'ಸಿದ್ದು ವ್ಯಕ್ತಿತ್ವ ಹೇಗಿದೆ ಅಂತ ನೀವೇ ತೂಕಮಾಡಿ, ಅವರೆಂತ ನಾಯಕ ಅನ್ನೋದು ನಿಮಗೇ ಗೊತ್ತಾಗುತ್ತೆ'
ಸಿಎಂ ವಿರುದ್ಧ ಈಶ್ವರಪ್ಪ ಹೈಕಮಾಂಡ್‌ಗೆ ದೂರು ನೀಡಿದ್ದು ಸರಿಯಲ್ಲ| ಭಿನ್ನಾಭಿಪ್ರಾಯವಿದ್ದರೂ ಇಬ್ಬರೂ ಕೂತು ಬಗೆಹರಿಸಿಕೊಳ್ಳಬೇಕಿತ್ತು| ಕೋವಿಡ್ ಹಿನ್ನೆಲೆಯಲ್ಲಿ ಅನುದಾನದಲ್ಲಿ ಅಲ್ಪ ಸ್ವಲ್ಪ ತೊಂದರೆಯಾಗಿದೆ. ಅದಕ್ಕೆ ಬಹಿರಂಗವಾಗಿ ಮಾತನಾಡಿದ್ದು ಎಷ್ಟು ಸರಿ?: ಸಿ.ಸಿ. ಪಾಟೀಲ್|
ಗದಗ(ಏ.02): ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯರು, ಪ್ರಮುಖ ನಾಯಕರು. ಆದರೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುವುದು, ಹೈಕಮಾಂಡ್‌ಗೆ ದೂರು ನೀಡುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ ವಿಷಾಧಿಸಿದರು.
ಗುರುವಾರ ಸಂಜೆ ಗದಗ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯಪಾಲರು, ಸೆಂಟ್ರಲ್ ಹೈಕಮಾಂಡ್‌ಗೆ ಈಶ್ವರಪ್ಪ ದೂರು ನೀಡಬಾರದಿತ್ತು. ಇದರಿಂದ ಏನೂ ಪ್ರಯೋಜನವಿಲ್ಲ. ವಿನಾಕಾರಣ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ಈಶ್ವರಪ್ಪ, ಯಡಿಯೂರಪ್ಪ ಇಬ್ಬರೂ ಒಂದೆ ಜಿಲ್ಲೆಯವರು. ಭಿನ್ನಾಭಿಪ್ರಾಯಗಳಿದ್ದರೆ, ಇಬ್ಬರೂ ಕೂತು ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಉಪ ಚುನಾವಣೆ ವೇಳೆಯಲ್ಲಿ ಈ ರೀತಿ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ರಾಜ್ಯಪಾಲರಿಗೆ ಹಾಗೂ ಪಕ್ಷದ ವರಿಷ್ಠರಿಗೆ ದೂರು ಕೊಟ್ಟಿರುವುದನ್ನು ಖಂಡಿಸುತ್ತೇನೆ. ಅವರಂಥ ನಾಯಕರು ಯಾಕೆ ಹೀಗೆ ಮಾಡಿದರು, ಶಾಸಕರಿಗೆ ಮುಖ್ಯಮಂತ್ರಿಗಳು ಅನುದಾನ ನೀಡುವುದೇ ತಪ್ಪೇ? ಕೋವಿಡ್ ಹಿನ್ನೆಲೆಯಲ್ಲಿ ಅನುದಾನದಲ್ಲಿ ಅಲ್ಪ ಸ್ವಲ್ಪ ತೊಂದರೆಯಾಗಿದೆ. ಅದಕ್ಕೆ ಬಹಿರಂಗವಾಗಿ ಮಾತನಾಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ವಸತಿ ಶಾಲೆಯಲ್ಲಿ ಕೊರೋನಾ ಸ್ಫೋಟ: ಪೋಷಕರಲ್ಲಿ ಹೆಚ್ಚಾದ ಆತಂಕ..!
ಈ ಬೆಳವಣಿಗೆಯ ನಂತರ ಈಶ್ವರಪ್ಪ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಟೀಕೆ ಮಾಡಿದ್ರೆ ಈಶ್ವರಪ್ಪನಿಗೆ ಮೆದುಳಿಲ್ಲ ಅನ್ನೋದು. ನಮ್ಮ ಪಕ್ಷದ ಬಗ್ಗೆ ಮಾತನಾಡಿದಾಗ ಶಹಬಾಷ್ ಹೇಳುವುದು. ಇದು ಸಿದ್ದರಾಮಯ್ಯನವರ ವ್ಯಕ್ತಿತ್ವ ಹೇಗಿದೆ ಅಂತ ನೀವೇ ತೂಕಮಾಡಿ, ಅವರೆಂತಾ ನಾಯಕರು ಎನ್ನುವುದು ನಿಮಗೇ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಡಿಕೆಶಿ ವಿರುದ್ಧವೂ ಹರಿಹಾಯ್ದ ಅವರು, ಡಿಕೆಶಿ ಮೊದಲು ಸಿಡಿ ಲೇಡಿ ಹಗರಣದ ಬಗ್ಗೆ ಸಮರ್ಪಕವಾದ ಉತ್ತರ ಕೊಡಲಿ. ಸಿಡಿ ಹಗರಣದಲ್ಲಿ ಅವರ ಪಾತ್ರ ಏನು ಅದರ ಬಗ್ಗೆ ಉತ್ತರಿಸಲಿ. ಅದು ನನಗೆ ಸಂಬಂಧಿಸಿಲ್ಲ ಅಂತ ತಳ್ಳಿ ಹಾಕೋದು ಬಿಡ್ಲಿ, ಮೊದಲು ತಮ್ಮ ಪಕ್ಷ ಭದ್ರಮಾಡಿಕೊಳ್ಳಲಿ. ಯಡಿಯೂರಪ್ಪನವರ ಸರ್ಕಾರ ಅತ್ಯಂತ ಸುಭದ್ರ ಇದೆ ಎಂದರು.
ಸುದ್ದಿಗೋಷ್ಠಿನಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ, ಎಂ.ಎಸ್. ಕರಿಗೌಡ್ರ, ಪ್ರಶಾಂತ ನಾಯ್ಕರ, ಅನಿಲ ಅಬ್ಬಿಗೇರಿ ಮುಂತಾದವರು ಹಾಜರಿದ್ದರು.
ಗದಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹರಡುತ್ತಿರುವ ವೇಳೆಯಲ್ಲಿ ಹೋಳಿ ಆಚರಣೆಗೆ ಅವಕಾಶ ನೀಡಬೇಕು ಎಂದು ಎಚ್.ಕೆ. ಪಾಟೀಲ ಅವರಂತ ಹಿರಿಯ ನಾಯಕರು ಸಿಎಂಗೆ ಪತ್ರ ಬರೆದಿರುವುದು ತೀರಾ ಹಾಸ್ಯಾಸ್ಪದ ಸಂಗತಿ. ಕಳೆದ ಬಾರಿ ಕೊರೋನಾ ಪ್ರಕರಣ ಪತ್ತೆಯಾದ ವೇಳೆಯಲ್ಲಿ ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ್ದ ಎಚ್.ಕೆ.ಪಾಟೀಲರು ಈಗ 2ನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಹೋಳಿ ಮೆರವಣಿಗೆಗೆ ಅವಕಾಶ ನೀಡಬೇಕು ಎನ್ನುವುದು ಎಷ್ಟು ಸರಿ ಎಂದು ಗದಗಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.