ರೋಣ: ಬಿಎಸ್‌ಎಫ್ ಸೇರಿದ ಕವಿತಾ, ಸೇನೆಗೆ ಆಯ್ಕೆಯಾದ ಗದಗ ಜಿಲ್ಲೆಯ ಪ್ರಥಮ ಯುವತಿ..!
ಗದಗ ಜಿಲ್ಲೆಯ ರೋಣ ತಾಲೂಕಿನ ಕವಿತಾ ಹವಾಜಿ ಸೇನೆಗೆ ಆಯ್ಕೆ| ಓದಿದ್ದು ಬಿಎ, ಬಿಇಡಿ. ಶಿಕ್ಷಕಳಾಗಬೇಕು ಎಂಬ ಗುರಿ ಹೊಂದಿದ ಕವಿತಾಗೆ ಒಲಿದು ಬಂದಿದ್ದು ಸೈನಿಕಳಾಗುವ ಭಾಗ್ಯ| ಸೇನೆ ಸೇರಲು ಕವಿತಾಗೆ ಅಣ್ಣ, ತಮ್ಮ, ತಂದೆ, ತಾಯಿ, ಗೆಳತಿಯರೇ ಪ್ರೇರಣೆ|
ರೋಣ(ಏ.03): ಗಂಡು ಮಕ್ಕಳನ್ನೇ ಸೇನೆಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಪಾಲಕರ ಮಧ್ಯೆ ತಾಲೂಕಿನ ಹಿರೇಹಾಳದ 23ರ ಯುವತಿ ಕವಿತಾ ಹವಾಜಿ ಸೇನೆ (ಬಿಎಸ್‌ಎಫ್) ಸೇರುವ ಮೂಲಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
ಜಿಲ್ಲೆಯಲ್ಲಿಯೇ ಬಿಎಸ್‌ಎಫ್ ಸೇರಿದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಕವಿತಾ ಪಾತ್ರಳಾಗಿದ್ದಾರೆ. ಓದಿದ್ದು ಬಿಎ, ಬಿಇಡಿ. ಶಿಕ್ಷಕಳಾಗಬೇಕು ಎಂಬ ಗುರಿ ಹೊಂದಿದ ಕವಿತಾಗೆ ಒಲಿದು ಬಂದಿದ್ದು ಸೈನಿಕಳಾಗುವ ಭಾಗ್ಯ. ಚಿಕ್ಕವಳಿದ್ದಾಗ ತನ್ನ ಮನೆ ಸುತ್ತಲೂ ಸೇನೆ ಸೇರಿದವರ ಒಟನಾಡದಲ್ಲಿ ಬೆಳೆದ ಕವಿತಾಗೆ, ತನ್ನ ಅಣ್ಣ ಸಿದ್ದಪ್ಪ ಹವಾಜಿ ಕಳೆದ 7 ವರ್ಷದಿಂದ ಸಿಆರ್‌ಪಿಎಫ್‌ನಲ್ಲಿದ್ದು ಅವನಂತೆ ತಾನಾಗಬೇಕೆಂದು ಕನಸು ಕಟ್ಟಿಕೊಂಡ ಕವಿತಾಳಿಗೆ ಸೇನೆ ಸೇರುವ ಅವಕಾಶ ಸಿಕ್ಕಿದೆ. ಅಣ್ಣ ಸಿದ್ದಪ್ಪ, ತಂದೆ, ತಾಯಿ, ತಮ್ಮನ ಸ್ಫೂರ್ತಿ, ಪ್ರೇರಣೆಯಿಂದ ಕವಿತಾ ಸೇನೆ ಸೇರಿದ್ದಾಳೆ. ಶಾಲಾ, ಕಾಲೇಜು ಹಂತದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೊಲೀಸ್ ಮತ್ತು ಸೈನಿಕ ಪಾತ್ರಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕವಿತಾ, ವಿದ್ಯಾರ್ಥಿ ದಿಶೆಯಿಂದಲೇ ದೇಶಕ್ಕಾಗಿ ದುಡಿವ ಹಂಬಲ ಹೊಂದಿದ್ದಳು. ಅದರಂತೆ ಬಿಎಸ್‌ಎಫ್ ನೇಮಕಾತಿಗೆ ಅರ್ಜಿ ಸಲ್ಲಿಸಿ ಆಯ್ಕೆಯೂ ಆಗಿದ್ದಾಳೆ. ಬೆಂಗಳೂರಿನ ಯಲಹಂಕದಲ್ಲಿರುವ ಬಿಎಸ್‌ಎಫ್ ತರಬೇತಿ ಶಿಬಿರಕ್ಕೆ ಸೋಮವಾರ ತೆರಳಿದ್ದಾಳೆ.
ಗಡಿ ಭದ್ರತಾ ಸೇವೆಗೆ ಕೊಪ್ಪಳದ ರೇಷ್ಮಾ ಮಹೇಶ, ವೀಣಾದೇವಿ
ಅಪ್ಪ ಲಾರಿ ಡ್ರೈವರ್, ಅಣ್ಣ ಪೊಲೀಸ್
ಮಾಗುಂಡಪ್ಪ, ಲಕ್ಷ್ಮವ್ವ ದಂಪತಿಗೆ ಮೂವರು ಮಕ್ಕಳು. ತಂದೆ ಮಾಗುಂಡಪ್ಪ ಲಾರಿ ಡ್ರೈವರ್. ನನ್ನ ಮಕ್ಕಳು ದೇಶದ ಮಕ್ಕಳಾಗಲಿ ಎಂದು ಮಾಗುಂಡಪ್ಪ ನಿತ್ಯದೇಶಭಕ್ತಿ ಪಾಠ ಮಾಡುತ್ತಿದ್ದರಂತೆ. ತನ್ನ ಮೂವರು ಮಕ್ಕಳಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ, ಮಗಳು ಬಿಎಸ್‌ಎಫ್ ಸೇನಾನಿ. ನನ್ನ ಮಕ್ಕಳು ದೇಶ ಸೇವೆಯಲ್ಲಿ ಗೆದ್ದು ಬರಲಿ, ಅವರು ದೇಶದ ಮಕ್ಕಳು ಎಂದು ತಂದೆ ಮಾಗುಂಡಪ್ಪ, ತಾಯಿ ಲಕ್ಷ್ಮವ್ವ ಭಾವುಕರಾದರು.
ನಾನು ಶಿಕ್ಷಕಿಯಾಗಬೇಕೆಂದು ಬಿಎ, ಬಿಇಡಿ ಮಾಡಿದೆ. ಆದರೆ ಶಿಕ್ಷಕ ವೃತ್ತಿಯಷ್ಟೆಪವಿತ್ರ, ಶ್ರೇಷ್ಠವಾದ ಹುದ್ದೆ ಸೈನಿಕ. ಬಾಲ್ಯದಿಂದಲೂ ನನಗೆ ಸೈನಿಕರ ಮೇಲೆ ಅಪಾರ ಗೌರವವಿತ್ತು. ಸೇನೆ ಸೇರಲು ನನಗೆ ನನ್ನ ಅಣ್ಣ, ತಮ್ಮ, ತಂದೆ, ತಾಯಿ, ಗೆಳತಿಯರೇ ಪ್ರೇರಣೆ ಎಂದು ಬಿಎಸ್‌ಎಫ್ ಸೇರಿದ ಯುವತಿ ಕವಿತಾ ಹವಾಜಿ ತಿಳಿಸಿದ್ದಾರೆ.
ನನ್ನ ಗೆಳತಿ ಕವಿತಾ ಸೇನೆ ಸೇರಿದ್ದು ನಮಗೆಲ್ಲ ಬಾಳಾ ಖುಷಿ ತಂದಿದೆ. ದೇಶೆ ಸೇವೆ ಮಾಡಲು ನಾವೆಲ್ಲ ಪುಣ್ಯಾ ಮಾಡಿರಬೇಕು. ಆ ಸೇವಾಕಾಶ ನನ್ನ ಗೆಳತಿಗೆ ಸಿಕ್ಕಿದ್ದು ಹೆಮ್ಮೆಯಾಗುತ್ತಿದೆ ಎಂದು ಕವಿತಾಳ ಗೆಳತಿ ವೀರಮ್ಮ ಗಾಣಿಗೇರ (ಮೂಲಿಮನಿ) ಹೇಳಿದ್ದಾರೆ.