'ಡಿಕೆಶಿ ದೆಹಲಿಗೆ ಹೋಗುತ್ತಾರೆ : ಪ್ರಧಾನಿ ಆಗಲು ಹೋಗಿದ್ದಾರೆನ್ನಲಾಗದು'
ಕೃಷಿ ಸಚಿವ ಬಿ.ಸಿ.ಪಾಟೀಲ್ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದರು. ಈ ವೇಳೆ ರಾಜ್ಯದ ವಿವಿಧ ರಾಜಕೀಯ ವಿಚಾರಗಳ ಬಗ್ಗೆ ಸಚಿವರು ಪ್ರಸ್ತಾಪಿಸಿದರು.
ಹೊನ್ನಾಳಿ (ಆ.19): ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂಬುದು ತಮ್ಮ ಒತ್ತಾಯವಾಗಿದೆ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಠಿಯಿಂದ ಸ್ಥಳೀಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ, ಜಿಲ್ಲೆಯ ಉಸ್ತುವಾರಿ ವಹಿಸಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತರಿದ್ದಲ್ಲಿಗೇ ಬರುತ್ತೆ ಕೃಷಿ ಆರೋಗ್ಯ ವಾಹನ: ದೇಶದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಜಾರಿ...
ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿದ ಸಚಿವರು, ರಮೇಶ್ ಜಾರಕಿಹೊಳಿ ಅನ್ಯ ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲು ಹೋಗಿರಬಹುದು. ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಚರ್ಚಿಸಲು ನಾನೂ ದೆಹಲಿಗೆ ಹೋಗಬೇಕು ಅಂದುಕೊಂಡಿದ್ದೇನೆ. ಹಾಗಾಗಿ, ಅವರು ದೆಹಲಿಗೆ ಹೋದ ತಕ್ಷಣ ಇಲ್ಲಸಲ್ಲದ ಊಹೆಗಳನ್ನು ಮಾಡುವುದು ತಪ್ಪು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ದೆಹಲಿಗೆ ಹೋಗುತ್ತಾರೆ. ಅಂದಾಕ್ಷಣ ಅವರು ಪ್ರಧಾನಮಂತ್ರಿ ಆಗಲಿಕ್ಕೆ ದೆಹಲಿಗೆ ಹೋಗಿದ್ದಾರೆ ಎಂದು ಹೇಳಲು ಆಗುತ್ತದೆಯೇ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.
ಗೃಹ ಸಚಿವ, ಸಿಎಂ ಯಾರೆಂದು ಗೊತ್ತಿಲ್ಲದೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೇ?
ಪ್ರವಾಹದಿಂದ ರಾಜ್ಯದಲ್ಲಿನ ಬೆಳೆಹಾನಿಗೆ ಸಂಬಂಧಿಸಿದಂತೆ 400 ಕೋಟಿ ರು. ಪರಿಹಾರ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಶೀಘ್ರವೇ ಇನ್ನೊಮ್ಮೆ ಒತ್ತಡ ಹೇರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಜಿಪಂ ಸದಸ್ಯರಾದ ಎಂ.ಆರ್. ಮಹೇಶ್, ಉಮಾ ರಮೇಶ್, ಸಿ.ಸುರೇಂದ್ರ ನಾಯ್ಕ, ತಾಪಂ ಪ್ರಭಾರ ಅಧ್ಯಕ್ಷ ಕೆ.ಎಲ್. ರಂಗನಾಥ್, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಎಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಪಪಂ ಸದಸ್ಯರು, ಮುಖಂಡರಾದ ಶಾಂತರಾಜ್ ಪಾಟೀಲ್, ಎಂ.ಪಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.