಲೋ ಆಗುತ್ರಿ ಅಂತ ರೋಣ ತಾಲೂಕಿನ ಕುರಿಗಾಹಿಗಳುಬೀರಪ್ಪ ಕುರಿ, ಹನಮಂತಪ್ಪ ನಿಪ್ಪಾನಿ, ಕಲ್ಲಪ್ಪ ದ್ಯಾಮುಣಸಿ, ಗಾಳೆಪ್ಪ ದೊಡ್ಡಮನಿ, ಮಕ್ತುಂಸಾಬ ಪಿಂಜಾರ ಹೇಳಿದ್ದಾರೆ. 

ಬೇಸಿಗೆಯಲ್ಲಿ ಆಡು, ಕುರಿ, ಎತ್ತು, ಎಮ್ಮೆ, ಮೇಕೆ ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯವಿದ್ದಲ್ಲಿ ನೀರಿನ ತೊಟ್ಟಿಗಳ ನಿರ್ಮಿಸಲು ನರೇಗಾ ಯೋಜನೆಯಡಿ ಅವಕಾಶವಿದೆ. ಈ ಕುರಿತು ಬೇಸಿಗೆ ಪೂರ್ವದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಕೂಡಲೇ ಪಿಡಿಒಗಳನ್ನು ಸಂಪರ್ಕಿಸಿ ಜಾನುವಾರುಗಳಿಗೆ ಅನುಕೂಲವಾಗುವಲ್ಲಿ, ನೀರಿನ ಲಭ್ಯತೆ ಇದ್ದಲ್ಲಿ, ನೀರಿನ ತೊಟ್ಟಿ ನಿರ್ಮಿಸಲು ಸೂಚನೆ ನೀಡಲಾಗುವುದು ಎಂದು ರೋಣ ಪಂ ಇಒ ಸಂತೋಷ ಪಾಟೀಲ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios