ದಾವಣಗೆರೆ: ವಿದೇಶಿ ಮಹಿಳೆಗೆ ಭವಿಷ್ಯ ಹೇಳಿ 9 ಲಕ್ಷ ಕಳೆದುಕೊಂಡ ಜ್ಯೋತಿಷಿ!
ಅಮೆರಿಕ ಮಹಿಳೆಗೆ ಡೈವೋರ್ಸ್ ಬಗ್ಗೆ ಜ್ಯೋತಿಷ್ಯ ಹೇಳಿದ ಪೋಸ್ಟ್ ಮ್ಯಾನ್| ಕ್ಯಾಲಿಫೋರ್ನಿಯಾ ಮೂಲದ ರಚೇಲ್ ಡಿನಿಜ್ ಮತ್ತಿತರ ನಾಲ್ವರಿಂದ ವಂಚನೆ| ಜ್ಯೋತಿಷಿಗೆ 9 ಲಕ್ಷ ರೂ. ಟೋಪಿ ಹಾಕಿದ ಅಮೆರಿಕದ ಮಹಿಳೆ|
ದಾವಣಗೆರೆ(ಆ.22): ವೃತ್ತಿಯಲ್ಲಿ ಪೋಸ್ಟ್‌ಮ್ಯಾನ್, ಪ್ರವೃತ್ತಿಯಲ್ಲಿ ಜ್ಯೋತಿಷಿಯಾದ ವ್ಯಕ್ತಿಯೊಬ್ಬರು 20 ಸಾವಿರ ಡಾಲರ್ ಆಸೆಗೆ ಬಿದ್ದು ಅಮೆರಿಕದ ಕ್ಯಾಲಿಫೋರ್ನಿಯಾ ಮಹಿಳೆಗೆ ಜ್ಯೋತಿಷ್ಯ ಸಲಹೆ ನೀಡಿ, 9,20,060 ಕಳೆದುಕೊಂಡ ಘಟನೆ ಜಗಳೂರು ತಾಲೂಕಿನಲ್ಲಿ ನಡೆದಿದೆ.
ಜಗಳೂರು ತಾಲೂಕಿನ ಗಡಿಮಾಕುಂಟೆ ನಿವಾಸಿ, ಪೋಸ್ಟ್ ಮ್ಯಾನ್ ಬಿ.ಎಂ.ವಿರೂಪಾಕ್ಷಯ್ಯ (30) ಹಣ ಕಳೆದುಕೊಂಡ ಜ್ಯೋತಿಷಿ. ವೃತ್ತಿಯಲ್ಲಿ ಪೋಸ್ಟ್ ಮ್ಯಾನ್ ಆಗಿರುವ ವಿರೂಪಾಕ್ಷಯ್ಯ ಜ್ಯೋತಿಷ್ಯ ಹೇಳುವ ಕುಟುಂಬ ಹಿನ್ನಲೆ ಹೊಂದಿದ್ದರು.
ಕ್ಯಾಲಿಫೋರ್ನಿಯಾ ನಿವಾಸಿ ಎನ್ನಲಾದ ರಚೇಲ್ ಡಿನಿಜ್ ಎಂಬಾಕೆ ಹಾಗೂ ಇತರೇ ನಾಲ್ವರಿಂದ ಆನ್‌ಲೈನ್‌ನಲ್ಲಿ 9.20 ಲಕ್ಷಕ್ಕೂ ಅಧಿಕ ಹಣವನ್ನು ವಿರೂಪಾಕ್ಷಯ್ಯ ಕಳೆದುಕೊಂಡಿದ್ದಾರೆ. ವಿರೂಪಾಕ್ಷಯ್ಯ ಅಣಜಿ ಗ್ರಾಮದಲ್ಲಿ ಗುತ್ತಿಗೆ ಆಧಾರದಲ್ಲಿ ಪೋಸ್ಟ್‌ಮ್ಯಾನ್ ಆಗಿದ್ದಾರೆ. ಈಗ ತಮ್ಮ ಹಣವನ್ನು ವಂಚಕರಿಂದ ವಾಪಾಸ್ ಕೊಡಿಸುವಂತೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
'ಡಿಕೆಶಿ ದೆಹಲಿಗೆ ಹೋಗುತ್ತಾರೆ : ಪ್ರಧಾನಿ ಆಗಲು ಹೋಗಿದ್ದಾರೆನ್ನಲಾಗದು'
ಜ್ಯೋತಿಷ್ಯ ಹೇಳುವ ಕುಟುಂಬದ ವಿರೂಪಾಕ್ಷಪ್ಪ ಫೇಸ್‌ಬುಕ್‌ನಲ್ಲಿ ಆಸ್ಟ್ರಾಲಜಿ ಗೈಡೆನ್ಸ್ ಗ್ರೂಪ್‌ನಲ್ಲಿ 2 ವರ್ಷಗಳ ಹಿಂದೆ ಸೇರಿದ್ದರು. ಕೆಲವರು ಆನ್‌ಲೈನ್ ಮೂಲಕ ಸಮಸ್ಯೆಗೆ ಪರಿಹಾರ ಕೋರಿದ್ದರು. ಅದರಂತೆ ಆನ್‌ಲೈನ್ ಮೂಲಕ ಸಲಹೆ, ಮಾರ್ಗದರ್ಶನ ನೀಡುತ್ತಿದ್ದರು. ಮೇ 2019ರಲ್ಲಿ ಕ್ಯಾಲಿಫೋರ್ನಿಯಾದ ರಿಚೆಲ್ ಡಿನಿಜ್ ವೈವಾಹಿಕ ಜೀವನದಲ್ಲಿ ಡೈವೋರ್ಸ್ ಸಮಸ್ಯೆಗೆ ಪರಿಹಾರ ಕೋರಿದ್ದರು. ಅದಕ್ಕೆ 20.4.2020ರ ಹೊತ್ತಿಗೆ ನಿಮ್ಮ ಸಮಸ್ಯೆ ಪರಿಹಾರ ಕಾಣುತ್ತದೆ ಎಂದು ವಿರೂಪಾಕ್ಷಯ್ಯ ಭವಿಷ್ಯ ನುಡಿದಿದ್ದರು. ಪುನಾ ವಿರೂಪಾಕ್ಷಯ್ಯಗೆ ಜು.30ರಂದು ಆಕೆ ಪೋಸ್ಟ್ ಮಾಡಿ, ವೈವಾಹಿಕ ಜೀವನದಲ್ಲಿ ಡೈವೋರ್ಸ್ ಸಮಸ್ಯೆಗೆ ಪರಿಹಾರ ನೀಡಿದ್ದಾರೆಂದು ಬರೆದು, ಅಪ್‌ಲೋಡ್ ಮಾಡಿದ್ದರು. ನಿಮಗೆ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದ ವಿರೂಪಾಕ್ಷಯ್ಯಗೆ ಕಾಣಿಕೆಯಾಗಿ 20 ಸಾವಿರ ಡಾಲರ್ ಹಣವನ್ನು ನಿಮ್ಮ ಖಾತೆಗೆ ಕಳಿಸುವುದಾಗಿ ಆಕೆ ನಂಬಿಸಿದ್ದಾಳೆ.
ಬಳಿಕ ಬ್ಯಾಂಕ್ ಖಾತೆ ನಂಬರ್, ಬ್ಯಾಂಕ್ ಹೆಸರು, ಐಎಫ್‌ಎಸ್‌ಸಿ ಕೋಡ್ ಎಲ್ಲವನ್ನೂ ಪಡೆದುಕೊಂಡ ಆಕೆ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್ ಇಂಡಿಯಾದಿಂದ 20 ಸಾವಿರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿದ್ದಾಗಿ ಇಮೇಲ್ ಮಾಡಿದ್ದಾಳೆ. ಅನಂತರ ವಿರೂಪಾಕ್ಷಯ್ಯ ಮೊಬೈಲ್‌ಗೆ ಮತ್ತೊಬ್ಬ ಅಪರಿಚಿತ ಮಹಿಳೆ ಕರೆ ಮಾಡಿ, ಹಿಂದಿ, ಇಂಗ್ಲಿಷ್‌ನಲ್ಲಿ ಮಾತನಾಡಿ, ತಾನು ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್‌ನ ನವದೆಹಲಿ ಶಾಖೆ ಸಿಬ್ಬಂದಿ ಅಂತಾ ಪರಿಚಯಿಸಿಕೊಂಡು, 20 ಸಾವಿರ ಹಣವನ್ನು ಕ್ಯಾಲಿಫೋರ್ನಿಯಾದ ಮಹಿಳೆ ಕಳಿಸಿದ್ದಾರೆ ಎಂದು ನಂಬಿಸಿದ್ದಾಳೆ. ಅಲ್ಲದೇ, ತನ್ನ ವಾಟ್ಸಪ್ ನಂಬರ್‌ಗೆ ಫೋಟೋ, ಗುರುತಿನ ಪತ್ರ ಕಳಿಸಲು ಹೇಳಿದ್ದಾಳೆ. ಅದನ್ನು ನಂಬಿದ ವಿರೂಪಾಕ್ಷಯ್ಯ ಅದೇ ರೀತಿ ಮಾಡಿದ್ದಾರೆ.
ಖಾತೆ ತೆರೆಯಲು 25,900 ಜಮಾ ಮಾಡುವಂತೆ ಖಾತೆ ನಂಬರ್, ಇಮೇಲ್ ಲಿಂಕ್ ಕಳಿಸುವುದಾಗಿ ಹೇಳಿದ್ದಾಳೆ. ತನ್ನಲ್ಲಿ ಹಣ ಇಲ್ಲದಿದ್ದರೂ ವಿರೂಪಾಕ್ಷಯ್ಯ ತನ್ನ ಸಹೋದರಿ, ಸ್ನೇಹಿತರಿಂದ ಹಣ ಪಡೆದು, ವಂಚಕರು ಹೇಳಿದಂತೆ ಗೂಗಲ್ ಪೇ ಮತ್ತು ಪೋನ್ ಪೇ ಆ್ಯಪ್, ಬ್ಯಾಂಕಿಂಗ್ ನೆಫ್ಟ್ ಮೂಲಕ ಹಣ ಕಳಿಸಿದ್ದಾರೆ. ಹಂತ ಹಂತವಾಗಿ ಒಟ್ಟು 9,20,060 ಪಡೆದ ಆನ್‌ಲೈನ್ ವಂಚಕರು ಬಳಿಕ ವಿರೂಪಾಕ್ಷಯ್ಯಗೆ ಕೈ ಕೊಟ್ಟಿದ್ದಾರೆ. ಕೊನೆಗೂ ತಾವು ವಂಚನೆಗೆ ಒಳಗಾಗಿದ್ದು ತಡವಾಗಿ ತಿಳಿದ ಜ್ಯೋತಿಷಿ ವಿರೂಪಾಕ್ಷಯ್ಯ ಅವರು ಈಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಭೀಮಾ ತೀರದಲ್ಲಿ ಏನಾಗ್ತಿದೆ? ಭಾಗಪ್ಪ ಇನ್, ಸಾಹುಕಾರ ಔಟ್!...
"